ಗದಗ

ಬಡತನದಲ್ಲಿಯೇ ಸಾಧನೆಗೈದ ಯೋಗಪಟು

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ಡಿ. 13
ಸಾಧಿಸುವ ಛಲ, ಶ್ರಮಪಟ್ಟು ಗುರಿ ಮುಟ್ಟಲು ಪ್ರಯತ್ನಿಸಿದರೆ ಫಲ ದೊರೆಯುವುದು ಖಂಡಿತ.
ಈ ತತ್ವ ಅಳವಡಿಸಿಕೊಂಡು ಮಾರುತಿ ಎನ್ನುವ ಯುವಕ ಯೋಗದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾನೆ.
ದೇಹವನ್ನು ರಬ್ಬರನಂತೆ ಬೆಂಡಾಗಿಸುವ ಈ ಪ್ರತಿಭೆ ಯೋಗಾಭ್ಯಾಸದಲ್ಲಿ ಈತನ ಸಾಹಸಮಯ ಪ್ರದರ್ಶನ ನೋಡಿದವರನ್ನು ಹುಬ್ಬೇರಿಸುವಂತೆ ಮಾಡದೇ ಇರದು.
ಮಾರುತಿ ಕೊಪ್ಪಳ ಸ್ಥಳೀಯ ಅನ್ನದಾನೇಶ್ವರ ಪಪೂ ಕಾಲೇಜ್‌ನಲ್ಲಿ ಪಿಯುಸಿ ದ್ವಿತೀಯ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸುತ್ತಿದ್ದು, ಬಡತನದ ನಡುವೆಯೇ ಕಲಿಯಬೇಕು ಎಂಬ ಛಲದೊಂದಿಗೆ ಗುರುವಿಲ್ಲದೇ ಯೋಗ ಸಾಧನೆ ಮಾಡಿ, ಈಚೆಗೆ ಬೀದರನಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದು, ಈಗ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಪ್ರತಿಭೆಯ ಪರಿಸ್ಥಿತಿ: ಮುರುಕಲು ಮನೆಯಲ್ಲಿ ಈತನ ವಾಸ, ಜೀವನ ನಿರ್ವಹಣೆಗೆ ತಂದೆ-ತಾಯಿ ದುಡಿದು ನಿತ್ಯ ತುತ್ತಿನ ಚೀಲ ತುಂಬಿಸಿಕೊಳ್ಳುವುದರ ಮಧ್ಯೆ ಮಗನನ್ನು ಪ್ರತಿಭಾವಂತನನ್ನಾಗಿಸಬೇಕೆಂಬ ಹೆಬ್ಬಯಕೆ. ಹೆತ್ತವರ ಕೀರ್ತಿ ಹೆಚ್ಚಿಸಬೇಕೆಂಬ ಆಶಯದಿಂದ ಮಾರುತಿ ತಮ್ಮ ಬಡತತನದ ಪರಿಸ್ಥಿತಿಯಲ್ಲಿಯೂ ಯೋಗವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ವಿವಿಧ ಆಸನಗಳು: ಪದ್ಮಾಸನ, ಬದ್ಧ ಪದ್ಮಾಸನ, ಗರ್ಭಾಸನ, ಶೀರ್ಸಾಸನ, ಚಕ್ರಾಸನ, ಸಂಪೂರ್ಣ ಚಕ್ರಾಸನ, ಶವಾಸನ, ಧನುರಾಸನ, ತೋಲಾಸನ, ಪಶ್ಚಿಮೋತ್ತಾಸನ, ಕುರುಮಾಸನ, ಹಲಾಸನ, ಉರ್ಧ್ವಮುಖ ಪಶ್ಚಿಮೋತ್ತಾಸನ, ಉತ್ತಿತ ಪದ್ಮಾಸನ, ಏಕಪಾದ ಕಂದರಾಸನ, ಉತ್ತಿತ ಪದ್ಮಾಸನ ಹೀಗೆ 50 ರಿಂದ 60 ಆಸನಗಳನ್ನು ಹಾಕುವ ಮಾರುತಿ ಯೋಗಾಭ್ಯಾಸದ ಸಮಯದಲ್ಲಿ ಏಕಾಂತದಲ್ಲಿ ತಾನೊಬ್ಬನೇ ತಾಳ್ಮೆ ಹಾಗೂ ಏಕಾಗ್ರತೆಯಿಂದ ತೊಡಗುತ್ತಾನೆ.
