ಕಾಂಪ್ಲೆಕ್ಸ್ಗೂ ಮುನ್ನ ಗೂಡಂಗಡಿ
ಕನ್ನಡಪ್ರಭ ವಾರ್ತೆ, ರೋಣ, ಡಿ. 6
ಕೆರೆ ಅಭಿವೃದ್ಧಿ ಮತ್ತು ಕಾಂಪ್ಲೆಕ್ಸ್ ನಿರ್ಮಿಸುವುದಾಗಿ 2007ರಲ್ಲಿ ಪಟ್ಟಣದಲ್ಲಿನ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ತೆರವು ಕಾರ್ಯಾಚರಣೆ ವೇಳೆ ನೀಡಿದ ಭರವಸೆ ಹುಸಿಯಾಗಿದೆ.
ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ಹಣ ಕೆರೆ ಪಾಲಾಗಿದೆ. ತೆರವುಗೊಂಡ ಜಾಗೆಯಲ್ಲಿ ಮತ್ತೆ ಗೂಡಂಗಡಿಗಳು ತಲೆ ಎತ್ತಿ ನಿಂತಿರುವುದು ನಮ್ಮ ರಾಜಕೀಯ ವ್ಯವಸ್ಥೆಯ ಇಚ್ಛಾಶಕ್ತಿ ತೋರಿಸುತ್ತಿದೆ.
30-40 ವರ್ಷಗಳಿಂದ ಇಲ್ಲಿದ್ದ ಗೂಡಂಗಡಿಗನ್ನು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ 2007ರಲ್ಲಿ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಲಾಯಿತು. ಆ ವೇಳೆಯಲ್ಲಿ ಈ ಜಾಗೆಯಲ್ಲಿ ಪುರಸಭೆ ವತಿಯಂದ ಕಾಂಪ್ಲೆಕ್ಸ್ ನಿರ್ಮಿಸಿ ಕೊಡಲಾಗುವುದು ಎಂದು ಪುರಸಭೆ ಭರವಸೆ ನೀಡಿತ್ತು. ಮಳಿಗೆಗಳನ್ನು ನಿರ್ಮಿಸಲು ಮುಖ್ಯಮಂತ್ರಿಗಳ ಸಣ್ಣ ಮತ್ತು ದೊಡ್ಡ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ರು. 25 ಲಕ್ಷಕ್ಕೂ ಹೆಚ್ಚು ಹಣವನ್ನು ಮೀಸಲಿಡಲಾಗಿತ್ತು, ವಿಪರ್ಯಾಸವೆಂದರೆ ಈವರೆಗೂ ಮಳಿಗೆ ನಿರ್ಮಿಣವಾಗದೇ ಮೀಸಲಿಟ್ಟ ಅನುದಾನ ಬಳಕೆಯಾಗದೇ ಹಾಗೆಯೇ ಉಳಿದಿದೆ. ಆದರೆ ಈಗ ಮೀಸಲಿಟ್ಟ ಅನುದಾನ ಏನಾಗಿದೆ ಎನ್ನುವ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.
ರು. 98 ಲಕ್ಷ ಕೆರೆ ಪಾಲು: ತೆರವು ಕಾರ್ಯಾಚರಣೆ ವೇಳೆಯಲ್ಲಿಯೇ ಪಟ್ಟಣದ ಮಧ್ಯ ಭಾಗದಲ್ಲಿರುವ ಬೃಹತ್ ಕೆರೆಯನ್ನು ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರು. 98 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. ಕೆರೆಗೆ ಮಲಪ್ರಭಾ ನದಿಯಿಂದ ಕೊಳವೆ ಮೂಲಕ ನೀರು ತುಂಬಿಸುವ ಯೋಜನೆ ಇದಾಗಿತ್ತು. ಆ ಸಂದರ್ಭದಲ್ಲಿ ಕೆರೆಯ ಪಕ್ಕದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಆದರೆ, ಈ ವರೆಗೂ ಕೆರೆಗೆ ನೀರು ತುಂಬಿಸುವ ಯೋಜನೆ ಮಾತ್ರ ಸಾಕಾರಗೊಳ್ಳದೇ ಅನುದಾನ ಅನಾವಶ್ಯಕವಾಗಿ ಪೋಲಾಯಿತು. ಅಧಿಕಾರಿ ಮತ್ತು ಆಡಳಿತ ವರ್ಗಗಳ ನಿಷ್ಕಾಳಜಿಯಿಂದ ರು. 98 ಲಕ್ಷ ಖರ್ಚು ಮಾಡಿದರೂ ಕೆರೆ ಮಾತ್ರ ಈ ಹಿಂದೆ ಇದ್ದ ಮಾದರಿಯಲ್ಲಿಯೇ ಇದೆ.
