ಗಾಂಧಿ ಪ್ರತಿಮೆ ಸ್ಥಾಪನೆ ಯಾವಾಗ?
ಮುಂಡರಗಿ: ಮುಂಡರಗಿ ಪುರಸಭೆ ಆವರಣದಲ್ಲಿ ಹೊಸ ಗಾಂಧಿ ಪ್ರತಿಮೆ ಸ್ಥಾಪನೆಯಾಗಬೇಕು ಎನ್ನುವ ಜನರ ಕೂಗಿಗೆ ಸ್ಪಂದನೆ ಸಿಗುತ್ತಿಲ್ಲ. ಇಲ್ಲಿರುವ ಗಾಂಧಿ ಪ್ರತಿಮೆ ಹಳೆಯದಾಗಿದ್ದು, ಹೊಸ ಮೂರ್ತಿ ಸ್ಥಾಪನೆಯಾಗಬೇಕು ಎಂದು ಅದೆಷ್ಟು ಜನ ಪ್ರಮುಖರು ತಿಳಿಸಿದರೂ ಕೂಡಾ ಪುರಸಭೆ ಅಧಿಕಾರಿಗಳು ಮಾತ್ರ ಇದಕ್ಕೆ ಗಮನ ನೀಡುತ್ತಿಲ್ಲ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ ಮುಂಡರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂರ್ತಿ ಬದಲಾವಣೆ ಮಾಡಲು ತಿಳಿಸಿದ್ದರು.
ಅವರ ಮಾತಿಗೆ ಮನ್ನಣೆ ನೀಡಿ ಹೊಸ ಮೂರ್ತಿ ತಯಾರಿಸಲು ಅಂದಿನ ಆಡಳಿತ ಮಂಡಳಿ ಮುಂದಾಯಿತು. ಅದರಂತೆ ಸದಸ್ಯರ ಸಭೆಯಲ್ಲಿ ಅದನ್ನು ಠರಾವು ಪಾಸು ಮಾಡುವ ಮೂಲಕ ನೂತನ ಮೂರ್ತಿಗೆ ಹಸಿರು ನಿಶಾನೆಯನ್ನೂ ಕೊಟ್ಟರು. ಆದರೆ, ಹಣಕಾಸಿನ ಕೊರತೆಯಿಂದಾಗಿ ಮೂರ್ತಿ ತಯಾರಿಕೆಯ ಕಾರ್ಯ ಅಂದಿನಿಂದ ಇಂದಿನವರೆಗೂ ವಿಳಂಬವಾಗುತ್ತಲೇ ಬಂದಿದೆ ಎನ್ನಲಾಗುತ್ತಿದೆ.
ದೊಡ್ಡ ಬೇವಿನಮರ ಬಲಿ: ಹೊಸ ಗಾಂಧೀಜಿ ಮೂರ್ತಿಯನ್ನು ಈಗಿದ್ದ ಸ್ಥಳದಲ್ಲಿ ಕೂಡಿಸುವುದು ಬೇಡ ಎಂದು ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಕೆಲವು ಸದಸ್ಯರೇ ಅಲ್ಲಿಂದ ಸ್ವಲ್ಪ ಪಕ್ಕದ ಜಾಗೆಯಲ್ಲಿ ಕೂಡಿಸಲು ತೀರ್ಮಾನಿಸಿ ಅದಕ್ಕಾಗಿ ಆವರಣದಲ್ಲಿ ಬೃಹತ್ ಬೇವಿನಮರವನ್ನೂ ಸಹ ಕಡಿದು ಹಾಕಲಾಯಿತು. ಇರುವ ಜಾಗ ಬಿಟ್ಟು ಬೇರೆಡೆ ಮಾಡಲು ತೀರ್ಮಾನಿಸಿದ್ದನ್ನು ಕೆಲವು ಸದಸ್ಯರು ಹಾಗೂ ಪಟ್ಟಣದ ಒಂದಿಷ್ಟು ಜನ ಹೋರಾಟಗಾರರು ವಿರೋಧ ಮಾಡಿದ್ದರಿಂದ ಮಂಟಪ ಸ್ಥಳಾಂತರ ಕಾರ್ಯ ವಿಳಂಬವಾಯಿತು. ಅಂದಿನಿಂದ ಇಂದಿನವರೆಗೂ ಹೊಸಮೂರ್ತಿಯೂ ಇಲ್ಲ, ಅದರ ಮಂಟಪವೂ ಇಲ್ಲದಂತಾಗಿದೆ. ಅದರ ಹೆಸರಿನಲ್ಲಿ ಬೇವಿನಮರ ಮಾತ್ರ ಬಲಿಯಾಗಿದ್ದು ಮಾತ್ರ ವಿಷಾದಕರ.
