ಕಳಪೆ ಕಾಮಗಾರಿ: ದಾಖಲೆಯೊಂದಿಗೆ ಅಧಿಕಾರಿ ತರಾಟೆ
ಶಿರಹಟ್ಟಿ: ಸುವರ್ಣಗ್ರಾಮ ಯೋಜನೆಯಡಿ ಭೂಸೇನಾ ನಿಗಮದ ಅಧಿಕಾರಿಗಳು ತಾಲೂಕಿನ ಬೆಳ್ಳಟ್ಟಿ, ಬಾಲೇಹೊಸೂರ, ಅಡರಕಟ್ಟಿ, ವಡವಿ ಗ್ರಾಮಗಳಲ್ಲಿ ಕೈಗೊಂಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ ದಾಖಲೆ ಸಮೇತ ಆರೋಪಿಸಿ ತರಾಟೆಗೆ ತೆಗೆದುಕೊಂಡರು.
ಗುರುವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಗಂಭೀರ ಆರೋಪ ಮಾಡಿದರು.
ರು. 3 ಕೋಟಿ 50 ಲಕ್ಷ ವೆಚ್ಚದಲ್ಲಿ ಭೂಸೇನಾ ನಿಗಮದ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ ಎಂದ ಅವರು, ಕಾಮಗಾರಿಯ ಪೋಟೋ ಪ್ರದರ್ಶಿಸಿ ಅಧಿಕಾರಿ ಆರ್.ಎಸ್. ಮಾಳುದೇಕರ ಅವರನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ಸ್ವ-ಗ್ರಾಮ ಬಾಲೇಹೊಸೂರಲ್ಲಿ ರು. 1 ಕೋಟಿ 25 ಲಕ್ಷ ವೆಚ್ಚದಲ್ಲಿ ಸಿಸಿ ನಿರ್ಮಿಸಲಾಗಿದ್ದು, ಯೋಜನೆಯಂತೆ ಕಾಮಗಾರಿ ನಡೆದಿಲ್ಲ. ಮೆಟ್ಲಿಂಗ್ ಮಾಡಿ ರೂಲ್ ಹೊಡೆದು ನಂತರ ಕಾಂಕ್ರೀಟ್ ಹಾಕುವುದರ ಬದಲು ರಸ್ತೆ ಕೆದರಿ ಕಾಂಕ್ರೀಟ್ ಹಾಕಲು ಮುಂದಾಗಿದ್ದು, ರಸ್ತೆ ಕಾಮಗಾರಿ ಬಾಳಿಕೆ ಬರುವುದಿಲ್ಲ ಎಂದು ದೂರಿದರು.
ಜನ ಉಗಿತಾರೆ: ಗ್ರಾಮಕ್ಕೆ ಸುವರ್ಣಗ್ರಾಮ ಯೋಜನೆ ತರಲು ಸುಮಾರು 2 ವರ್ಷ ಶ್ರಮ ಪಟ್ಟಿದ್ದು, ಭೂ ಸೇನಾ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜನತೆ ನಮಗೆ ಉಗಿಯುತ್ತಿದ್ದಾರೆ. ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಂಪೂರ್ಣ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು. ಕಾಟಾಚಾರದ ಕಾಮಗಾರಿ ಮಾಡಿ ಬಿಲ್ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕೃಷಿ ಇಲಾಖೆಯಿಂದ ರೈತರಿಗೆ ಸರ್ಕಾರದ ಸಹಾಯದನದಲ್ಲಿ ಕೃಷಿ ಉಪಕರಣ ಪಡೆಯಲು ಚೆಕ್ ನೀಡಿದ್ದರೂ ಏಜೆನ್ಸಿಯವರು ಉಪಕರಣಗಳನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ. ರೈತರು ತ್ವರಿತವಾಗಿ ನೀಡುವಂತೆ ಒತ್ತಾಯಿಸಿದರೆ ಅವರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಏಜೆನ್ಸಿ ವಿರುದ್ಧ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ ಅಧಿಕಾರಿಯನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಅಧಿಕಾರಿಯಿಂದ ಸಮರ್ಪಕ ಉತ್ತರ ಬರಲಿಲ್ಲ.
