ಗದಗ

ನೇಣಿಗೆ ಶರಣಾದ ಕಬ್ಬು ಕಟಾವಿನ ಗ್ಯಾಂಗ್‌ಮ್ಯಾನ್

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 16
ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಕಬ್ಬು ಕಟಾವು ಮಾಡಿಸಿ ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದಲ್ಲಿರುವ ವಿಜಯನಗರ ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ ಕೂಡ್ಲಿಗಿ ತಾಲೂಕಿನ ತಿಮ್ಲಾಪುರ ತಾಂಡಾದ ಪೀರಾ ನಾಯಕ(48) ಎನ್ನುವ ವ್ಯಕ್ತಿ ಸೋಮವಾರ ಬೆಳಗ್ಗೆ 10.30ರ ವೇಳೆಗೆ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಕೊಠಡಿಯೊಂದರಲ್ಲಿ ನೇಣುಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಘಟನೆಯ ವಿವರ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತೀಮ್ಲಾಪುರ ತಾಂಡಾದ ಪೀರಾ ನಾಯಕ ಕಳೆದ 5-6 ತಿಂಗಳ ಹಿಂದೆ ತಮ್ಮ ತಾಲೂಕಿನ ವ್ಯಾಪ್ತಿಯ ಬೆಳೆಯುವ ರೈತರ ಕಬ್ಬನ್ನು ಕಟಾವು ಮಾಡಿಕೊಂಡು ಬಂದು ಗಂಗಾಪುರದ ವಿಜಯನಗರ ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡುವುದಾಗಿ ತಿಳಿಸಿ ಕಾರ್ಖಾನೆಯವರಿಂದ ಸುಮಾರು ರು. 5 ಲಕ್ಷ ಪಡೆದಿದ್ದ ಎನ್ನಲಾಗಿದೆ. ಹಣ ಪಡೆದ ನಂತರ ಸುಮಾರು ಎರಡು ಬಾರಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ್ದು, ಮತ್ತೆ ಮಾಡದೇ ಇರುವುದರಿಂದ ಕಾರ್ಖಾನೆಯವರು ಪೀರಾ ನಾಯಕನನ್ನು ಕಾರ್ಖಾನೆಗೆ ಕರೆಸಿ ಡಿಸೆಂಬರ್ 9ರಂದು ಕಾರ್ಖಾನೆ ಆವರಣದಲ್ಲಿರುವ ಕೊಠಡಿಯೊಂದರಲ್ಲಿ ಕೂಡಿಹಾಕಿದ್ದರು. ಮನನೊಂದ ಪೀರಾ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಹಣ ಕೊಡ್ತೀವಿ ನಮ್ಮ ಜೀವಾ ಕೊಡ್ರಿ: ನೀವು ನೀಡಿದ ರು. 5 ಲಕ್ಷಕ್ಕೆ ನಮ್ಮ ಅಣ್ಣನಿಂದ ಮೂರುವರೆ ಎಕರೆ ಹೊಲ ಬರೆಯಿಸಿಕೊಂಡಿದ್ದಿರಿ. ಆದಾಗ್ಯೂ ಹಣಕ್ಕಾಗಿ ಅವನನ್ನು ಪೀಡಿಸಿ ಕರೆತಂದು ಅವನು ಜೀವಕಳೆದುಕೊಳ್ಳುವಂತೆ ಮಾಡಿದ್ದೀರಿ. ನಾವೀಗ ನಿಮಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇವೆ. ನೀವಿಗ ನಮ್ಮಣ್ಣನ ಜೀವ ತಂದುಕೊಡಿ ಎಂದು ಮೃತ ಪೀರಾ ನಾಯಕ್‌ನ ಸಹೋದರ ಆಕ್ರೋಶ ವ್ಯಕ್ತಪಡಿಸಿದರು.
ಗಾಜು ಪುಡಿ ಪುಡಿ: ಪೀರಾ ನಾಯಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬಳ್ಳಾರಿ ಜಿಲ್ಲೆಯ ಅನೇಕ ಗ್ರಾಮಗಳ ರೈತರು ಹಾಗೂ ಕೆಲವು ಸಾರ್ವಜನಿಕರು ಹಾಗೂ ಕುಟುಂಬಕ್ಕೆ ಸಂಬಂದಿಸಿದವರು ಕಾರ್ಖಾನೆ ಕಚೇರಿಗೆ ಕಲ್ಲು ತೂರಾಡಿ ಕಿಟಕಿ ಗ್ಲಾಸ್‌ಗಳನ್ನು ಒಡೆದರು.
ಜಿಲ್ಲಾಡಳಿತ ಮುಕ್ಕಾಂ: ಘಟನಾ ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ. ಶರಣಪ್ಪ, ಡಿವೈಎಸ್ಪಿ ವಿಜಯ ಡಂಬಳ, ಮುಂಡರಗಿ ಸಿಪಿಐ ಶ್ರೀಪಾದ ಜೆಲ್ದೆ ಸೇರಿದಂತೆ ಜಿಲ್ಲಾಡಳಿತವೇ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮುಕ್ಕಾಂ ಹೂಡಿದ್ದು, ಸಾರ್ವಜನಿಕರನ್ನು ಹಾಗೂ ರೈತನ್ನು ತಡೆಯುವಲ್ಲಿ ಪೊಲೀಸರು ಹರಸಾಹಸ ಪಟ್ಟರು.
ಮೃತನು 8 ಜನ ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದು, ರಾತ್ರಿ ಸುಮಾರು 8.30ರ ವೇಳೆಯವರೆಗೂ ಈ ಕುರಿತು ಮೃತನ ಕಡೆಯವರಿಂದ ಯಾವುದೇ ದೂರು ದಾಖಲಾಗಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.