ಜನತೆ ಅಧ್ಯಾತ್ಮದತ್ತ ಒಲವು ತೋರಲಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 10
ಎಲ್ಲೆಡೆ ಅನ್ಯಾಯ, ಅನೀತಿ, ಅಧರ್ಮ, ಅನೈತಿಕತೆ, ಭ್ರಷ್ಟಾಚಾರದಂತಹ ಹೀನ ಕೃತ್ಯಗಳು ತಾಂಡವಾಡುತ್ತಿವೆ. ಅವು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ. ಇವುಗಳಿಂದ ಹೊರಬರಬೇಕಾದರೆ ಜನ ಅಧ್ಯಾತ್ಮದತ್ತ ವಾಲಬೇಕು ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ಮಠದಲ್ಲಿ ಈಚೆಗೆ ಜರುಗಿದ ಹೇಮರಡ್ಡಿ ಮಲ್ಲಮನ ಪುರಾಣ ಮಂಗಲೋತ್ಸವದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದರು.
ಆಧುನಿಕತೆ ಆಕರ್ಷಣೆಯ ಭರಾಟೆಯಲ್ಲಿ ಮಾನವ ಆಧ್ಯಾತ್ಮವನ್ನು ಮರೆಯುತ್ತಿದ್ದಾನೆ. ಅನಾದಿ ಕಾಲದಿಂದಲೂ ಇರುವ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿರುವ ಜವಾಬ್ದಾರಿ ಪ್ರಜ್ಞಾವಂತ ಯುವಕರ ಮೇಲಿದೆ. ಆಧ್ಯಾತ್ಮದಿಂದ ಮಾನವರು ಜ್ಞಾನ, ಪರಿಶುದ್ಧ ಶಾಂತಿ, ನಿರ್ಲಿಪ್ತತೆ, ಸಹನೆ ಜತೆಗೆ ಆಧ್ಯಾತ್ಮಿಕ ದರ್ಶನ ಮತ್ತು ಆನಂದವನ್ನು ಪಡೆದುಕೊಳ್ಳುತ್ತಾರೆ ಎಂದರು.
ಶರಣರು ಈ ನಾಡಿಗೆ ನೀಡಿದ ತತ್ವ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕಿಗೆ ನೈಜತೆ ಬರುತ್ತದೆ. ನಾಡಿನ ಹರಗುರು ಚರಮೂರ್ತಿಗಳು ನೀಡಿದ ಮಹಾನ್ ವೇದಾಂತಗಳು ದಾರಿ ದೀಪಗಳಾಗಿವೆ. ಭಕ್ತರು ತನುಮನ ಶುದ್ಧೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕು. ಸ್ವಾರ್ಥವೆಂಬುದು ಮಾನವರ ಯೋಗ್ಯತೆಗೆ ತರವಲ್ಲ. ಸಮಾಜದ ಎಲ್ಲರನ್ನು ಒಂದುಗೂಡಿಸಿ ಪ್ರೀತಿ ಮತ್ತು ಸಮಾನತೆಯಿಂದ ನೋಡಿದಲ್ಲಿ ಭಕ್ತರ ಬಾಳು ಪುಣ್ಯ ಪಾಮರವಾಗುತ್ತದೆ ಎಂದುಹೇಳಿದರು.
ಇಟಗಿಯ ಮಡಿವಾಳೇಶ್ವರ ಶ್ರೀಗಳು ಹಾಗೂ ಹೂವಿನಹಡಗಲಿಯ ಹಿರಿ ಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತೀಯರ ನರ-ನಾಡಿಗಳಲ್ಲಿ ಧರ್ಮ ಹಾಗೂ ದೇವರಿಗೆ ಮಹತ್ವದ ಸ್ಥಾನವಿದೆ. ಬಂಡಿಗೆ ಕೀಲ ಹೇಗೆ ಅವಶ್ಯವೋ ಹಾಗೆಯೇ ಮಾನವನ ಭಾವನೆಗಳಿಗೆ ಧಾರ್ಮಿಕ ಕಟ್ಟಳೆ ಅವಶ್ಯ. ಮನುಷ್ಯ ಆಚಾರ ಮತ್ತು ವಿಚಾರಗಳನ್ನು ಮರೆತಾಗ ನರಕ ಜೀವನ ಅನುಭವಿಸಬೇಕಾಗುತ್ತದೆ. ಮಠಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಮಾನವ ತನ್ನ ಉನ್ನತಿಗಾಗಿ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ಸದಸ್ಯ ಮೋಹನ್ ಗುತ್ತೆಮ್ಮನವರ, ಸಿದ್ರಾಮಪ್ಪ ಮೊರಬದ, ದೇವರಡ್ಡಿ ಅಳವಂಡಿ, ಜಗದೀಶ ಗಾಂಜಿ, ಕೊಟ್ರೇಶ ಸಜ್ಜನರ, ಎನ್.ಎನ್. ಗೋಕಾವಿ, ಲಕ್ಷ್ಮಣಗೌಡ್ರ ಪಾಟೀಲ, ಮಲ್ಲೇಶಪ್ಪ ಸಜ್ಜನ, ವೈ.ಬಿ. ಆಲೂರ, ರುದ್ರಪ್ಪ ಚಿಂಚಲಿ, ರಮೇಶ ಮರಡ್ಡಿ, ಬಿ.ಎಚ್. ಹ್ಯಾಟಿ, ಮಲ್ಲಿಕಾರ್ಜುನ ಶ್ಯಾಗೋಟಿ, ಮಹೇಶ ಬಡ್ನಿ, ನವೀನ ಬಸವರಡ್ಡಿ ಕಾರ್ಯಕ್ರಮದಲ್ಲಿ ಇದ್ದರು.
ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಸ್ವಾಗತಿಸಿದರು. ತಾಪಂ ಸದಸ್ಯ ತಿಮ್ಮರಡ್ಡಿ ಅಳವಂಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

