ಮಾಧ್ಯಮದವರನ್ನು ಹೊರಗಿಟ್ಟು ಯಾವಗಲ್ ಸಭೆ
ರೋಣ: ರೋಣ ತಾಪಂ ಸಭಾಭವನದಲ್ಲಿ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಮತ್ತು ರೋಣ ತಾಲೂಕಿಗೆ ಒಳಪಡುವ ನರಗುಂದ ಮತಕ್ಷೇತ್ರದ ಕೆಲ ಗ್ರಾಪಂಗಳ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಗೆ ಮಾಧ್ಯಮದವರನ್ನು ಹೊರಗಿಡುವ ಮೂಲಕ ನರಗುಂದ ಶಾಸಕರಾದ ಬಿ.ಆರ್. ಯಾವಗಲ್ ಅವರು ಸಭೆ ನಡೆಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಸಭೆ ಮಂಗಳವಾರ ಮಧ್ಯಾಹ್ನ 3ಕ್ಕೆ ನಿಗದಿಯಾಗಿತ್ತಾದರೂ, ಆರಂಭಗೊಂಡಿದ್ದು ಸಂಜೆ 4.30ಕ್ಕೆ, ನಿಗದಿತ ಸಮಯಕ್ಕೆ ಎಲ್ಲಾ ಅಧಿಕಾರಿಗಳು ಸಭೆಗೆ ಹಾಜರಿದ್ದು, ಶಾಸಕ ಯಾವಗಲ್ ಅವರು ಬರುವವರೆಗೂ ಅಧಿಕಾರಿಗಳು ಕಾಯ್ದು ಸುಸ್ತಾಗಿದ್ದರು. ನನ್ನ ಅಧ್ಯಕ್ಷತೆಯಲ್ಲಿ ನಡೆಯಬೇಕಾದ ಸಭೆಗೆ ಯಾವುದೇ ಕಾರಣಕ್ಕೂ ಮಾಧ್ಯಮದವರಿಗೆ ಪ್ರವೇಶ ನೀಡಬಾರದೆಂದು ಯಾವಗಲ್ ಅವರು ಮೊದಲೇ ಅಧಿಕಾರಿಗಳಿಗೆ ತಾಕೀತು ಮಾಡಿದ್ದರಂತೆ. ಅದರಂತೆ ಸಭೆಯ ಜವಾಬ್ದಾರಿ ಹೊತ್ತ ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಅವರು ಮಾಧ್ಯಮದವರಿಗೆ ಸಭೆಗೆ ಬರುವಂತೆ ಆಹ್ವಾನ ನೀಡಿರಲಿಲ್ಲ ಎನ್ನುವುದು ತಿಳಿದು ಬಂದಿದೆ.
ಮುಖ್ಯವಾಗಿ ಸಭೆ ನಡೆದಿದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿಯ ಬಗ್ಗೆಯಾದರೂ, ಸಭೆಯಲ್ಲಿ ಬೇರೆ ರೀತಿಯ ವಿದ್ಯಮಾನಗಳು ಮತ್ತು ಮಾತುಕತೆಗಳು ಶಾಸಕ ಬಿ.ಆರ್. ಯಾವಗಲ್ರಿಂದ ಕೇಳಿ ಬಂದವು ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲ ಅಧಿಕಾರಿಗಳು ಮಾಧ್ಯಮದವರಿಗೆ ತಿಳಿಸಿದರು.
ಶಾಸಕ ಪಾಟೀಲ ಪ್ರಾಬಲ್ಯ ಕುಗ್ಗಿಸಲು ತಂತ್ರ:ಸಭೆಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಕುರಿತು ಚರ್ಚಿಸಬೇಕಾದ ವಿಷಯದ ಬದಲಿಗೆ, ತಮ್ಮ ಕ್ಷೇತ್ರಕ್ಕೆ ಬರತಕ್ಕಂತ ಹಳ್ಳಿಗಳು ನನ್ನ ಅಧೀನಕ್ಕೆ ಒಳಪಡುತ್ತವೆ. ಅದರಂತೆ ಅಧಿಕಾರಿಗಳು ನನ್ನ ಸಲಹೆಯನ್ನು ಪಡೆಯಬೇಕೇ ಹೊರತು ಶಾಸಕ ಜಿ.ಎಸ್. ಪಾಟೀಲರ ಸಲಹೆಯನ್ನಲ್ಲ ಎಂದು ಸಭೆಯೂದ್ದಕ್ಕೂ ಅಧಿಕಾರಿಗಳಿಗೆ ಶಾಸಕ ಯಾವಗಲ್ ಅವರು ತಾಕೀತು ಮಾಡಿದರಂತೆ.
ರೋಣ ಶಾಸಕ ಜಿ.ಎಸ್. ಪಾಟೀಲ ನರಗುಂದ ಮತಕ್ಷೇತ್ರಕ್ಕೆ ಒಳಪಡುವ ಎಲ್ಲ ಗ್ರಾಮಗಳ ಮೇಲೂ ಹಿಡಿತ ಹೊಂದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಶಾಸಕ ಬಿ.ಆರ್. ಯಾವಗಲ್ ಅವರು ಅಧಿಕಾರಿಗಳಿಗೆ ಒತ್ತಡ ತರುವ ಮೂಲಕ ರೋಣ ಮತಕ್ಷೇತ್ರದ ಅರ್ಧದಷ್ಟು ಹಳ್ಳಿಗಳು ನನ್ನ ಪಾಲಿಗೆ ಬರುತ್ತಿವೆ. ಹಿರಿಯ ಅಧಿಕಾರಿಗಳು ಸೇರಿದಂತೆ ಪಿಡಿಒಗಳೂ ನನ್ನ ಮಾತನ್ನು ಆಲಿಸಬೇಕು. ಜತೆಗೆ ನಾನು ಹೇಳಿದ ರಿತಿಯಲ್ಲಿ ಕೆಲಸಗಳನ್ನು ನಿರ್ವಹಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರಸಂಗ ನಡೆದಿದೆ.
ಸೆ. 5ರಂದು ಬಂಡಾಯ: ಸೆ. 5ರಂದು ರೋಣದಲ್ಲಿ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚಾರಣೆಯಲ್ಲಿ ಶಾಸಕ ಯಾವಗಲ್ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಶಾಸಕ ಯಾವಗಲ್ ಅವರು, ರೋಣ ತಾಲೂಕಿನಲ್ಲಿರುವ ನನ್ನ ಮತ ಕ್ಷೇತ್ರದ ಹಳ್ಳಿಗಳ ಮೇಲೆ ಶಾಸಕ ಜಿ.ಎಸ್. ಪಾಟೀಲರು ಹಿಡಿತ ಹೊಂದಿದ್ದು, ಇದು ಕಡಿಮೆಯಾಗಬೇಕು ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