ಸಂಘಟನೆಗಳ ಒತ್ತಾಯ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಇಲ್ಲಿನ ಕನ್ನಡಕ್ರಾಂತಿ ಸೇನೆಯ ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರೂ ಕೂಡಲೇ ನೂತನ ಗಾಂಧೀಜಿ ಮೂರ್ತಿಯನ್ನು ಕೂಡಿಸುವಂತೆ ಮುಖ್ಯಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಆದರೆ ಮನವಿ ನೀಡಿ 4 ತಿಂಗಳು ಕಳೆಯುತ್ತಾ ಬಂದರೂ ಮುಖ್ಯಾಧಿಕಾರಿಗಳು ಯಾವುದೇ ರೀತಿಯ ಕಾಳಜಿ ಮಾಡುತ್ತಿಲ್ಲ. ಅಧಿಕಾರಿಗಳು ಗಾಂಧಿಮೂರ್ತಿಯ ಕುರಿತು ಸಾಕಷ್ಟು ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸಚಿವ ಎಚ್.ಕೆ. ಪಾಟೀಲ, ಶಾಸಕ ರಾಮಕೃಷ್ಣ ದೊಡ್ಡಮನಿ, ರೋಣ ಶಾಸಕ ಜಿ.ಎಸ್. ಪಾಟೀಲ ಈ ಕುರಿತು ಮುತುವರ್ಜಿ ವಹಿಸಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗಾಂಧೀಜಿ ಮೂರ್ತಿ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದರೂ ಅಧಿಕಾರಿಗಳು ಇನ್ನೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆದ್ದರಿಂದ ಜ. 26ಕ್ಕೆ ಗಣರಾಜ್ಯೋತ್ಸವ ದಿನವಾದರೂ ಈ ಜಾಗೆಯಲ್ಲಿ ಮೂರ್ತಿ ಅನಾವರಣಗೊಳ್ಳಬೇಕು. ಒಂದು ವೇಳೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳೂ ವಿಳಂಬ ನೀತಿ ಅನುಸರಿಸಿದಲ್ಲಿ ಜ. 26ರಂದು ಇದೇ ಮಹಾತ್ಮ ಗಾಂಧಿ ಪುತ್ಥಳಿ ಎದುರು ಕನ್ನಡಕ್ರಾಂತಿ ಸೇನೆಯ ಎಲ್ಲ ಪದಾಧಿಕಾರಿಗಳೊಂದಿಗೆ ಪ್ರತಿಭಟಿಸಲಾಗುವುದು.
-ಮಂಜುನಾಥ ಮುಧೋಳ
ಕನ್ನಡ ಕ್ರಾಂತಿ ಸೇನೆಯ ತಾಲೂಕು ಅಧ್ಯಕ್ಷ
ಯಾವುದಾದರೊಂದು ಸಿಸಿ ರಸ್ತೆ ಅಥವಾ ಚರಂಡಿ, ಮತ್ತಿನ್ಯಾವುದೋ ಕಾಮಗಾರಿಯಾದರೆ ಬಹಳ ಬೇಗ ಕೈಗೆತ್ತಿಕೊಳ್ಳುವ ಪುರಸಭೆ ಅಧಿಕಾರಿಗಳು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿ ಅನಾವರಣಕ್ಕೆ ವಿಳಂಬ ಮಾಡುತ್ತಿರುವುದು ವಿಷಾದಕರ. ಇನ್ನೂ ವಿಳಂಬನೀತಿ ಅನುಸರಿಸದೇ ಕೂಡಲೇ ಮೂರ್ತಿ ಅನಾವರಣಗೊಳಿಸಬೇಕು.
-ಹೇಮಗಿರೀಶ ಹಾವಿನಾಳ, ಜಿಪಂ ಸದಸ್ಯ
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

