ಡಬ್ಬಾ ಅಂಗಡಿ ತೆರವಿಗೆ ಆಗ್ರಹಿಸಿ ಧರಣಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 3
ತಾಲೂಕಿನ ಮಾಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗಾಂವಠಾಣ ಜಾಗವನ್ನು ಪಂಚಾಯಿತಿ ಸದಸ್ಯರೇ ಕಬಳಿಸಿ ಅಕ್ರಮ ಸಾರಾಯಿ ಮಾರಾಟ ಮಾಡಲು ಈ ಸ್ಥಳದಲ್ಲಿ ಕಟ್ಟಡ ಹಾಗೂ ಡಬ್ಬಾ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದು, ಗ್ರಾಮಸ್ಥರಿಗೆ ಈ ಮಾರ್ಗವಾಗಿ ಸಂಚರಿಸಲು ತೀವ್ರ ತೊಂದರೆಯಾಗಿದೆ. ತಕ್ಷಣವೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಪಂ ಸದಸ್ಯ ಶಂಕರ ಮರಾಠೆ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಂಕರ ಮರಾಠೆ ಮಾತನಾಡಿ, 3 ವರ್ಷಗಳಿಂದ ಸಾರಾಯಿ ಮುಕ್ತ ಗ್ರಾಮ ಮಾಡುವಂತೆ ಆಗ್ರಹಿಸಿ ನೂರಾರು ಮಹಿಳೆಯರು ಸೇರಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದು, ಇಲ್ಲಿವರೆಗೂ ಅಕ್ರಮ ಸಾರಾಯಿ ಸರಬರಾಜು ನಿಂತಿಲ್ಲ. ಪೊಲೀಸ್ ಹಾಗೂ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈ ಸಾರಾಯಿಯನ್ನು ಕುಡಿದು ಅನೇಕ ಕುಟುಂಬಗಳು ಬೀದಿಪಾಲಾಗಿದ್ದು, ಮಕ್ಕಳು ಸಾರಾಯಿ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ನಿತ್ಯ ಹಗಲು ರಾತ್ರಿ ಎನ್ನದೇ ಸಾರಾಯಿ ಸರಬರಾಜಾಗುತ್ತಿದ್ದು, ಗ್ರಾಮದ ಮಹಿಳೆಯರ ಹೋರಾಟಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದೇ ತಮ್ಮ ಕೆಲಸ ಮುಂದುವರಿಸಿದ್ದಾರೆ. ಗ್ರಾಪಂ ಸದಸ್ಯರೇ ಈ ಕಾರ್ಯದಲ್ಲಿ ತೊಡಗಿದ್ದು, ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಿಎಸ್ಐ ರೇವಪ್ಪ ಕಟ್ಟಿಮನಿ ತಮ್ಮ ಬೇಡಿಕೆ ಈಡೇರಿಸುವುದಾಗಿ ಹೇಳಲು ಮುಂದಾದಾಗ ಬರೀ ಭರವಸೆಯ ಮೂಲಕ ಧರಣಿ ಕೈ ಬಿಡುವಂತೆ ಮನವೊಲಿಸಲು ಅಧಿಕಾರಿಗಳು ಮುಂದಾಗಬಾರದು. ಲಿಖಿತ ಭರವಸೆ ನೀಡಿದ ನಂತರವೇ ಧರಣಿ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ ಅವರು, ಗ್ರಾಮಕ್ಕೆ ಅಬಕಾರಿ, ತಹಸೀಲ್ದಾರ್, ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ತಮ್ಮ ಸಮಸ್ಯೆ ಕುರಿತು ಚರ್ಚೆಗೆ ಬರುವವರೆಗೂ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು.
ತಾಪಂ ಸಹಾಯಕ ನಿರ್ದೇಶಕ ಟಿ.ವಿ. ಹಕ್ಕಾಪಕ್ಕಿ, ಗ್ರಾಮಸಭೆಯ ನೋಡಲ್ ಅಧಿಕಾರಿ ಪ್ರಹ್ಲಾದ್ರಾವ್, ಪಿಡಿಓ ಕೆ.ಎಸ್. ಹಾದಿಮನಿ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕುರಿತು ಚರ್ಚಿಸಿದರು. ತುರ್ತುಸಭೆ ಕರೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗ್ರಾಪಂ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಿ ಕಾನೂನು ಬಾಹೀರವಾಗಿ ಗಾಂವಠಾಣಾ ಜಾಗ ಅಕ್ರಮ ಮಾಡಿಕೊಂಡು ಕಟ್ಟಡ ಹಾಗೂ ಡಬ್ಬಾ ಅಂಗಡಿ ಇಟ್ಟು ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡಬ್ಬಾ ಅಂಗಡಿ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರಿಂದ ಧರಣಿ ಹಿಂದಕ್ಕೆ ಪಡೆಯಲಾಯಿತು. ಗ್ರಾಪಂ ಅಧ್ಯಕ್ಷೆ ಗೌರವ್ವ ಕಲ್ಲೇದಾರ, ಉಪಾಧ್ಯಕ್ಷ ಶರಣಪ್ಪ ಆಡೂರ, ಸದಸ್ಯ ಶಂಕರ ಮರಾಠೆ, ಸಂಗವ್ವ ಪೂಜಾರ, ಲಕ್ಷ್ಮವ್ವ ಮಾದರ ಮುಂತಾದವರು ಧರಣಿಯಲ್ಲಿ ಹಾಜರಿದ್ದರು.
--
ಪಪಂ ಸದಸ್ಯೆ ಚಂದ್ರವ್ವ ಕುತ್ನಿ ನಿಧನ
ಮುಳಗುಂದ: ಪಟ್ಟಣದ ಸೌಳಭಾವಿ ಓಣಿಯ ನಿವಾಸಿ, ಸ್ಥಳೀಯ ಪಪಂ ಸದಸ್ಯೆ ಚಂದ್ರವ್ವ ಮುದಕಪ್ಪ ಕುತ್ನಿ (65) ಮಂಗಳವಾರ ನಿಧನರಾದರು. ಮೃತರಿಗೆ ಮೂರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗ ಇದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ 9ರಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಚಂದ್ರವ್ವ ನಿಧನಕ್ಕೆ ಪಪಂ ಅಧ್ಯಕ್ಷೆ ಲಕ್ಷ್ಮವ್ವ ಕಣವಿ, ಉಪಾಧ್ಯಕ್ಷೆ ಬಿಬಿಜಾನ ಗುಬ್ಬಿ, ಸದಸ್ಯ ಸಿ.ಬಿ. ಬಡ್ನಿ, ಆರ್.ಎನ್.ದೇಶಪಾಂಡೆ, ಎಂ.ಎಸ್. ಕಣವಿ, ಕೆ.ಎಲ್. ಕರಿಗೌಡ, ಬಿ.ವಿ. ಸುಂಕಾಪುರ ಹಾಗೂ ಪಪಂ ಮುಖ್ಯಾಧಿಕಾರಿ ವಿ.ಜಿ. ಸುಲಾಖೆ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

