ಧರ್ಮ ಜನಜಾಗೃತಿ ಪಥಸಂಚಲನ
ಗದಗ: ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿ ಕಳೆದ 11 ದಿನಗಳಿಂದ ನಡೆದು ಬಂದ ಶರಣ ಧರ್ಮ ಜನಜಾಗೃತಿ ಪಥ ಸಂಚಲನ ಕಾರ್ಯಕ್ರಮ ಶುಕ್ರವಾರ ಸಂಭ್ರಮದಿಂದ ನೆರವೇರುವ ಮೂಲಕ ಮುಕ್ತಾಯಗೊಂಡಿತು.
ಜಂತ್ಲಿಶಿರೂರನ ಚಿಕೇನಕೊಪ್ಪದ ಚನ್ನವೀರ ಶರಣರ ಶಾಖಾ ಮಠದಲ್ಲಿ 1 ತಿಂಗಳಿಂದ ನಡೆದು ಬಂದ ಕಲಬುರ್ಗಿ ಶರಣ ಬಸವೇಶ್ವರ ಆಧ್ಮಾತ್ಮಿಕ ಪುರಾಣ ಪ್ರವಚನ ನಿಮಿತ್ಯ ಈ ಶರಣ ಧರ್ಮ ಜನಜಾಗೃತಿ ಪಥಸಂಚಲನ ಪ್ರತಿ ದಿನ ಬೆಳಗ್ಗೆ ಜರುಗಿತು. 11 ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ ಶರಣರ ಭಾವಚಿತ್ರವಿರುವ ಭಜನಾ ಸಂಘದೊಂದಿಗೆ ಪಥ ಸಂಚಲನದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು. ಕಲಬುರ್ಗಿ ಶರಣ ಬಸವೇಶ್ವರರ ಆಧ್ಮಾತ್ಮಿಕ ಪುರಾಣ ಪ್ರವಚನ ನಡೆಸಿರುವ ಶಿವಲಿಂಗಯ್ಯ ಶಾಸ್ತ್ರೀ ಸಿದ್ದಾಪೂರ ಪ್ರತಿ ದಿನ ಬೆಳಿಗ್ಗೆ ಪಥಸಂಚಲನ ನಡೆಸಿ ಜನಜಾಗೃತಿ ಮೂಡಿಸಿದರು. ಮೆರವಣಿಗೆಯಲ್ಲಿ ಮಾರುತೇಶ್ವರ ಭಜನಾ ಸಂಘ ಹಾಗೂ ಬಸವೇಶ್ವರ ಭಜನಾ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇಂದು ಜಯಂತ್ಯುತ್ಸವ
ನರಗುಂದ: ಪಟ್ಟಣದ ಪತ್ರೀವನ ಮಠದಲ್ಲಿ ಡಿ. 2ರ ಸೋಮವಾರ ಬೆಳಗ್ಗೆ 10ಕ್ಕೆ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಜರಗಲಿದೆ. ಸಮಾರಂಭಕ್ಕೆ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಚಿಕ್ಕುಂಬಿ ಶ್ರೀ ನಾಗಲಿಂಗ ಸ್ವಾಮಿಗಳ ಮಠದ ನಾಗಲಿಂಗ ಶ್ರೀಗಳು, ತುಪ್ಪಟದ ಕುರಹಟ್ಟಿ ಭೂಸನೂರಮಠದ ವಾಗೀಶಿ ಶ್ರೀಗಳು, ಬಸಯ್ಯ ಸ್ವಾಮೀಜಿ, ಅಳಗವಾಡಿ ಲಿಂಗಾನಂದ ಆಶ್ರಮದ ಮೈಲಾರ ಹುಚ್ಚಯ್ಯ ತಾತಾನವರು, ಕಗದಾಳ ವೀರಭದ್ರಯ್ಯ ಶಾಸ್ತ್ರೀಗಳು ಆಗಮಿಸುವರು. ಅತಿಥಿಗಳಾಗಿ ಟಿಎಪಿಎಂಸಿ ಅಧ್ಯಕ್ಷ ಎಫ್.ಆರ್.ಪಾಟೀಲ, ವೆಂಕಣ್ಣ ಹೂಲಿ, ಶೇಷಣ್ಣ ದುಶಿ, ವಿಠ್ಠಲಪ್ಪ ಶಿಂಧೆ, ದ್ಯಾಮಣ್ಣ ಸವದತ್ತಿ, ಶ್ರೀನಿವಾಸ ಇನಾಂದಾರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಕಾರ್ತಿಕೋತ್ಸವ
ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಮುಕ್ತಿಮಂದಿರದಲ್ಲಿ ಕಾರ್ತಿಕ ಮಾಸದ ಅಮವಾಸ್ಯೆಯಂದು ಡಿ. 2ರ ಸೋಮವಾರ ಸಂಜೆ 7ಕ್ಕೆ ರಂಭಾಪುರಿ ಶ್ರೀಗಳ ಮಾನವ ಧರ್ಮ ಮಂಟಪದಲ್ಲಿ ಕಾರ್ತಿಕೋತ್ಸವ ಜರುಗಲಿದೆ ಎಂದು ಮುಕ್ತಿಮಂದಿರದ ವಿಮಲ ರೇಣುಕ ವೀರ ಮುಕ್ತಿಮುನಿ ಸ್ವಾಮೀಜಿ ತಿಳಿಸಿದಾರೆ. ಕಾರ್ತಿಕ ಮಾಸದಲ್ಲಿ ಜರುಗುವ ದೀಪೋತ್ಸವದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಜಿ.ಎಂ. ಮಹಾಂತಶೆಟ್ಟರ್ ಪಾಲ್ಗೊಳ್ಳಲಿದ್ದಾರೆ. ನಂತರ ಮಾನವ ಧರ್ಮ ಮಂಟಪದಲ್ಲಿ ಧಾರ್ಮಿಕ ಸಭೆ ಜರಗುವುದು ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿನಿಧಿಗಳಾಗಿ ಭಾಗವಹಿಸುವವರಿಗೆ ಅವಕಾಶ
ಗದಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಮುಂಬರುವ ಜನವರಿ 7ರಿಂದ 9ರ ವರೆಗೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜರುಗುತ್ತದೆ. ಸಮ್ಮೇಳನದಲ್ಲಿ ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳಲ್ಲಿಯೇ ಪ್ರತಿನಿಧಿ ಶುಲ್ಕ 300 ರು. ಗಳನ್ನು ಪಡೆದುಕೊಂಡು ನೋಂದಣಿ ಮಾಡಿಸಿಕೊಳ್ಳಲು ಕಾರ್ಯಕಾರಿ ಮಂಡಳಿಯು ತೀರ್ಮಾನಿಸಿದೆ. ಸಮ್ಮೇಳನದಲ್ಲಿ ನೇರವಾಗಿ ಪ್ರತಿನಿಧಿಗಳಾಗಲು ಅವಕಾಶ ಇರುವುದಿಲ್ಲ. ಆದ್ದರಿಂದ ಗದಗ ಜಿಲ್ಲೆಯಿಂದ ಭಾಗವಹಿಸುವ ಪ್ರತಿನಿಧಿಗಳು ಡಿ. 10ರೊಳಗೆ ಪ್ರತಿನಿಧಿ ಶುಲ್ಕವನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂದಾಯ ಮಾಡಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ (9449900052), ಗೌರವ ಕಾರ್ಯದರ್ಶಿ ಶರಣು ಗೋಗೇರಿ (9620988939), ಡಾ. ಸಂಗಮೇಶ ತಮ್ಮನಗೌಡ್ರ (9449074397), ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್ (94491740447) ಇಲ್ಲಿಗೆ ಸಂಪರ್ಕಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನ ಯುವಕ-ಯುವತಿಯರಿಂದ ಅರ್ಜಿ ಆಹ್ವಾನ
ಗದಗ: ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗದಗ ತಾಲೂಕಿನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ 10 ಹುದ್ದೆಗಳಿಗೆ ಅಡವಿಸೋಮಾಪುರ, ಅಂತೂರ-ಬೆಂತೂರ, ಬೆಳದಡಿ, ಬಿಂಕದಕಟ್ಟಿ, ಚಿಕ್ಕಹಂದಿಗೋಳ, ಹಾತಲಗೇರಿ, ಕುರ್ತಕೋಟಿ, ಸೊರಟೂರ, ಬಳಗಾನೂರ, ಹರ್ಲಾಪುರ ಈ ಗ್ರಾಪಂ ವ್ಯಾಪ್ತಿಯ 18-45 ವಯೋವುತಿಯ ಎಸ್ಸೆಸ್ಸೆಲ್ಸಿ ಪಾಸು ಅಥವಾ ಫೇಲಾದ ನಿರುದ್ಯೋಗಿ ಅರ್ಹ ವಿಕಲಚೇತನ ಯುವಕ-ಯುವತಿಯರಿಂದ ಗೌರವಧನದ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ತಾಲೂಕು ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಫೇಲಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಡಿ. 16ರ ಒಳಗೆ ಕಚೇರಿ ವೇಳೆಯಲ್ಲಿ ಜಿಲ್ಲಾ ವಿಕಲಚೇತನರ ಕಾರ್ಯಾಲಯ, ಕೊಠಡಿ ಸಂಖ್ಯೆ- 06. ನೆಲಮಹಡಿ ಜಿಲ್ಲಾ ಆಡಳಿತ ಭವನ, ಗದಗ ಇವರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳ ಅರ್ಹತೆ ಹಾಗೂ ನಿಗದಿತ ಅರ್ಜಿ ನಮೂನೆ ಇತರೆ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಇಂದು ಕಾರ್ತಿಕ ಮಹಾಮಂಗಲೋತ್ಸವ
ಮುಂಡರಗಿ: ಸ್ಥಳೀಯ ಜ. ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ತಿಂಗಳ ಪರ್ಯಂತ ಜರುಗಿದ ಕಾರ್ತಿಕೋತ್ಸವ ಮಹಾಮಂಗಲೋತ್ಸವವು ಡಿ. 2ರ ರಾತ್ರಿ 8 ಗಂಟೆಗ ಜರುಗಲಿದೆ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಮಹಾಶಿವಯೋಗಿಗಳ ಕತೃ ಗದ್ದುಗೆಗೆ ದೀಪಗಳನ್ನು ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಮಹಾಮಂಗಲೋತ್ಸವ ನೆರವೇರಲಿದೆ. ಸರ್ವರೂ ಆಗಮಿಸಿ ಯಶಸ್ವಿಗೊಳಿಸುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.
