ಗದಗ

ಚಳಿಚಳಿ ತಾಳೆನು ಈ ಚಳಿಯಾ...

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 13
ಕಳೆದ ಕೆಲ ದಿನಗಳಿಂದ ಮುಂಡರಗಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಳಿ ಜೋರಾಗಿ ಪ್ರಾರಂಭವಾಗಿದ್ದು, ಉಷ್ಣಾಂಶ 15 ಡಿಗ್ರಿಗಿಂತಲೂ ಕೆಳಗೆ ಇಳಿದಿದ್ದರಿಂದ ಜನತೆ ತತ್ತರಿಸಿ ಹೋಗಿದ್ದಾರೆ.
ಬೆಳಗಿನ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ಜನತೆ ರಸ್ತೆ ಪಕ್ಕದಲ್ಲಿ, ಬಜಾರ್‌ದಲ್ಲಿ, ಬಸ್ ನಿಲ್ದಾಣದ ಹತ್ತಿರ ಹೀಗೆ ಎಲ್ಲೆಂದರಲ್ಲಿ ಬೆಂಕಿ ಹಾಕಿಕೊಂಡು ಗುಂಪುಗುಂಪಾಗಿ ಬಿಸಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಚಳಿಯ ಅಬ್ಬರ ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಹೋಟೆಲ್‌ಗಳ ಮುಂದೆ ಬಿಸಿ ಬಿಸಿ ಚಹಾಕ್ಕೆ ಮೊರೆ ಹೋಗುತ್ತಿದ್ದಾರೆ.
ಬಿಸಿಲು ಬಂದ ನಂತರ ವಾಯುವಿಹಾರ: ಪ್ರತಿದಿನ ಬೆಳಗ್ಗೆ 5-30ರಿಂದ 6ಗಂಟೆ ಸಮಯದಲ್ಲಿ ಜನತೆ ವಾಯುವಿಹಾರಕ್ಕೆಂದು ಹೋಗುತ್ತಿದ್ದರಿಂದ ತುಂಬಿ ತುಳುಕುತ್ತಿದ್ದ ಹೆಸರೂರ ರಸ್ತೆ, ರಾಮೇನಹಳ್ಳಿ ರಸ್ತೆ, ಮುಂಡರಗಿ-ಶಿರಹಟ್ಟಿ ರಸ್ತೆ, ಕೊಪ್ಪಳ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆ, ಗದಗ ಮುಂಡರಗಿ ರಸ್ತೆ, ಕನಕರಾಯಣ ಗುಡ್ಡದ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. 5-6 ದಿನಗಳಿಂದ ಹೆಚ್ಚು ಚಳಿ ಪ್ರಾರಂಭವಾಗಿರವ ಹಿನ್ನೆಲೆಯಲ್ಲಿ ಇಲ್ಲಿನ ವಾಕಿಂಗ್ ಪ್ರಿಯರು ಸೂರ್ಯನ ಆಗಮನವಾದ ನಂತರವೇ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ.
ಚಳಿಯಲ್ಲೇ ನಿತ್ಯ ಕಾರ್ಯ: ಎಷ್ಟೇ ಮಳೆ, ಚಳಿ, ಗಾಳಿ ಇದ್ದರೂ ಕೆಲವು ಉದ್ಯೋಗಗಳನ್ನು ಮಾಡುವವರು ಅನಿವಾರ್ಯವಾಗಿ ಈ ಎಲ್ಲವನ್ನೂ ಎದುರಿಸಿ, ತಮ್ಮ ಉದ್ಯೋಗ ಮಾಡುವುದು ಅನಿವಾರ್ಯವಾಗಿರುತ್ತದೆ. ಇದೀಗ ಸಾಕಷ್ಟು ಚಳಿ ಇದ್ದರೂ ನಿತ್ಯ ಓದುಗರಿಗೆ ದಿನಪತ್ರಿಕೆ ತಲುಪಿಸುವ ಎಲ್ಲ ಪತ್ರಿಕಾ ವಿತರಕರು ಹಾಗೂ ಗದಗದಿಂದ ಪತ್ರಿಕೆಗಳನ್ನು ಸರಬರಾಜು ಮಾಡುವವರು ಬೆಳಗಿನ 5 ಗಂಟೆಯಿಂದ ತಮ್ಮ ಕಾರ್ಯವನ್ನು ಪ್ರಾರಂಭಿಸುವುದು ಚಳಿ ಇಂಥವರಿಗೆಲ್ಲ ಹೆಚ್ಚಿನ ಕಿರಿಕಿರಿ ಯಾದಂತಾಗಿದೆ. ಅದರಂತೆ ನಿತ್ಯ ಎಲ್ಲ ಮನೆಗಳಿಗೆ ಹಾಲು ಸರಬರಾಜು