ಗದಗ

ಬಡತನ-ಹಸಿವು ನೀಗಲು ಬಸವ ತತ್ವ ದಿವ್ಯೌಷಧಿ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 16
ಬಡತನ-ಹಸಿವು ನೀಗಲು ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕವೇ ದಿವ್ಯೌಷಧವಾಗಿದೆ ಎಂದು ತೋಂಟದ ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ಭಾನುವಾರ ನಗರದ ಶಿವಾನಂದ ನಗರದಲ್ಲಿರುವ ಬಸವ ಮಂಟಪದಲ್ಲಿ ಬಸವದಳದ 20ನೇ ವಾರ್ಷಿಕೋತ್ಸವ ಅಂಗವಾಗಿ 10 ದಿನಗಳ ಕಾಲ ಶಿವಮೊಗ್ಗದ ಬಸವ ನವಲಿಂಗ ಶರಣರಿಂದ ನಡೆವ ಬಸವತತ್ವದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಸವಾದಿ ಶರಣರು ಜನಸಾಮಾನ್ಯರಿಂದ ದೂರವಾಗಿದ್ದ ದೇವರು ಹಾಗೂ ಧರ್ಮವನ್ನು ಜನಮುಖಿಯಾಗಿ ಪರಿಚಯಿಸಿದರು. ಮಾನವ ಜೀವನವನ್ನು ವ್ಯರ್ಥವೆನ್ನದೇ, ಇದು ಕರ್ತಾರನ ಕಮ್ಮಟವೆಂದರು. ಕೈಲಾಸ, ವೈಕುಂಠ ಎಂದು ಜನರಿಗೆ ಮೋಡಿ ಮಾಡದೇ ತೀರಾ ವಾಸ್ತವ ಹಾಗೂ ಜೀವನಸ್ಪರ್ಶಿಯಾದ ತತ್ವಗಳನ್ನು ಸಾರಿದರು. ಜಾತಿ, ಮತ, ಭೇದ ರಹಿತ ಸಮಾಜ ನಿರ್ಮಾಣದ ಜತೆಗೆ ಮಾಯೆ ಎಂದು ಜರಿಯುತ್ತಿದ್ದ ಸ್ತ್ರೀಯರಿಗೆ ಸಮಾನತೆ ನೀಡಿ ಹೆಣ್ಣೆಂಬುದು ಮಾಯೆಯಲ್ಲ ಎನ್ನುವುದನ್ನು ತಿಳಿಸಿಕೊಟ್ಟರು ಎಂದರು.
ಬಸವ ತತ್ವದರ್ಶನ ಪ್ರವಚನ ಶುಭಾರಂಭಗೊಳಿಸಿದ ಬಸವ ನವಲಿಂಗ ಶರಣರು, ಮಾನವನ ಮೂಲ ಅವಶ್ಯಕತೆಯಾದ ಹಸಿವಿಗೆ ಮೊದಲ ಪರಿಹಾರವಾದ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ ವಿಶ್ವದ ಮೊದಲ ಧರ್ಮಗುರು ಬಸವೇಶ್ವರರು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವದಳದ ಅಧ್ಯಕ್ಷೆ ಎಂ.ಬಿ. ಲಿಂಗದಾಳ ವಚನ ಹಾಡಿ ಪ್ರಾಸ್ತಾವಿಕ ಮಾತನಾಡಿದರು. ಬಸವಕೇಂದ್ರದ ಅಧ್ಯಕ್ಷ ಎಂ.ಎ. ಹಂಚನಾಳ, ಲಿಂಗಾಯತ ಪ್ರಗತಿಶೀಲ ಸಂಘದ ಪ್ರಕಾಶ ಕರಿಸೋಮನಗೌಡ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ಓಂ. ಪಾಟೀಲ, ಮೃತ್ಯುಂಜಯ ಜಡಿಮಠ, ನಗರಸಭೆ ಸದಸ್ಯ ಅನಿಲ ಗರಗ ಮುಂತಾದವರು ಪಾಲ್ಗೊಂಡಿದ್ದರು. ವಿ.ಕೆ. ಕರಿಗೌಡ್ರ ಸ್ವಾಗತಿಸಿದರು. ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ ನಿರೂಪಿಸಿದರು. ಗೌರಕ್ಕ ಬಡಿಗಣ್ಣವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.