ಇಂದು ಸಂಗೀತ ಕಾರ್ಯಕ್ರಮ
ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಿ. 2ರಂದು ಸಂಜೆ 5.30ಕ್ಕೆ ಗುರು ಪುಟ್ಟರಾಜ ಗಾನಲಹರಿ 33ನೇ ಮಾಸಿಕ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ನಗರದ ಮಹಾತ್ಮಗಾಂಧೀಜಿ ಆಸ್ಪತ್ರೆಯ ಡಾ. ಪ್ರಕಾಶ ಧರಣಾ ಅಧ್ಯಕ್ಷತೆ ವಹಿಸುವರು. ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕೃತ ಹಾಗೂ ಗದಗ-ಬೆಟಗೇರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಅಶೋಕ ಬಣ್ಣದ, ಮಂಗಳಾ ತಾಪಸ್ಕರ, ಸಿ.ಬಿ. ಕಾಳೆ ಆಗಮಿಸುವರು. ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದ ರಾಜೇಂದ್ರ ನಾಕೋಡ ಅವರಿಂದ ಸಂಗೀತ ಕಾರ್ಯಕ್ರಮ, ನಾರಾಯಣ ಹಿರೇಕೊಳಚಿ ವಯೋಲಿನ ಸಾಥ ನೀಡಲಿದ್ದಾರೆ.
ಮಕ್ಕಳ ದಿನಾಚರಣೆ
ಗದಗ: ಸ್ಥಳೀಯ ಡಾ. ಪುಟ್ಟರಾಜ ಗವಾಯಿಗಳರವರ ಅಂಧರ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳರವರ ಸಂಗೀತ ಪಾಠಶಾಲೆ ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳರವರ ಸಂಸ್ಕೃತ ಪಾಠಶಾಲೆ ಆಶ್ರಯದಲ್ಲಿ ಈಚೆಗೆ ಜವಾಹರಲಾಲ ನೆಹರು ಜನ್ಮದಿನದ ನಿಮಿತ್ತ ಮಕ್ಕಳ ದಿನ ಆಚರಿಸಲಾಯಿತು. ಸಂಗೀತ ಪಾಠಶಾಲೆಯ ಮುಖ್ಯೋಪಾಧ್ಯಾಯ ಪಿ.ಎಚ್. ಹಡಪದ ಜವಾಹರಲಾಲ ಜೀವನಾದರ್ಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಪಂಚಯ್ಯ ಹಿರೇಮಠ ಆಗಮಿಸಿದ್ದರು. ಸಂಸ್ಕೃತ ಪಾಠಶಾಲೆಯ ಸಹಶಿಕ್ಷಕ ಶಂಭುಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಪಾಠಶಾಲೆಯ ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠಶಾಲೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸ್ಕೃತ ಪಾಠಶಾಲೆಯ ಸಹಶಿಕ್ಷಕ ಶಿವಕುಮಾರ ಸಾಲಿಮಠ ಸ್ವಾಗತಿಸಿದರು. ವಿಠ್ಠಪ್ಪ ಹೂಗಾರ ವಂದಿಸಿದರು.
ಶಂಕರಗೌಡ ಹಟ್ಟಿ ನಿಧನ
ನರಗುಂದ: ತಾಲೂಕಿನ ಕಪ್ಪಲಿ ಗ್ರಾಮದ ಶಂಕರಗೌಡ ಹಟ್ಟಿ (74) ಈಚೆಗೆ ನಿಧನರಾದರು. ಇವರಿಗೆ ಪುತ್ರರು, ಪುತ್ರಿಯರು ಅಪಾರ ಬಂಧು ಬಳಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