ಶಿಕ್ಷಣ: ಮಾರುತಿ ತನ್ನ 1-5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಓಜನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಕಲಿತು 6-10ನೇ ತರಗತಿವರೆಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಅಭ್ಯಶಿಸಿದ್ದಾನೆ. ಯೋಗಾಭ್ಯಾಸವನ್ನು 8ನೇ ತರಗತಿಯಿಂದ ಪ್ರಾರಂಭಿಸಿ, ಕೇವಲ 3 ವರ್ಷಗಳಲ್ಲಿ ಅಲ್ಲಿನ ಶಿಕ್ಷಕರ ಸಹಕಾರದಿಂದ ಅತ್ಯದ್ಭುತ ಸಾಧನೆ ಮಾಡಿದ್ದಾನೆ. ಪ್ರಸ್ತುತ ಕಾಲೇಜು ಹಂತದ ಶಿಕ್ಷಣವನ್ನು ನರೇಗಲ್ಲ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಅಭ್ಯಶಿಸುತ್ತಿದ್ದು, ಇಲ್ಲೂ ತನ್ನ ಅಭ್ಯಾಸದ ಜತೆಗೆ ಯೋಗಾಭ್ಯಾಸವನ್ನು ಮುಂದುವರೆಸಿದ್ದಾನೆ.
ಮಾರುತಿ ಕೊಪ್ಪಳಗೆ ಸಂಸ್ಥೆಯಲ್ಲಿ ಶಿಕ್ಷಣ ಶುಲ್ಕ, ವಸತಿ ನಿಲಯದ ಶುಲ್ಕ, ಅವಶ್ಯಕ ಪಠ್ಯ ಪುಸ್ತಕಗಳು ಹಾಗೂ ಉಚಿತ ಮೂಲ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯೋಗಾಭ್ಯಾಸದ ಜತೆಗೆ ಆರೋಗ್ಯವನ್ನು ಕಾಯ್ದುಕೊಳ್ಳುವುದು  ಮಹತ್ವದ್ದಾಗಿದೆ. ಯೋಗ ಮನುಷ್ಯನ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರಿಂದ ದೇಹಕ್ಕೆ ಸಮತೋಲನ ಆಹಾರ ತುಂಬಾ ಅವಶ್ಯಕವಾಗಿದ್ದು, ಉತ್ತಮ ಪೋಷಕಾಂಶವಿರುವ ಆಹಾರವನ್ನು ನಿಯಮಿತವಾಗಿ ನಮ್ಮ ಉಚಿತ ಪ್ರಸಾದದಿಂದ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು.
ಟ ಅನ್ನದಾನ ಶ್ರೀಗಳು
ಸಂಸ್ಥೆಯ ಅಧ್ಯಕ್ಷರು
ಪ್ರತಿದಿನ ಯೋಗ ಮಾಡುವುದರಿಂದ ದೇಹವನ್ನು ಸದೃಢಗೊಳಿಸುವಲ್ಲಿ ಸಹಕಾರಿ. ಆದರೆ, ಅದಕ್ಕೆ ತಕ್ಕ ಪೌಷ್ಟಿಕ ಆಹಾರ ಅವಶ್ಯಕ. ಈ ವಿದ್ಯಾರ್ಥಿಗೆ ಉತ್ತಮ ತರಬೇತುದಾರರ ಅವಶ್ಯಕತೆಯಿದೆ. ಅದರೊಂದಿಗೆ ಈತನಿಗೆ ಪ್ರತ್ಯೇಕವಾಗಿ ಉಸಿರಾಟ ಕ್ರಿಯೆಯ ಬಗೆಗೆ ಸಂಪೂರ್ಣ ಮಾಹಿತಿಯಿಲ್ಲ ಹೀಗಾಗಿ ಅದಕ್ಕೆ ಪರಿಣಿತಿ ಹೊಂದಿದ ತರಬೇತುದಾರರನ್ನು ಒದಗಿಸಿಕೊಡಲು ಪ್ರಯತ್ನಿಸುತ್ತೇವೆ.
-ವೈ.ಸಿ. ಪಾಟೀಲ
(ಅನ್ನದಾನೀಶ್ವರ ಪಪೂ ಕಾಲೇಜಿನ ಪ್ರಾಚಾರ್ಯ)
-ಪ್ರತಿಭಾ ಜೋಗಿ
 (ದೈಹಿಕ ಶಿಕ್ಷಣ ನಿರ್ದೇಶಕಿ)


ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.