ಗ್ರಾಪಂದಲ್ಲಿ ನಾಗರಿಕ ಸೇವಾ ಕೇಂದ್ರ ವ್ಯವಸ್ಥೆ ಕಲ್ಪಿಸಿ
ಕನ್ನಡಪ್ರಭ ವಾರ್ತೆ, ಗದಗ, ಆ. 13
ನಾಗರಿಕ ಸೇವಾ ಕೇಂದ್ರ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೆ ತಂದರೆ ನೌಕರರಿಗೆ ಪೂರ್ಣ ಪ್ರಮಾಣದ ಕೆಲಸ ದೊರೆತು ಸಾರ್ವಜನಿಕರಿಗೂ ಸಮರ್ಪಕ ಸೇವೆ ಲಭಿಸಿ, ಆಡಳಿತ ಸುಧಾರಣೆಯಾಗಲಿದೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ಅವರು ಸೋಮವಾರ ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ನೌಕರರ ಗದಗ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿರುವ 50 ಸಾವಿರ ಗ್ರಾಪಂ ನೌಕರರು ರು. 50 ರಿಂದ 100 ಸಂಬಳದಲ್ಲಿ ದುಡಿಯುತ್ತಾ ಬಂದಿದ್ದು, ಈಚೆಗಷ್ಟೇ ರು. 4219 ಸಂಬಳ ಪಡೆಯುತ್ತಿದ್ದಾರೆ. ಇಂದಿನ ದುಬಾರಿ ದಿನಗಳಲ್ಲಿ ಪ್ರಸ್ತುತ ನೀಡುತ್ತಿರುವ ಸಂಬಳ ಜೀವನ ನಿರ್ವಹಣೆಗೆ ಸಾಲದಾಗಿದೆ. ಕಾರಣ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಅವರು, ಎರಡು ವರ್ಷಗಳಿಂದ ಸರ್ಕಾರ ಬಾಕಿ ಉಳಿಸಿಕೊಂಡಿರುವ ಡಿ.ಎ. ನೀಡಬೇಕು. ಭವಿಷ್ಯ ನಿಧಿ, ವಿಮಾ ಯೋಜನೆ ಜಾರಿಗೊಳಿಸಬೇಕು. ಸೇವೆಯಲ್ಲಿರುವ ಗಣಕ ಯಂತ್ರ ಸಹಾಯಕರನ್ನು ಕಾಯಂ ನೇಮಕ ಮಾಡಿಕೊಂಡು ಎಲ್ಲ ಪಂಚಾಯಿತಿಗಳಲ್ಲಿ ಕಂಪ್ಯೂಟರ್, ಅಂತರ್ಜಾಲ ವ್ಯವಸ್ಥೆ ಬಳಸಿಕೊಂಡು ಸುಲಭ ಪಾರದರ್ಶಿಕ ಸೇವೆ ದೊರೆಯುವಂತೆ ಸರ್ಕಾರ ಮತ್ತು ಇಲಾಖೆ ಅಗತ್ಯ ಕ್ರಮ ತೆಗೆದುಕೊಂಡಾಗ ಪಂಚಾಯತ್ ರಾಜ್ ಸಬಲೀಕರಣ ಸಾಧ್ಯ ಎಂದರು.
ಸಚಿವರ ಗಮನಕ್ಕೆ ತರುವೆ: ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗ್ರಾಮ ಸಭೆಗಳ ಮೂಲಕ ಪರಿಣಾಮಕಾರಿ ಆಡಳಿತ ನೀಡಲು ಸಾಧ್ಯ. ಸಮುದಾಯದ ಮೆಚ್ಚುಗೆಗಳಿಸಿ ನೌಕರರು ತಮ್ಮ ಸೇವೆ ಮಾಡಬೇಕು. ಸಮುದಾಯದ ಬೆಂಬಲ ದೊರೆತಾಗ ನೌಕರರ ಬೇಡಿಕೆಗಳ ಈಡೇರಿಕೆ ಸುಲಭ ಸಾಧ್ಯ. ಗ್ರಾಪಂ ನೌಕರರ ಬೇಡಿಕೆಗಳ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರ ಹಾಗೂ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವೆ ಎಂದರು.
ಗ್ರಾಪಂ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಂತೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಿ.ಎಸ್. ಸೊಪ್ಪಿನ, ರಾಜ್ಯ ಉಪಾಧ್ಯಕ್ಷ ಬಿ.ಐ. ಈಳಗೇರ, ಉಪಾಧ್ಯಕ್ಷ ಎಚ್.ಎಸ್. ಚಟ್ರಿ, ಶಿವರಾಜ ಪಾಟೀಲ ಹಾಗೂ ಗದಗ ಜಿಲ್ಲೆಯ ಎಲ್ಲ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಗ್ರಾಪಂ ನೌಕರರು ಇದ್ದರು.
ಕೆ.ಎನ್. ಹರಿಗಲ್ ಸ್ವಾಗತಗೀತೆ ಹಾಡಿದರು. ಮಹೇಶ ಹಿರೇಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

