ಗದಗ

27ರಂದು ಗದುಗಿಗೆ ವಿವೇಕಾನಂದರ ರಥಯಾತ್ರೆ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 24
ಆ. 27ರಂದು ಸಂಜೆ ನಗರಕ್ಕೆ ಸ್ವಾಮಿ ವಿವೇಕಾನಂದರ ರಥಯಾತ್ರೆ ಆಗಮಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದ ಕಾಟನ್‌ಸೇಲ್ ಸೊಸೈಟಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಆಚರಣೆಯ ಈ ಸಂದರ್ಭದಲ್ಲಿ ರಾಜ್ಯದ ಜನತೆಯಲ್ಲಿ ಅದರಲ್ಲಿಯೂ ವಿಶೇಷವಾಗಿ ಯುವಕ, ಯುವತಿಯರಲ್ಲಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ವಿಚಾರಗಳನ್ನು ಪಸರಿಸುವ ಉದ್ದೇಶದಿಂದ ಬೆಂಗಳೂರಿನ ರಾಮಕೃಷ್ಣ ಆಶ್ರಮ ಆಯೋಜಿಸಿರುವ ರಥಯಾತ್ರೆಯು ಆ. 27ರಂದು ಸಂಜೆ ನಗರಕ್ಕೆ ಆಗಮಿಸಲಿದ್ದು, ಬೆಟಗೇರಿ ಬಸ್ ನಿಲ್ದಾಣ ಹತ್ತಿರ ಮರುಪ್ರವೇಶ ಮಾಡಲಿದೆ. ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಲಾಗುವುದು. ಆ. 28ರಂದು ಬೆಳಗ್ಗೆ 9.30 ಗಂಟೆಗೆ ನಗರದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ರಥಯಾತ್ರೆಯ ಬೃಹತ್ ಮೆರವಣಿಗೆ ಆರಂಭವಾಗಲಿದೆ.
ಮೆರವಣಿಗೆಯ ಚಾಲನೆಯನ್ನು ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ವಹಿಸುವರು. ಮೆರವಣಿಗೆಯು ನಗರದ ಬನ್ನಿಕಟ್ಟಿ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣ ವೃತ್ತ, ಮಹೇಂದ್ರಕರ ವೃತ್ತ, ಗಾಂಧಿ ವೃತ್ತದ ಮೂಲಕ ಮುನ್ಸಿಪಲ್ ಮೈದಾನಕ್ಕೆ ಆಗಮಿಸಲಿದೆ. ಜಿಲ್ಲೆಯ ಜನತೆ ಹಾಗೂ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಜಾತಿ, ಮತ, ಪಂಥ, ವರ್ಣ, ವರ್ಗ ದೇಶದ ಪರಿಧಿಯನ್ನು ದಾಟಿ ವಿಶ್ವಮಾನವರಾಗುವ ಮೌಲ್ಯಗಳನ್ನು ಜೀವನದಲ್ಲಿ ಉದ್ದೀಪನಗೊಳಿಸಲು ಶ್ರಮಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಉತ್ಸವ ಅಂಗವಾಗಿ ರಾಮಕೃಷ್ಣ ಆಶ್ರಮ ಹೊರಡಿಸಿರುವ ರಥಯಾತ್ರೆ ಈಗಾಗಲೇ ರಾಜ್ಯದ 16 ಜಿಲ್ಲೆಗಳಲ್ಲಿ ಸಂಚರಿಸಿ ಗದಗ ಜಿಲ್ಲೆಗೆ ಆಗಮಿಸುತ್ತಿದೆ. ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಿದ್ದು, ನಂತರ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಭೆ ಆಯೋಜಿಸಲಾಗಿದೆ ಎಂದರು.
ಸಭೆಯ ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು ನಾಡಿನ ವಿವಿಧ ಸಾಧು-ಸಂತರು ಉಪನ್ಯಾಸ ನೀಡುವರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಚ್.ಕೆ.ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು ಎಂದರು. ಮೆರವಣಿಗೆಯಲ್ಲಿ ನಗರದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಎನ್‌ಸಿಸಿ ಕ್ಯಾಡೆಟ್‌ಗಳು, ಸಾರ್ವಜನಿಕರು, ಯುವಜನತೆ ಪಾಲ್ಗೊಳ್ಳುವರು. ನಂತರ ಅಂದು ಸಂಜೆ ಸ್ವಾಮಿ ವಿವೇಕಾನಂದರ ಸಭಾಂಗಣದಲ್ಲಿ ಸತ್ಸಂಗ ಸಭೆ ಏರ್ಪಡಿಸಲಾಗಿದೆ ಎಂದರು. ಬೆಳಗಾವಿ ರಾಮಕೃಷ್ಣ ಆಶ್ರಮದ ತದ್ಯುಕ್ತಾನಂದ ಶ್ರೀಗಳು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ, ಬಸಣ್ಣ ಮಲ್ಲಾಡದ, ಪ್ರಭು ಬುರಬುರೆ, ಜೆ.ಕೆ. ಜಮಾದಾರ, ಪ್ರೊ. ಕೆ.ಬಿ. ತಳಗೇರಿ, ಅಶೋಕ ಮಂದಾಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.