ಸ್ಮಾರ್ಟ್ ಕ್ಲಾಸ್ ಚಿಂತನೆ ನೆನೆಗುದಿಗೆ!
ಕನ್ನಡಪ್ರಭ ವಾರ್ತೆ, ಗದಗ, ಆ. 12
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಅವರಿಗೂ ಖಾಸಗಿಯಲ್ಲಿ ಸದ್ಯ ಪ್ರಮುಖವಾಗಿ ಬಳಕೆಯಾಗುತ್ತಿರುವ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಚಿಂತನೆ ನಡೆದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರತಿ ಜಿಪಂ ಕ್ಷೇತ್ರದ 2 ಶಾಲೆಗಳಿಗೆ ಅಳವಡಿಸಿ, ನಂತರ ಅದನ್ನು ಪ್ರತಿ ಶಾಲೆಗೂ ವಿಸ್ತರಿಸಲು ಅಂದಿನ ಸಚಿವರ ಸಮ್ಮುಖದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಿ ಸೂಚಿಸಿ, ವರ್ಷ ಗತಿಸುತ್ತಾ ಬಂದರೂ ಯೋಜನೆ ಮಾತ್ರ ಅನುಷ್ಠಾನವಾಗಿಲ್ಲ.
ಗದಗ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ 616 ಸರ್ಕಾರಿ ಪ್ರಾಥಮಿಕ ಹಾಗೂ 106 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಪ್ರಾಥಮಿಕ ಶಾಲೆಗಳಲ್ಲಿ 1 ಲಕ್ಷ 54 ಸಾವಿರ ಮಕ್ಕಳು ಹಾಗೂ ಪ್ರೌಢ ಶಾಲೆಗಳಲ್ಲಿ 30 ಸಾವಿರಕ್ಕೂ ಅಧಿಕ ಮಕ್ಕಳು ಅಭ್ಯಸಿಸುತ್ತಿದ್ದಾರೆ. ಇವರಿಗೂ ಇಂದು ಖಾಸಗಿ ಶಾಲೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಿರುವ ಸ್ಮಾರ್ಟ್ ಕ್ಲಾಸ್ಗಳನ್ನು ಅಳವಡಿಸಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಇನ್ನಿತರ ಮಕ್ಕಳಿಗಿಂತ ಹೆಚ್ಚಿನ ಜ್ಞಾನ ಪಡೆಯುವ ನಿಟ್ಟಿನಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಚಿಂತಿಸಿ 2012ರ ಆಗಸ್ಟ್ 21ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಠರಾವು ಪಾಸು ಮಾಡಿ, ಆಯಾ ಜಿಪಂ ಸದಸ್ಯರಿಗೆ ಮೌಖಿಕ ಸೂಚನೆ ನೀಡಲಾಗಿತ್ತು.
ನೆನೆಗುದಿಗೆ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಎನ್ನುವ ರೀತಿ ಇಂತಹ ಚಿಂತನೆ ಮಾಡಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಂತರ ಅದನ್ನೇಕೆ ಕೈ ಚೆಲ್ಲಿದರು. ಒಂದು ವರ್ಷದಲ್ಲಿ ಸ್ಮಾರ್ಟ್ ಕ್ಲಾಸ್ ಕುರಿತು ಯಾವುದೇ ಸಭೆಗಳಾಗಲಿ, ಚರ್ಚೆಗಳಾಗಲಿ ನಡೆಯಲೇ ಇಲ್ಲ. ಇನ್ನು ಬದಲಾದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಹಾಗಾಗಿ ಹಿಂದಿನ ಅವಧಿಯಲ್ಲಿ ಅದು, ಎಷ್ಟೇ ಮಹತ್ವದ ಹಾಗೂ ಉಪಯುಕ್ತದ ನಿರ್ಧಾರ ತೆಗೆದುಕೊಂಡಿದ್ದರೂ ಅದನ್ನು ಮುಂದುವರಿಸಿಕೊಂಡು ಹೋಗುವ ಚಿಂತನೆ ನೂತನ ಶಾಸಕರಿಗಿಲ್ಲ. ಹಾಗಾಗಿ ಸ್ಮಾರ್ಟ್ ಕ್ಲಾಸ್ ನೆನೆಗುದಿಗೆ ಬಿದ್ದಿದೆ.