ಅಧಿಕಾರಿಗಳ ಜೇಬು ಸೇರಿದ ಹಣ: ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ತಾಲೂಕು ಭೂಮಾಪನಾ ಇಲಾಖೆಯಲ್ಲಿ 2006-07ರಿಂದ 2012ರ ವರೆಗಿನ ಲಕ್ಷಾಂತರ ರುಪಾಯಿ ಸರ್ಕಾರದ ಖಜಾನೆಗೆ ಭರ್ತಿಯಾಗದೇ ಇಲಾಖೆಯ ನೌಕರರ ಜೇಬು ಸೇರಿದೆ ಎಂದು ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ ಆರೋಪಿಸಿದರು. ಸಭೆಯಲ್ಲಿ ಹಾಜರಿದ್ದ ಇಲಾಖೆ ಸಿಬ್ಬಂದಿ ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ. ಆದರೆ, ಈ ಕುರಿತಂತೆ ಜಿಲ್ಲಾ ಭೂಮಾಪನ ಅಧಿಕಾರಿ ಇತ್ತೀಚೆಗೆ ಶಿರಹಟ್ಟಿಯ ಕಚೇರಿಯಲ್ಲಿ ತಪಾಸಣೆ ಕೈಗೊಂಡಾಗ ಸುಮಾರು ರು. 6 ಲಕ್ಷ ಅವ್ಯವಹಾರವಾಗಿರುವುದು ಬೆಳಕಿಗೆ ಬಂದಿದೆ ಎಂದು ಆಪಾದಿಸಿದರು. ಪೋಡಿ ಪ್ರಕರಣ, ಹದ್ದುಬಸ್ತು, ಭೂಮಿ ಸರ್ವೇ ಮತ್ತಿತರೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರೈತರು ಹಾಗೂ ಸಾರ್ವಜನಿಕರು ಕಟ್ಟುವ ಸರ್ಕಾರದ ನಿಗದಿತ ಶುಲ್ಕ ಸರ್ಕಾರದ ಖಜಾನೆಗೆ ಜಮೆ ಆಗದೇ ಇರುವುದು ಬೆಳಕಿಗೆ ಬಂದಿದೆ ಎಂದು ದೂರಿದರು. ಅಲ್ಲದೆ, ಸಿಬ್ಬಂದಿಯೋರ್ವರು ಅವ್ಯವಹಾರದಲ್ಲಿಯ ತಮ್ಮ ಪಾಲಾದ ಸುಮಾರು ರು. 1 ಲಕ್ಷಕ್ಕೂ ಹೆಚ್ಚು ಹಣವನ್ನು ತುಂಬಿ ಬಂದಿರುವರೆಂದು ಹೇಳಲಾಗುತ್ತಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಸಭೆಯಲ್ಲಿ ಆಗ್ರಹಿಸಿದರು. ಈ ಕುರಿತು ಅಧಿಕಾರಿಗಳು ಉತ್ತರ ನೀಡಲು ಸಭೆಯಲ್ಲಿ ಹಾಜರಿರಲಿಲ್ಲ.
ಉಳಿದಂತೆ ಶಿಕ್ಷಣ, ಆರೋಗ್ಯ, ಅರಣ್ಯ, ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ, ಹೆಸ್ಕಾಂ, ಜಲಾನಯನ, ಪಶು ಸಂಗೋಪನಾ ಇಲಾಖೆ ಮೇಲೆ ಚರ್ಚೆ ನಡೆಯಿತು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ, ತಾಪಂ ಇಒ ವೈ.ಎಲ್. ಹಂಪಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