ಮಾಡುವವರು, ತರಕಾರಿ ಮಾರಾಟಗಾರರು ಹಾಗೂ ಹಾಗೂ ಅವುಗಳನ್ನು ತರುವ ರೈತರಿಗೆ ಚಳಿಯ ತಲೆ ನೋವು ತಪ್ಪುತ್ತಿಲ್ಲ. ಚಳಿಯನ್ನು ಲೆಕ್ಕಿಸದೇ ಸ್ವೇಟರ್‌ಗಳನ್ನು ಧರಿಸಿಕೊಂಡು ಸಾರ್ವಜನಿಕರ ಸೇವೆಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುತ್ತಿರುವುದು ಮಾತ್ರ ಮೆಚ್ಚಲೇಬೇಕು. ಗ್ರಾಮೀಣ ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬೆಳಗ್ಗೆ ಚಳಿಯಲ್ಲಿಯೇ ಮುದುಡಿಕೊಂಡು ಬರುತ್ತಿದ್ದಾರೆ.  
ಬಣಗುಡುತ್ತಿರುವ ಬಜಾರ್:
ಸಾಕಷ್ಟು ಚಳಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ನಿತ್ಯದ ಕಾರ್ಯಗಳನ್ನು ಸಂಜೆ 6-30ರೊಳಗೆ ಮುಗಿಸಿಕೊಂಡು 7-8 ಗಂಟೆಯೊಳಗೆ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ಸೇರುತ್ತಿರವುದು ಕಂಡು ಬರುತ್ತಿದೆ. ಚಳಿಯಿಂದಾಗಿ ಹಲವರು ಉಣ್ಣೆಯ ಸ್ವೇಟರ್, ತಲೆಗೆ ಉಣ್ಣೆಯ ಟೊಪ್ಪಿಗೆ ಹಾಗೂ ಕಾಲಲ್ಲಿ ಚಪ್ಪಲಿ ಹಾಕಿಕೊಂಡು ಮನೆಯಲ್ಲಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಸಂಜೆ ವೇಳೆಗೆ ಬಜಾರ್‌ದಲ್ಲಿನ ಅನೇಕ ಅಂಗಡಿಗಳಲ್ಲಿ, ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿವೆ.
ವಿಪರೀತ ಚಳಿಯಿಂದಾಗಿ ದಮ್ಮು, ಕೆಮ್ಮು, ಅಸ್ತಮಾ, ಸಂಧಿವಾತ, ಕೀಲುನೋವು, ಚರ್ಮ ಬಿರಿಯುವುದು, ಮುಖ ಒಡೆಯುವುದು ಸೇರಿದಂತೆ ಅನೇಕ ತೊಂದರೆಗಳು ಈ ಸಂದರ್ಭದಲ್ಲಿ ಹೆಚ್ಚು ಕಾಡುವ ಸಾಧ್ಯತೆ ಇವೆ. ದಮ್ಮು ಹಾಗೂ ಅಸ್ತಮಾ ಕಾಯಿಲೆ ಇರುವವರು ಸಾಕಷ್ಟು ತೊಂದರೆ ಅನುಭವಿಸುವುದು ಖಂಡಿತ. ಈ ಚಳಿಗಾಲದ ಸಂದರ್ಭದಲ್ಲಿ ನಿತ್ಯ ಬಿರುಕು ಬಿಡುವ ಮುಖ, ಮೈ, ಕೈಕಾಲುಗಳನ್ನು ನಿತ್ಯ ಸಂಜೆ ಮಲಗುವಾಗ ಬಿಸಿ ನೀರಿನಿಂದ ತೊಳೆದುಕೊಂಡು ನಂತರ ಸ್ವಚ್ಛವಾಗಿ ಒಣಗಿಸಿಕೊಂಡು ಕೋಲ್ಡ್‌ಕ್ರೀಂ ಅಥವಾ ವ್ಯಾಸಲೀನ್‌ಗಳನ್ನು ಹಚ್ಚಿಕೊಳ್ಳುವುದರಿಂದ ತಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಚರ್ಮಗಳಿಗಾಗುವ ತೊಂದರೆಯನ್ನು ತಡೆಯಬಹುದು. ಅಸ್ತಮಾ ಹಾಗೂ ದಮ್ಮು ಕಾಯಿಲೆ ಇರುವವರು ನಿಗದಿತ ಸಮಯದಲ್ಲಿ ತಪ್ಪದೇ ಔಷಧೋಪಚಾರ ಮಾಡಿಕೊಳ್ಳಬೇಕು.
- ಡಾ. ಅನ್ನದಾನಿ ಮೇಟಿ
ಮೃಡಗಿರಿ ಚಿಕಿತ್ಸಾಲಯದ ವೈದ್ಯ

 ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.