ರಾಜಕೀಯ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೂ, ಗದಗ ಜಿಪಂನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಂದು ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರಿಂದ ಜಿಪಂ ಸದಸ್ಯರು ಪ್ರಾಯೋಗಿಕವಾಗಿ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ 2 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ಗಳನ್ನು ಅಳವಡಿಸಲು ಒಪ್ಪಿಕೊಂಡಿದ್ದರು. ಆದರೆ, ಇಂದು ಕಾಂಗ್ರೆಸ್ನ ಶಾಸಕರಿರುವುದರಿಂದ ಜಿಪಂ ಸದಸ್ಯರು ಇದರ ಬಗ್ಗೆ ಹೆಚ್ಚಿನ ಗಮನ ನೀಡುತ್ತಿಲ್ಲ.
ಮುಖ್ಯವಾಗಿ ಜಿಪಂ ಸದಸ್ಯರ ಅನುದಾನದಲ್ಲಿ ಈ ಕೆಲಸ ಮಾಡಿದರೂ ಅದರ ಶ್ರೇಯಸ್ಸು ಶಾಸಕರಿಗೆ ಸಲ್ಲುತ್ತದೆ ಎನ್ನುವ ತಪ್ಪು ಕಲ್ಪನೆ ಜಿಪಂ ಸದಸ್ಯರನ್ನು ಕಾಡುತ್ತಿದೆ. ಇನ್ನು ಹಿಂದಿನ ಸಚಿವರು, ಶಾಸಕರು ಮಾಡಿದ ಕೆಲಸವನ್ನೇ ನಾವು ಮುಂದುವರಿಸಿದಂತಾಗುತ್ತದೆ ಎನ್ನುವ ತಪ್ಪು ಭಾವನೆ ನೂತನ ಶಾಸಕರಲ್ಲಿದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಕಲ್ಪನೆ ಮಾತ್ರ ಜಿಲ್ಲೆಯಲ್ಲಿ ಇಂದಿಗೂ ಸಾಕಾರಗೊಂಡಿಲ್ಲ.
ಅಧಿಕಾರ ವಹಿಸಿಕೊಳ್ಳುವ ಪೂರ್ವದಲ್ಲಿಯೇ ಸ್ಮಾರ್ಟ್ ಕ್ಲಾಸ್ ಕುರಿತು ಚರ್ಚೆಯಾಗಿದೆ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಎಜುಸ್ಯಾಟ್ ಮೂಲಕ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಸ್ಮಾಟ್ ಕ್ಲಾಸ್ ಅಳವಡಿಕೆ ಬಗ್ಗೆ ಆಗಿರುವ ನಿರ್ಧಾರದ ಕುರಿತು ಅಧಿಕಾರಿಗಳೊಂದಿಗೆ ಇಂದೇ ಚರ್ಚಿಸುತ್ತೇನೆ.
-ರಾಜೀವ್ ನಾಯಕ
ಡಿಡಿಪಿಐ ಗದಗ
ಸ್ಮಾರ್ಟ್ ಕ್ಲಾಸ್ ಕುರಿತು ಮತ್ತೊಮ್ಮೆ ಎಲ್ಲ ಜಿಪಂ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಜಿಲ್ಲೆಯ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಹೆಚ್ಚು ಸಹಕಾರಿಯಾಗಿದ್ದು, ಅಗತ್ಯ ಬಿದ್ದಲ್ಲಿ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚಿಸಿ, ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಪ್ರಯತ್ನ ಮಾಡಲಾಗುವುದು.
-ಎಂ.ಎಸ್. ದೊಡ್ಡಗೌಡ್ರ
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

