ಗದಗ

ತಂಬಾಕುಮುಕ್ತ ಸಮಾಜ ನಿರ್ಮಾಣ ಅವಶ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 9
ತಂಬಾಕು ಜನರ ಆರೋಗ್ಯಕ್ಕಷ್ಟೇ ಸಮಸ್ಯೆಯಾಗದೆ, ರಾಜ್ಯದ ಅಭಿವೃದ್ಧಿ ಕುಂಠಿತಗೊಳಿಸುವ ಬಹುರೂಪಿ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಐಎಂಎ ಅಧ್ಯಕ್ಷ ಡಾ. ಆರ್.ಎನ್. ಪಾಟೀಲ ಹೇಳಿದರು. ಅವರು ಸೋಮವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ತಂಬಾಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 2003ರಲ್ಲಿ ವಿಶೇಷ ಕಾಯ್ದೆ ರೂಪಿಸಿದ್ದು, ವಿಶ್ವದಲ್ಲಿ ಪ್ರತಿವರ್ಷ 55 ಲಕ್ಷ ಜನರು ಹಾಗೂ ಭಾರತದಲ್ಲಿ 10 ಲಕ್ಷ ಜನ ಸಾವನ್ನಪ್ಪುತ್ತಿದ್ದು, ಸರ್ಕಾರದ ಅಂಕಿ ಅಂಶಗಳಿಂದ ಪ್ರತಿನಿತ್ಯ 2200 ಜನ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ವಿಷಾಣುಗಳನ್ನು ಹೊಂದಿರುವ ತಂಬಾಕು ಮಾನವನ ಆರೋಗ್ಯದ ಮೇಲೆ ಭಾರಿ ಪ್ರಮಾಣದ ದುಷ್ಪರಿಣಾಮ ಬೀರುತ್ತಿದ್ದರೂ ಈ ಕುರಿತು ಜನರಲ್ಲಿ ಸಮಗ್ರ ಅರಿವು ಮೂಡುವಲ್ಲಿ ವೈಫಲ್ಯ ಜರುಗುತ್ತಿದೆ. ತಂಬಾಕು ಸೇವನೆಯಿಂದ ಮಾನವನ ಆರೋಗ್ಯದೊಂದಿಗೆ ಪರಿಸರವೂ ಹಾನಿಯಾಗುತ್ತಿದೆ. ಸಾಮಾಜಿಕ ಜಾಗೃತಿಯ ಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ. ಹದಿಹರೆಯದವರು, ಯುವಜನಾಂಗ ಹಾಗೂ ಮಹಿಳೆಯರು ಈ ದುಶ್ಚಟಕ್ಕೆ ಒಳಗಾಗುತ್ತಿರುವುದು ಒಂದು ಸಾಮಾಜಿಕವಾಗಿ ಮಾರಕ ಸಮಸ್ಯೆಯಾಗಿ ಉಲ್ಭಣವಾಗುತ್ತಿದೆ. ತಂಬಾಕು ಹೆಣ್ಣು, ಗಂಡು, ಬಡವ ಬಲ್ಲಿದನೆಂಬ ಬೇಧವಿಲ್ಲದೇ ಎಲ್ಲ ವರ್ಗದ ಜನರನ್ನು ತನ್ನ ದಾಸನನ್ನಾಗಿ ಮಾಡಿಕೊಳ್ಳುತ್ತಿದ್ದು, ಜನಸಮುದಾಯದ ವರ್ತನೆಯಲ್ಲಿ ಬದಲಾವಣೆ ತರಲು ಪ್ರತಿಯೊಬ್ಬ ನಾಗರಿಕನು ಮಹತ್ವದ ಪಾತ್ರ ನಿರ್ವಹಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಿಎಚ್‌ಒ ಡಾ. ಡಿ.ಬಿ. ಚೆನ್ನಶೆಟ್ಟಿ ಮಾತನಾಡಿ, ಬ್ರಿಟಿಷರಿಂದ ಬಳುವಳಿಯಾಗಿ ಬಂದ ತಂಬಾಕು ಭಾರತದಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿ ಪಸರಿಸಿ ಸಮುದಾಯದ ಆರೋಗ್ಯ ಹಾನಿಗೆ ಕಾರಣವಾಗಿದ್ದು, ಕೇವಲ ಕಾನೂನಿನಿಂದ ಮಾತ್ರ ಇದನ್ನು ನಿಯಂತ್ರಿಸುವುದು ಅಸಾಧ್ಯ. ಕಾರಣ ಜನರ ಮನೋಸ್ಥಿತಿ ಬದಲಾವಣೆಗೆ ನಾವೆಲ್ಲ ಶ್ರಮಿಸಬೇಕಾಗಿದೆ ಎಂದರು. ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ವಾಣಿ ಶಿವಪುರ, ನರಗುಂದ ತಹಸೀಲ್ದಾರ್ ಎನ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ಸಲಹೆಗಾರ ಡಾ. ಜಗನ್ನಾಥ ಹಾಗೂ ಜಿಲ್ಲಾ ಕಾರ್ಯಕ್ರಮ ನಿರ್ವಹಣಾಧಿಕಾರಿ ವೈ.ಕೆ. ಭಜಂತ್ರಿ ಅವರಿಂದ ವಿಶೇಷ ಉಪನ್ಯಾಸ ಜರುಗಿತು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.