ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಹಡಪದ ಆಕ್ರೋಶ
ಗಜೇಂದ್ರಗಡ: ಸ್ಥಳೀಯ ಪುರಸಭೆಯಲ್ಲಿ ಸರ್ಕಾರದ ಜನಪರ ಅಭಿವೃದ್ಧಿ ಯೋಜನೆಗಳ ಸೂಕ್ತ ಮಾಹಿತಿಯನ್ನು ಅಧಿಕಾರಿಗಳು ಸಾರ್ವಜನಿಕರಿಗೆ ನೀಡುತ್ತಿಲ್ಲ. ಇದರಿಂದ ಸರ್ಕಾರದಿಂದ ಮಂಜೂರಾದ ಯೋಜನೆಗಳ ಬಗ್ಗೆ ಮಾಹಿತಿ ಸಿಗದೆ ಜನರು ತೊಂದರೆ ಎದುರಿಸುತ್ತಿದ್ದಾರೆಂದು ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐ(ಎಂ)ನ ಪುರಸಭೆ ಸದಸ್ಯ ಎಂ.ಎಸ್. ಹಡಪದ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ 2012-13ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರವನ್ನು ಶಾಸಕ ಜಿ.ಎಸ್.ಪಾಟೀಲರು ವಿತರಣೆ ಮಾಡಿ ತಿಂಗಳು ಕಳೆದರೂ ಫಲಾನುಭವಿಗಳಿಗೆ ಪುರಸಭೆ ಸಿಬ್ಬಂದಿ ಮನೆ ನಿರ್ಮಾಣದ ಕುರಿತು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದು ನಾಲ್ಕೈದು ತಿಂಗಳು ಗತಿಸಿದರೂ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಆಡಳಿತ ಅಧಿಕಾರಿಯ ಮೇಲುಸ್ತುವಾರಿಯ ಆಡಳಿತವನ್ನು ಪುರಸಭೆಯ ಕೆಲ ಸಿಬ್ಬಂದಿ ದುರುಪಯೋಗಪಡಿಸಿಕೊಂಡು ತಾವು ಆಡಿದ್ದೇ ಆಟ ಎಂಬಂತಾಗಿದೆ. ಈ ನಡುವೆ ಪಟ್ಟಣದ 2ನೇ ವಾರ್ಡ್ನಲ್ಲಿ ರು. 4.50 ಲಕ್ಷ ಅನುದಾನದಲ್ಲಿ ನಡೆದ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ 3 ತಿಂಗಳಿಂದ ಸ್ಥಗಿತಗೊಂಡಿದೆ.
ಸ್ವರ್ಣ ಜಯಂತಿ ರೋಜಗಾರ ಯೋಜನೆ ಅಡಿಯಲ್ಲಿ ಪುರಸಭೆ ವ್ಯಾಪ್ತಿಯ ಜನರ ಕಲ್ಯಾಣಕ್ಕಾಗಿ ಸರ್ಕಾರದಿಂದ ಮಂಜೂರಾದ ಮಾಹಿತಿಯನ್ನು ಪತ್ರಿಕೆಗಳ ಮೂಲಕ ಸ್ಪಷ್ಟಪಡಿಸದೇ ತಮಗೆ ಬೇಕಾದವರಿಗೆ ಮಾಹಿತಿ ನೀಡಿ, ಅವರಿಂದ ಅರ್ಜಿ ಸ್ವೀಕರಿಸಿ ಸರ್ಕಾರದ ನಿಯಮಾವಳಿಯನ್ನು ಪುರಸಭೆ ಅಧಿಕಾರಗಳು ಗಾಳಿಗೆ ತೂರಿದ್ದಾರೆ. ಪಟ್ಟಣದ ಗುಡ್ಡದ ಬಳಿಯ ವಾಜಪೇಯಿ ಬಡಾವಣೆ ಬಳಿಯ ಬಯಲು ಶೌಚಾಲಯವನ್ನು 5 ವಾರ್ಡ್ಗಳ ಪುರುಷರು ಬಳಸುತ್ತಿದ್ದು, ಈಗ ಅಲ್ಲಿ ಜಾಲಿ ಕಂಟಿ ಬೆಳೆದು, ಮಳೆ ನೀರು ನಿಂತು ದುರ್ವಾಸನೆ ಬೀರುತ್ತಿರುವುದನ್ನು ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಸ್ಥಳ ಸ್ವಚ್ಛಗೊಳಿಸಿ ಪುರಸಭೆಯಿಂದ ಸುಲಭ ಶೌಚಾಲಯ ನಿರ್ಮಿಸದಿದ್ದರೆ ಸಿಪಿಐ(ಎಂ) ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

