ಗದಗ

ಬಿಸಿಯೂಟ ಸ್ಥಗಿತ: ಪ್ರತಿಭಟನೆ

Published On :

ಗಜೇಂದ್ರಗಡ: ಪಟ್ಟಣದ ಹಿಂದುಳಿದ ಸಮುದಾಯ ವಾಸಿಸುವ ಜನತಾ ಪ್ಲಾಟಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 7ರಲ್ಲಿ ಕಳೆದ 15 ದಿನಗಳಿಂದ ಅಕ್ಷರ ದಾಸೋಹ ಅಕ್ಕಿ ಪೂರೈಕೆ ಸ್ಥಗಿತವಾಗಿ ಮಕ್ಕಳಿಗೆ ಬಿಸಿಯೂಟ ಸಿಗದಿರುವುದನ್ನು ವಿರೋಧಿಸಿ ಪಾಲಕರು, ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕಲಿಯುತ್ತಿರುವ ಸರ್ಕಾರಿ ಶಾಲೆ ನಂ.7 ರಲ್ಲಿ 1ನೇ ತರಗತಿಯಿಂದ 5ನೇ ತರಗತಿಯ 80ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಯೋಜನೆ ಆಹಾರ(ಅಕ್ಕಿ) ಪೂರೈಕೆ ಸ್ಥಗಿತವಾಗಿದೆ. ಶಾಲೆ ಸಿಬ್ಬಂದಿ ಪಕ್ಕದ ಅಂಗನವಾಡಿ ಹಾಗೂ ಬೇರೆ ಶಾಲೆಯಿಂದ 5-10 ಕೆಜಿ ಅಕ್ಕಿ ಪಡೆದು ಬಿಸಿಯೂಟ ತಯಾರಿಸಿ ವಿತರಿಸುವ ದುಸ್ಥಿತಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾರು ಇತ್ತ ತಿರುಗಿನೋಡಿಲ್ಲ ಎಂದು ದೂರಿದರು.
ಈ ಸಂದರ್ಭ ಅನ್ನಕ್ಕ ಭಜಂತ್ರಿ, ಲಲಿತಾ ರಾಠೋಡ ಮಾತನಾಡಿ, ಹಿಂದುಳಿದ ಜಾತಿಯ ಮಕ್ಕಳು ಎಂದರೆ ಅಧಿಕಾರಿಗಳಿಗೆ ಇಷ್ಟೊಂದು ತಾತ್ಸಾರ ಏಕೆ? ನಾವು ಕೂಲಿ ನಾಲಿ ಮಾಡಿ ಹೊಟ್ಟಿ ತುಂಬಿಸ್ ಕೊಳ್ಳಕಂತ ಹೊರಗ ಹೋಗತ್ವಿ ಶಾಲ್ಯಾಗ ಊಟ ಹಾಕ್ತಾರ ಅಂತ ಹೇಳಿ ಮಕ್ಕಳನ ಶಾಲಿಗೆ ಕಳಸ್ತೀವಿ ಆದರ ಇಲ್ಲಿ ಅಕ್ಕಿ ಬೇಳೆ ಇಲ್ಲದ್ದ ನಮಗೇನು ಗೊತ್ರಿ ಮಕ್ಕಳ ಸಂಕಟ ನೂಡಲಾರದ ಪಾಪ ಮಾಸ್ತರ ಬ್ಯಾರೆ ಶಾಲೆಯಿಂದ ಅಕ್ಕಿ ತಂದು ನಮ್ಮ ಮಕ್ಕಳಿಗೆ ಅನ್ನ, ಸಾರು ಮಾಡಿ ಹಾಕ್ತಾರ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೋಣ ತಾಲೂಕು ಎಲ್ಲ ಶಾಲೆಗೆ ಅಕ್ಷರ ದಾಸೋಹ ಅಕ್ಕಿ ಸಾಗಾಣಿಕೆ ಮಾಡುವ ಗುತ್ತಿಗೆದಾರ ವಿಳಂಬ ಮಾಡಿದ್ದರಿಂದ ಗಜೇಂದ್ರಗಡ ಸರ್ಕಾರಿ ಶಾಲೆ ನಂ.7 ಜತೆ ರೋಣ ತಾಲೂಕಿನ 32 ಶಾಲೆಗೆ ಅಕ್ಕಿ ಪೂರೈಕೆಯಲ್ಲಿ ವಿಳಂಬವಾಗಿದೆ. ಇದರಿಂದ ಶಾಲಾ ಸಿಬ್ಬಂದಿಗೆ ತೊಂದರೆಯಾಗಿದೆ. ಈ ಎಲ್ಲ ಸಮಸ್ಯೆಗೆ ಲಾರಿಯಿಂದ ಅಕ್ಕಿ ಸಾಗಾಣಿಕೆ ಮಾಡುವ ಗುತ್ತಿಗೆದಾರ ಬೇಜವಾಬ್ದಾರಿ ಸಮಸ್ಯೆಯಾಗಿದೆ. ಮುಂದೆ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಚ್. ಹಲಗಿ ಪ್ರತಿಭಟನಾಕಾರರಿಗೆ ದೂರವಾಣಿಯಲ್ಲಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭ ಲಕ್ಷ್ಮವ್ವ ಕರಮಡಿ, ಹನುಮವ್ವ ವಡ್ಡರ, ಶೇಖವ್ವ ಭಜಂತ್ರಿ, ರತ್ನಾ ಗೊಂಧಳೆ, ಹನುಮವ್ವ ಭಜಂತ್ರಿ ಇತರರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.