ಗದಗ

ವಿಚಿತ್ರ ರೋಗಕ್ಕೆ ಕುರಿಮರಿ ಬಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 4
ಗದಗ ಶಹರದ ಪಕ್ಕದಲ್ಲಿಯೇ ಇರುವ ಅಡವಿಸೋಮಾಪುರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೂರಾರು ಕುರಿ ಮರಿಗಳು ವಿಚಿತ್ರವಾದ ಕಾಯಿಲೆಯಿಂದ ಮೃತಪಡುತ್ತಿದ್ದು, ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕುರಿಗಾರರಲ್ಲಿ ಆತಂಕ ಮನೆ ಮಾಡಿದೆ.
ಈ ಕುರಿ ಮರಿಗಳಿಗೆ ಅದ್ಯಾವ ಕಾಯಿಲೆ ಬಂದಿದೆ ಎಂದು ಗುರುತಿಸುವಷ್ಟರಲ್ಲಿಯೇ ಅವು ಸಾವನ್ನಪ್ಪುತ್ತಿರುವುದು ಸಹಜವಾಗಿ ಎಲ್ಲರಲ್ಲಿಯೂ ಆಶ್ಚರ್ಯಕ್ಕೆ ಕಾರಣವಾಗಿದೆ.
ಗ್ರಾಮದ ಈರಪ್ಪ ಶಂಕ್ರಪ್ಪ ಹೊಸಳ್ಳಿ, ಪ್ರಕಾಶ ಖಾನಾಪುರ, ಭೀಮಪ್ಪ ಕರಿ, ದೇವಪ್ಪ ಪೂಜಾರ ಎಂಬುವರಿಗೆ ಸೇರಿದ ನೂರಾರು ಕುರಿಮರಿ ಹಾಗೂ ಆಡುಮರಿಗಳು ಕಳೆದ ನಾಲ್ಕು ದಿನಗಳಿಂದ ಪತ್ರಿದಿನ 20-30 ಮರಿಗಳು ಸಾವನ್ನಪ್ಪಿವೆ.
ಸಾವಿನ ಘಟನೆ ನಡೆದ ಕೂಡಲೇ ಕುರಿಗಾರರು ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಔಷದೋಪಚಾರ ನೀಡಿದರೂ ಮರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪಶು ವೈದ್ಯಾಧಿಕಾರಿಗಳ ಸಲಹೆ ಪಡೆದು ಸಾವಿರಾರು ವೆಚ್ಚದಲ್ಲಿ ಔಷಧಿಗಳನ್ನು ಖರೀದಿಸಿ ಮರಿಗಳಿಗೆ ನೀಡಿದರು ಪ್ರಯೋಜನವಾಗಿಲ್ಲ ಎಂಬ ನೋವನ್ನು ಕುರಿಗಾರರು ತೋಡಿಕೊಂಡರು.
ಬುಧವಾರ ಘಟನೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ಉಪ ನಿರ್ದೇಶಕ ಡಾ. ವಿ.ಜಿ ಬಂಡಿ ಅವರನ್ನು ಕುರಿಗಾರರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ನಡೆದಿದೆ. ಇದಕ್ಕೆ ನೀವೇ ಹೊಣೆ ಎಂದು ಕುರಿಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.  
ಮರಿಗಳ ಸಾವು ಸಂಭವಿಸುತ್ತಿದ್ದಂತೆ ಪಶು ಆಸ್ಪತ್ರೆಗೆ ಹೋಗಿ ಔಷಧ ಪಡೆದು ಮರಿಗಳಿಗೆ ಹಾಕಿದೆವು. ಆದರೂ ಮರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತ್ತೆ ಆಸ್ಪತ್ರೆಗೆ ಹೋದಾಗ ನಮ್ಮಲ್ಲಿರುವ ಔಷಧಗಳನ್ನು ನಾವು ನೀಡಿದ್ದೇವೆ. ಹೆಚ್ಚಿನ ಔಷಧಿಗಳು ನಮ್ಮಲ್ಲಿಲ್ಲ. ಹೊರಗಡೆ ತೆಗೆದುಕೊಂಡು ಹಾಕಿರಿ ಎಂದು ಚೀಟಿ ಬರೆದುಕೊಟ್ಟರು. ಸಾವಿರಾರು ಹಣ ಖರ್ಚು ಮಾಡಿ ತಂದು ಹಾಕಿದರೂ ಮರಿಗಳು ಬದುಕಿ ಉಳಿಯಲಿಲ್ಲ.
 ಈರಪ್ಪ ಹೊಸಳ್ಳಿ, ಕುರಿಗಾರ
ಈ ಘಟನೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ತಿಳಿದ ಕೂಡಲೇ ಬಂದಿದ್ದೇನೆ. ಮೇಲ್ನೋಟಕ್ಕೆ ನ್ಯುಮೋನಿಯಾ ಕಾಯಿಲೆ ಬಂದಿರಬಹುದು ಎನ್ನುವ ವಾತಾವರಣವಿದೆ. ಮರಣೋತ್ತರ ಪರೀಕ್ಷೆಯ ನಂತರ ಘಟನೆಯ ಬಗ್ಗೆ ತಿಳಿಯುತ್ತದೆ. ನಮ್ಮಲ್ಲಿರುವ ಔಷಧಿಗಳನ್ನು ನಾವು ನೀಡಿದ್ದೇವೆ.

-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.