ಅಡ್ಡಾದಿಡ್ಡಿ ನಿರ್ಮಾಣವಾದ ಗೂಡಂಗಡಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಗೂಡಂಗಡಿಗಳು ತಲೆ ಎತ್ತುತ್ತಿದ್ದು, ಇದರಿಂದ ಪಟ್ಟಣದ ಸೌಂದರ್ಯ ಹಾಳಾಗುವುದಲ್ಲದೇ ಮಲಿನತೆ ಹೆಚ್ಚಾಗುತ್ತಿದೆ. ಅಂಗಡಿಯಲ್ಲಿನ ಕಸ, ಕಡ್ಡಿ ಮತ್ತು ಗಲೀಜು ವಸ್ತುಗಳನ್ನು ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ಕುರಿತು ಜಾಗೃತಿ ಮೂಡಿಸಬೇಕಾದ ಪುರಸಭೆ ಕಣ್ಮುಚ್ಚಿ ಕುಳಿತಿದೆ. ಇಲ್ಲಿ ಗೂಡಂಗಡಿಗಳನ್ನು ನಿರ್ಮಿಸಲು ಜನತೆ ಪೈಪೋಟಿಗಿಳಿದಿದ್ದಾರೆ. ಕೂಡಲೇ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ.
ಗೂಡಂಗಡಿಗಳು ದಿನೇ ದಿನೇ ತಲೆ ಎತ್ತುತ್ತಿವೆ. ಕೂಡಲೇ ಪುರಸಭೆ ಆಡಳಿತ ಎಚ್ಚೆತ್ತು ಗೂಡಂಗಡಿಗಳ ತೆರವುಗೊಳಿಸಿ, ಆ ಜಾಗೆಯಲ್ಲಿ ಸುಸಜ್ಜಿತವಾದ ಮಳಿಗೆಗಳನ್ನು ನಿರ್ಮಿಸಿ, ವ್ಯಾಪಾರಸ್ಥರಿಗೆ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಅದೇ ಉದ್ದೇಶಕ್ಕೆ ಸದ್ಬಳಕೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ಅನುದಾನ ಅನಾವಶ್ಯಕವಾಗಿ ಪೋಲಾದಲ್ಲಿ ಸಾರ್ವಜನಿಕರೊಂದಿಗೆ ಬೀದಿಗಿಳಿದು ಹೋರಾಟ ಮಾಡಲಾಗುವುದು.
ವಾರ್ಡ್ಗಳಿಗೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಪಟ್ಟಣವನ್ನು ವಾಣಿಜ್ಯ ನಗರವನ್ನಾಗಿ ಆಕರ್ಷಿಸಲು ಅಗತ್ಯವಿರುವ ಸೌಲಭ್ಯಗಳನ್ನ ಕಲ್ಪಿಸುವ ದಿಸೆಯಲ್ಲಿ ರೂಪುರೇಷೆ ಹಾಕಿಕೊಳ್ಳುವಂತೆ ಡಿ.7 ರಂದು ಜರುಗುವ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಒತ್ತಾಯಿಸಲಾಗುವುದು.
-ಸದಸ್ಯರು, ಪುರಸಭೆ ರೋಣ
2007ರಲ್ಲಿ ಕೈಗೊಳ್ಳಲಾದ ತೆರವು ಕಾರ್ಯಾಚರಣೆ ಕುರಿತು ಮತ್ತು ಆ ಸಂದರ್ಭದಲ್ಲಿ ಪಟ್ಟಣದಲ್ಲಿ ಮಳಿಗೆ ನಿರ್ಮಿಸಲು ಮೀಸಲಿಟ್ಟ ಅನುದಾನದ ಕುರಿತು ಪೈಲ್ ತರಿಸಿಕೊಂಡು ವಿಚಾರಿಸಲಾಗುವುದು. ಅಲ್ಲದೇ ಡಿ. 7 ರಂದು ಜರುಗುವ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಮತ್ತು ಸದಸ್ಯರ ಗಮನಕ್ಕೆ ತಂದು ಚರ್ಚಿಸಲಾಗುವುದು.
- ಬಾಬುರಾವ್ ಕಮತಗಿ
ಮುಖ್ಯಾಧಿಕಾರಿ, ರೋಣ ಪುರಸಭೆ
ನನ್ನ ಅಧಿಕಾರ ಅವಧಿಯಲ್ಲಿ ಯಾವುದೇ ಅನುದಾನ ಪೋಲಾಗಲು ಬಿಡುವುದಿಲ್ಲ. ಈ ಹಿಂದೆ ಯಾವ ಉದ್ದೇಶಕ್ಕೆ ಅನುದಾನ ಮೀಸಲಿರಿಸಲಾಗಿದೆ ಎಂಬುದನ್ನು ಅಧಿಕಾರಿಗಳಿಂದ ವಿವರಣೆ ಪಡೆದು, ಯಾವುದೇ ಕಾಮಗಾರಿ ನೆನಗುದಿಗೆ ಬೀಳದಂತೆ ಜಾಗೃತಿ ವಹಿಸಲಾಗುವುದು. ಮಳಿಗೆ ನಿರ್ಮಿಸಲು ಮೀಸಲಿಟ್ಟ ಹಣವನ್ನು ಮಳಿಗೆ ನಿರ್ಮಿಸಲು ಈಗಾಗಲೇ ಅಳತೆ ಕಾಯಂ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
- ಮುತ್ತಣ್ಣ ಸಂಗಳದ
ಅಧ್ಯಕ್ಷರು, ಪುರಸಭೆ ರೋಣ
-ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

