ಗದಗ

ರೈತರ ಕೈಹಿಡಿದ ಸುಗಂಧಿ ಪುಷ್ಪ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 12
ಸದಾ ಬರಗಾಲಕ್ಕೆ ತುತ್ತಾಗಿ ಹಲವಾರು ಸಮಸ್ಯೆ ಎದುರಿಸುತ್ತ ಬದುಕುತ್ತಿರುವ ಚಿಲ್‌ಝರಿ ಗ್ರಾಮದ ರೈತರನ್ನು ಈಗ ಸುವಾಸನೆಯುಕ್ತ ಸುಗಂಧಿ ಪುಷ್ಪ ಕೈ ಹಿಡಿದಿದೆ.
ತೋಟಗಾರಿಕೆ ಇಲಾಖೆಯ ಕಿಂಚಿತ್ತೂ ಸೌಕರ್ಯ ಪಡೆಯದೇ ತೋಟದಲ್ಲಿ ಎಲ್ಲರನ್ನೂ ತನ್ನತ್ತ ಸೆಳೆದಿರುವ ಸುಗಂದಿ ಪುಷ್ಟ ತನ್ನದೇ ಆದ ವಿಶಿಷ್ಟ ಸೌಂದರ್ಯ ಹಾಗೂ ಸುಗಂಧ ಪರಿಮಳದಿಂದ ಅನ್ನದಾತನ ಬದಕನ್ನು ಅರಳಿಸಿದೆ.
ಚಿಲಝರಿ ಗ್ರಾಮದ ಶರಣಪ್ಪ ಕಡಬಲಕಟ್ಟಿ, ಶಿವಪ್ಪ ನರೇಗಲ್, ಕರಿಯಪ್ಪ ನರೇಗಲ್, ಶೇಖರಪ್ಪ ಕಡಬಲಕಟ್ಟಿ, ದೇವಪ್ಪ ಕಡಬಲಕಟ್ಟಿ, ಗುರುಬಸಪ್ಪ ಕಡಬಲಕಟ್ಟಿ, ಸಂಗಪ್ಪ ಕಡಬಲಕಟ್ಟಿ, ಬರಮಪ್ಪ ಮಾದರ, ಗುರಲಿಂಗಪ್ಪ ಕೆರೂರ, ಯಮನುರಪ್ಪ ಮಾದರ, ವಿರೂಪಾಕ್ಷಪ್ಪ ಕೆರೂರ, ದೇವಪ್ಪ ಕಡಬಲಕಟ್ಟಿ ಸೇರಿದಂತೆ ಇನ್ನಿತರ ರೈತರು ತಮ್ಮ 1, 2, 4 ಎಕರೆ ತೋಟದಲ್ಲಿ ಸುಗಂಧಿ ಪುಷ್ಪ ಬೆಳೆದಿದ್ದಾರೆ. ಇದರಿಂದ ರೈತರಿಗೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ.
ಕೈ ಕೆಸರಾದರೆ ಬಾಯಿ ಮೊಸರು: ಮೈ ಮುರಿದು ದುಡಿದರೆ ಭೂತಾಯಿ ಕೈ ಬಿಡುವುದಿಲ್ಲ ಎನ್ನುವ ದೇವಪ್ಪ ಕಡಬಲಕಟ್ಟಿ ಅವರು 4 ಎಕರೆ ತೋಟದಲ್ಲಿ 1 ಎಕರೆಯಲ್ಲಿ ಸುಗಂಧಿ ಪುಷ್ಪ ಬೆಳೆದಿದ್ದಾರೆ. ಬೋರ್‌ವೆಲ್ ನೀರಾವರಿ ಅಳವಡಿಸಿಕೊಂಡು ಕೆಲ ತಿಂಗಳ ಹಿಂದೆ ನಿತ್ಯ 30-35 ಕೆಜಿ ಸುಗಂಧಿ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಲಾಗಿತ್ತು. ಈಗ ಅಂತರ್ಜಲಮಟ್ಟ ಕುಸಿತದಿಂದ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದೆ. ಜತೆಗೆ ವಿದ್ಯುತ್ ಅಭಾವದಿಂದ ಸೂರ್ಯಕಾಂತಿ ಬೆಳೆ, ಸುಗಂಧಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಈಗ 7ಕೆಜಿ ವರೆಗೆ ಬರುತ್ತದೆ. 1 ಕೆಜಿಗೆ ರು. 50ರಂತೆ ಗಜೇಂದ್ರಗಡ, ಗದಗ, ಇಲಕಲ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.
ಮಾರ್ಗದರ್ಶನದ ಕೊರತೆ: ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ರೈತರ ತೋಟಗಳಿಗೆ ತೆರಳಿ ಬೆಳೆಗಾರರಿಗೆ ಸೂಕ್ತ ನಿರ್ದೇಶನ, ಸಲಹೆ ಸೂಚನೆ ನೀಡುವುದರ ಜತೆಗೆ ಬೆಳೆಗಳ ಕೀಟ ಭಾದೆ, ರೋಗಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ತೋಟಗಾರಿಕೆ ಅಧಿಕಾರಿಗಳ ಕಾರ್ಯ. ಆದರೆ ತಾಲೂಕಿನ ಯಾವುದೇ ತೋಟಕ್ಕೆ ಹೋಗಿ ಅಧಿಕಾರಿಗಳು ಬೆಳೆಗಳನ್ನು ಪರಿಶೀಲಿಸುವುದಾಗಲಿ, ಸರ್ಕಾರ ಸಣ್ಣ ರೈತರಿಗೆ ನೀಡುವ ರು. 12 ಸಾವಿರ ಹಾಗೂ ದೊಡ್ಡ ರೈತರಿಗೆ ನೀಡುವ ರು. 7,920 ಪ್ರೋತ್ಸಾಹಧನವನ್ನು ಸಂಬಂಧಿಸಿದ ರೈತರಿಗೆ ನೀಡುವ ಕಾರ್ಯನಡೆದಿಲ್ಲ ಎನ್ನುತ್ತಾರೆ ದೇವಪ್ಪ ಕಡಬಲಕಟ್ಟಿ (ಚಿಲಝರಿ ಗ್ರಾಮದ ಪ್ರಗತಿಪರ ರೈತ)
ಮಾರಾಟಗಾರಿಗೆ ಹೆಚ್ಚು ಲಾಭ: ಸುಗಂಧಿ ಹಾಗೂ ಮಲ್ಲಿಗೆಗೆ ಯಾವಾಗಲೂ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಹಬ್ಬ, ಹರಿದಿನಗಳು, ಮದುವೆ, ಜಾತ್ರೆಗಳು ಹೆಚ್ಚು ನಡೆಯುವುದರಿಂದ ಈ ದಿನಗಳಲ್ಲಿ ಮಲ್ಲಿಗೆಗೆ ಕೆಜಿಗೆ ರು. 300 ರಿಂದ 400 ವರೆಗೆ ದರ ಇರುತ್ತದೆ. ಆದರೆ ಜುಲೈಯಿಂದ ಮಾರ್ಚ್‌ವರೆಗೆ ಶುಭ ಸಮಾರಂಭಗಳು ವಿರಳವಾಗಿರುವುದರಿಂದ ಕೆಜಿಗೆ ರು. 50ರಿಂದ 60 ಇರುತ್ತದೆ.
-- ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.