ಈರುಳ್ಳಿ ಬೆಲೆ ಕುಸಿತ: ರೈತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಡಿ. 12
ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಈರುಳ್ಳಿ ಬೆಲೆಯು ಸಂಪೂರ್ಣ ಇಳಿಕೆಯಾಗಿದೆ. ಬೆಲೆ ಇಳಿಕೆಗೆ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರು ಶಾಮೀಲಾಗಿ ರೈತರಿಗೆ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ ಗುರುವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಈರಯ್ಯ ಲಾಯಲಗುಂದಿ ಮಾತನಾಡಿ, ಕಳೆದ ಹಲವು ದಿನಗಳಿಂದ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರು ಶಾಮೀಲಾಗಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರು ತಂದ ಈರುಳ್ಳಿಯನ್ನು ಎಪಿಎಂಸಿಯಲ್ಲಿನ ವ್ಯಾಪಾರಸ್ಥರು ಬೆಳಗ್ಗೆ ಒಂದು ಬೆಲೆಯಲ್ಲಿ ಕೊಂಡರೆ, ಮಧ್ಯಾಹ್ನ ಒಂದು ಬೆಲೆಯಲ್ಲಿ ಕೊಳ್ಳಲಾಗುತ್ತಿದೆ. ಮೊದ ಮೊದಲು ದೊಡ್ಡ ಗಾತ್ರದ ಈರುಳ್ಳಿಯನ್ನು ರು. 2000-3000 ಸಾವಿರದವರೆಗೆ ಕೊಂಡುಕೊಳ್ಳಲಾಗುತ್ತಿತ್ತು. ಆದರೆ, ನಂತರದ 2-3 ದಿನಗಳಲ್ಲಿ ದರವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ.
ಬುಧವಾರದಂದು ದೊಡ್ಡ ಗಾತ್ರದ ಈರುಳ್ಳಿಗೆ ರು. 2 ಸಾವಿರದಿಂದ ಹಿಡಿದು 2400, 2500 ವರೆಗೆ ಮಾರಾಟ ಮಾಡಲಾಗಿದೆ. ಆದರೆ ಗುರುವಾರ ದೊಡ್ಡಗಾತ್ರದ ಈರುಳ್ಳಿಯನ್ನು ಕೇವಲ ರು. 500-800 ರವರೆಗೆ ಕೇಳಲಾಗುತ್ತಿದೆ. ಒಂದು ಚೀಲ ಈರುಳ್ಳಿಯನ್ನು ಬಿತ್ತಿ ಬೆಳೆಯ ಬೇಕಾದರೆ ಸಾವಿರಾರು ಹಣ ಖರ್ಚು ಮಾಡಲಾಗುತ್ತದೆ. ಕಿತ್ತು ಹಾಕಿರುವ ಈರುಳ್ಳಿ ಹೆಚ್ಚಲು ರು. 100-200 ರವರೆಗೆ ಕೂಲಿ ನೀಡಲಾಗುತ್ತದೆ. ಇನ್ನು ಹೆಚ್ಚಿ ಚೀಲಕ್ಕೆ ಭರ್ತಿ ಮಾಡಿ ಮಾರುಕಟ್ಟೆಗೆ ತರುವುದರೊಳಗೆ ಒಂದು ಈರುಳ್ಳಿ ಚೀಲಕ್ಕೆ ರು. 500-600 ವರೆಗೆ ಖರ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಗಾತ್ರದ ಈರುಳ್ಳಿಗೆ ಪ್ರತಿ ಕ್ವಿಂಟಲ್ಗೆ ರು. 400-800 ವರೆಗೆ ಬೇಕಾಬಿಟ್ಟಿಯಾಗಿ ಕೇಳಲಾಗುತ್ತಿದೆ. ರೈತರು ವರ್ಷಪೂರ್ತಿ ದುಡಿದ ಈರುಳ್ಳಿಗೆ ಬೆಲೆಯೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಶರಣಬಸವ ಚಿಕ್ಕರಡ್ಡಿ ಮಾತನಾಡಿ, ಇಲ್ಲಿಯವರೆಗೂ ಯಾವ ಪಕ್ಷವೂ ರೈತರ ಏಳ್ಗೆಗೆ ಶ್ರಮಿಸಿಲ್ಲ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಕೇವಲ ಹೇಳಿಕೆಗೆ ಮಾತ್ರ ರೈತ ಪರಪಕ್ಷ ಎಂದು ಹೇಳಿಕೊಳ್ಳುತ್ತಿವೆಯೇ ಹೊರತು ರೈತರ ಏಳ್ಗೆಗೆ ಶ್ರಮಿಸುತ್ತಿಲ್ಲ. ರೈತರ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ರೈತರ ಏಳ್ಗೆಗೆ ಶ್ರಮಿಸದೇ ರೈತರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸರ್ಕಾರವು ಕಬ್ಬು, ಬತ್ತ ಸೇರಿದಂತೆ ಹಲವು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ. ಆದರೆ ಈರುಳ್ಳಿ ಬೆಲೆಯೂ ಕುಸಿದಿದ್ದರೂ ಸರ್ಕಾರವು ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸದೇ, ಒಣಬೇಸಾಯ ಮಾಡುವ ರೈತರ ಮೇಲೆ ತಾರತಮ್ಯ ತೋರುತ್ತಿದೆ. ರೈತರು ವರ್ಷಪೂರ್ತಿ ಶ್ರಮವಹಿಸಿ ದುಡಿದ ಬೆಳೆಗಳಿಗೆ ದಲ್ಲಾಳಿಗಳು, ವ್ಯಾಪಾರಸ್ಥರು ಬೇಕಾಬಿಟ್ಟಿಯಾಗಿ ಬೆಲೆನಿಗದಿ ಮಾಡಿಕೊಂಡು ತಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಕೂಡಲೇ ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ ಕೊಂಡುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು. ಹಲವು ಗಂಟೆಗಳ ಕಾಲ ನಡೆದ ರೈತರ ಪ್ರತಿಭಟನೆಯು ಸಂಜೆಯ ವೇಳೆಯವರೆಗೂ ಮುಂದುವರೆಯಿತು.
ಪೊಲೀಸರೊಂದಿಗೆ ವಾಗ್ವಾದ
ರೈತರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ರೈತರ ಮನವೊಲಿಕೆ ನಡೆಸಿ ಮತ್ತೆ ಈರುಳ್ಳಿ ವ್ಯಾಪಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮತ್ತೆ ದಲ್ಲಾಳಿಗಳು ಈರುಳ್ಳಿಗೆ ರು. 1000 ಸಾವಿರದಿಂದ 1200ಕ್ಕೆ ಕೇಳುತ್ತಿದ್ದಂತೆಯೇ ಆಕ್ರೋಶಗೊಂಡ ರೈತರು ಮತ್ತೆ ದಲ್ಲಾಳಿಗಳನ್ನು ಹಾಗೂ ವ್ಯಾಪಾರಸ್ಥರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ರೈತರ ಮಧ್ಯೆ ಕೆಲಕಾಲ ಮಾತಿನ ವಾಗ್ವಾದ ಜರುಗಿತು. ನಂತರ ಪ್ರತಿಭಟನಾಕಾರರು ನಗರದ ಹಳೆ ಡಿಸಿ ಕಚೇರಿಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

