ಅನುದಾನ ದುರ್ಬಳಕೆ ಮಾಡಿಲ್ಲ: ಘೋರ್ಪಡೆ
ಕನ್ನಡಪ್ರಭ ವಾರ್ತೆ, ರೋಣ, ಆ. 2
ತೋಟಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಹಣ್ಣು ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡದೇ ಇಲಾಖೆಯವರು ಸತಾಯಿಸುತ್ತಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಇಲಾಖೆ ಅನುದಾನವನ್ನು ದುರ್ಬಳಕೆ ಮಾಡಿಲ್ಲ ಎಂದು ವಸಂತ ಮಾವು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅಜಿತಸಿಂಗ್ ಘೋರ್ಪಡೆ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕೆಲವೇ ಜನರು ನಿರಂತರವಾಗಿ ತೋಟಗಾರಿಕೆ ಇಲಾಖೆಯಿಂದ ಸಿಗುವ ಲಾಭ ಪಡೆಯುತ್ತಿದ್ದರು. ಅದನ್ನು ಹೋಗಲಾಡಿಸಿ ಎಲ್ಲ ಹಣ್ಣು ಬೆಳೆಗಾರರಿಗೂ ಅನೂಕೂಲವಾಗುವ ಉದ್ದೇಶದಿಂದ 2013-14ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಹಣ್ಣು ಬೆಳೆಗಾರರ ಸಮೀಕ್ಷೆ ನಡೆಸಿದರು. ಆ ಸಂದರ್ಭದಲ್ಲಿ ಸೂಡಿ ಹಾಗೂ ಗಜೇಂದ್ರಗಡ ಭಾಗದಲ್ಲಿ ಹೊಸ ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಚೈತ್ರಾ ಚಿಕ್ಕು ಬೆಳೆಗಾರರ ಸಂಘ ಹಾಗೂ ರಾಜೂರ ಗ್ರಾಮದಲ್ಲಿ ವಸಂತ ಮಾವು ಬೆಳೆಗಾರರ ಸಂಘ ಸ್ಥಾಪಿಸಲಾಯಿತು.
ಇಲಾಖೆಯ ಅನುದಾನ ಪೋಲಾಗದ ರೀತಿಯಲ್ಲಿ ಎರಡು ಸಂಘಗಳಿಗೆ ಅನುದಾನ ನೀಡಿದ್ದು, ಸಂಘದ ರೈತರು ಉತ್ತಮವಾದ ಚಿಕ್ಕು ಮತ್ತು ಮಾವು ಬೆಳೆದಿದ್ದಾರೆ. ಈ ಎರಡೂ ಸಂಘಗಳು ಜಿಲ್ಲೆಯಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇಲಾಖೆಯಲ್ಲಿ ಅವ್ಯವಹಾರ ಜರುಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ನಿಜವಾದ ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ. ಅನಾವಶ್ಯಕವಾಗಿ ತೋಟಗಾರಿಕೆ ಇಲಾಖೆ ಮೇಲೆ ಆರೋಪ ಮಾಡುತ್ತಿದ್ದಾರೆ. ಇಲಾಖೆ ರೈತರಿಗೆ ಸರಿಯಾಗಿಯೇ ಮಾಹಿತಿ ನೀಡುತ್ತಾ ಬಂದಿದೆ. ಭ್ರಷ್ಟಾಚಾರ ನಡೆದಿದೆ ಎಂಬುದು ಹಾಸ್ಯಾಸ್ಪದ ಸಂಗತಿ. ಅನಾವಶ್ಯಕ ಆರೋಪ ಮಾಡಿದಲ್ಲಿ ಅಂಥವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಕರವಳ್ಳಿ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಇಲ್ಲಿಯವರೆಗೆ ಹಣ್ಣು ಬೆಳೆಗಾರರು ಹಣ ತುಂಬುವಂತೆ ಯಾವುದೇ ನೋಟಿಸ್ ಬಂದಿಲ್ಲ. ಅಲ್ಲದೇ ಸಂಘದ ಅಧ್ಯಕ್ಷರ ಗಮನಕ್ಕೆ ಬಾರದೇ ನೋಟಿಸ್ ರೈತರಿಗೆ ನೇರವಾಗಿ ಹೋಗುವುದಿಲ್ಲ. ಆರೋಪ ಮಾಡುವವರು ಇದನ್ನು ತಿಳಿದುಕೊಳ್ಳಲಿ. ರೈತರ ದಾರಿ ತಪ್ಪಿಸುವ ಹೇಳಿಕೆ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಸಲ್ಲದು ಎಂದರು. ಹಣ್ಣು ಬೆಳೆಗಾರರಾದ ರಾಮಚಂದ್ರ ಹುದ್ದಾರ, ಶಿವರಾಜ ಘೋರ್ಪಡೆ, ದ್ಯಾಮಣ್ಣ ವದೆಗೋಳ, ಎಸ್.ಕೆ. ಬಳಿಗೇರ, ಎಸ್.ವೈ.ಚೋರಗಸ್ತಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

