ಗದಗ

ಯುವಕರಿಂದ ಭಾರತದ ಭವಿಷ್ಯ ಬದಲಾವಣೆ ಸಾಧ್ಯ

Published On :

 ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಡಿ. 6
ವಿದ್ಯಾರ್ಥಿಗಳು ಮುಂದಿನ ಭಾರತದ ಉಜ್ವಲ ಮಿನುಗುವ ದೀಪಗಳಾಗಬೇಕು. ಭಾರತದ ಭವಿಷ್ಯ ಬದಲಾಯಿಸುವ ಶಕ್ತಿ ನಿಮ್ಮಲ್ಲಿದೆ. ನಾವು ಎಲ್ಲೇ ಇರಲಿ ಮಾತೃ ಭೂಮಿಯ ಋಣ ತೀರಿಸುವ ಕಾರ್ಯ ಮಾಡಬೇಕು ಎಂದು ಮುಂಬೈನ ರಾಮಕೃಷ್ಣ ಆಶ್ರಮದ ಸರ್ವಲೋಕಾನಂದಜೀ ಸ್ವಾಮಿಗಳು ಹೇಳಿದರು. ಅವರು ಶುಕ್ರವಾರ ಪಟ್ಟಣದ ಕಮಲಾ ವೆಂಕಪ್ಪ ಅಗಡಿ ತಾಂತ್ರಿಕ ಮಹಾವಿದ್ಯಾಲಯದ 10ನೇ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನೈತಿಕ ಹಾಗೂ ಸಾಮಾಜಿಕ ಮೌಲ್ಯ ಅಳವಡಿಸಿಕೊಳ್ಳುವುದು ಅಗತ್ಯ. ಭ್ರಷ್ಟಾಚಾರ, ಅನೈತಿಕತೆ ತಾಂಡವವಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೌಲ್ಯಗಳ ಜತೆಯಲ್ಲಿ ನೈತಿಕ ಮೌಲ್ಯಗಳ ಶಿಕ್ಷಣವು ಇಂದು ಅಗತ್ಯವಾಗಿದೆ.
ವಿದ್ಯಾರ್ಥಿಗಳು ತಾವು ಜನ್ಮ ತಳೆದ ದೇಶಕ್ಕೆ ಏನ್ನನ್ನಾದರೂ ಕೊಡುಗೆ ನೀಡುವುದರ ಜತೆಗೆ ನಾವು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಕರ್ತವ್ಯ ಮರೆಯಬಾರದು ಎಂದರು.
ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಹರ್ಷವರ್ಧನ ಅಗಡಿ ಮಾತನಾಡಿ, 10 ವರ್ಷಗಳಲ್ಲಿ ನಮ್ಮ ಕಾಲೇಜು ದೇಶದ ಪ್ರತಿಷ್ಠಿತ 10 ಕಾಲೇಜುಗಳಲ್ಲಿ ಒಂದೆಂದು ಹೆಸರು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಮುಂಬೈನ ಡಿಸಿಡಬ್ಲುನ್ ಕಾರ್ಯನಿರ್ವಾಹಕ ನಿರ್ದೇಶಕ ಮುದಿತ್ ಜೈನ್ ಮಾತನಾಡಿ, ಜೀವನವೆಂದರೆ ಸರಳ ರೇಖೆಯಲ್ಲ, ಜೀವನದಲ್ಲಿ ಹಲವಾರು ತಿರುವುಗಳಿದ್ದು ನಿರ್ದಿಷ್ಟವಾದ ತಿರುವಿನಲ್ಲಿ ಯೋಗ್ಯ ತೀರ್ಮಾನ ತೆಗೆದುಕೊಂಡು ಯೋಜಿತವಾಗಿ ಮತ್ತು ಕಾರ್ಯ ತತ್ಪರತೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಕಾಲೇಜಿನ ನಿರ್ದೇಶಕ ಡಾ. ಅರುಣ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಅಶೋಕ ಚಾಪಗಾಂವ್ ವರದಿ ವಾಚನ ಮಾಡಿದರು. ಕಮಲಾ ಅಗಡಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಣೆ ಮಾಡಿದರು. ಸಮಾರಂಭದಲ್ಲಿ ಗೀತಾ ಅಗಡಿ, ಆರ್. ಕೃಷ್ಣಮಣಿ, ಡಾ.ಬಿ.ಎಂ. ಅಗಡಿ, ಮೈಲಾರೆಪ್ಪ ಅಗಡಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಆರ್.ಎಫ್. ಪುರಾಣಿಕಮಠ ಪ್ರೊ. ಎಸ್.ವಿ. ಗೋರಬಾಳ, ಉಪನ್ಯಾಸಕ ಸೋಮಶೇಖರ ಕೆರಿಮನಿ ಮೊದಲಾದವರು ಹಾಜರಿದ್ದರು. ಡಾ. ಬಿ.ಎಂ. ಅಗಡಿ ಸ್ವಾಗತಿಸಿದರು. ಪ್ರೊ. ಪ್ರಭಾಕರ ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.