ರೇಲ್ವೆಗಾಗಿ ಕಾಗದ ಪತ್ರಗಳ ಶವಯಾತ್ರೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 16
ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಗದಗದಿಂದ ಮುಂಡರಗಿ ಮತ್ತು ಹೂವಿನಹಡಗಲಿ ಮಾರ್ಗವಾಗಿ ಹರಿಹರಕ್ಕೆ ಹೋಗುವ ನೂತನ ರೇಲ್ವೆ ಮಾರ್ಗಕ್ಕೆ ಆಗ್ರಹಿಸಿ 2009ರಿಂದ ಇಲ್ಲಿ ವರೆಗೆ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಂಡು ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಸೋಮವಾರ ವೇದಿಕೆ ವಿನೂತನ ರೀತಿಯಲ್ಲಿ ಹೋರಾಟ ನಡೆಸಿತು.
ಇದುವರೆಗೂ ಸರ್ಕಾರಗಳಿಗೆ ಸಲ್ಲಿಸಿದ ಮನವಿಗಳನ್ನು ಮತ್ತು ಸರ್ಕಾರದಿಂದ ಮರಳಿ ಬಂದಿರುವ ಕಾಗದ ಪತ್ರಗಳನ್ನು ಶವ ಪೆಟ್ಟಿಗೆಯಲ್ಲಿ ಇರಿಸಿ, ಮೆರವಣಿಗೆ ಮಾಡಲಾಯಿತು. ಬಳಿಕ ತಹಸೀಲ್ದಾರ್ ಕಚೇರಿ ಮುಂದೆ ಬೆಂಕಿಹಚ್ಚಿ ಸುಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ಕೇಂದ್ರ ರೇಲ್ವೆ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಸರ್ ಸಿದ್ದಪ್ಪ ಕಂಬಳಿ ಸರ್ಕಲ್ನಿಂದ ಪ್ರಾರಂಭವಾದ ಶವಪೆಟ್ಟಿಗೆ ಮೆರವಣಿಗೆ ಬಜಾರ್ ಮೂಲಕ ಹೊಸ ಬಸ್ ನಿಲ್ದಾಣ, ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿತು. ಅಲ್ಲಿ ಕಾಗದ ಪತ್ರಗಳಿಗೆ ಬೆಂಕಿ ಹಚ್ಚಿ ಸುಟ್ಟು ಜನ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಹೋರಾಟ ವೇದಿಕೆ ಆಶ್ರಯದಲ್ಲಿ 2009ರಿಂದ 2013ರ ವರೆಗೂ ಗದಗದಿಂದ ಮುಂಡರಗಿ ಮತ್ತು ಹೂವಿನಹಡಗಲಿ ಮಾರ್ಗವಾಗಿ ಹರಿಹರಕ್ಕೆ ಹೋಗುವ ನೂತನ ರೇಲ್ವೆ ಮಾರ್ಗಕ್ಕೆ ಆಗ್ರಹಿಸಿ ವಿವಿಧ ಹಂತದಲ್ಲಿ ವಿವಿಧ ರೀತಿಯ ಪ್ರತಿಭಟನೆ ಮಾಡಲಾಗಿದೆ. ಪತ್ರ ಚಳವಳಿ, ದೆಹಲಿಯ ಜಂತರಮಂತರನಲ್ಲಿ ಸತ್ಯಾಗ್ರಹ, ಬೆಂಗಳೂರಿನಲ್ಲಿ ಸತ್ಯಾಗ್ರಹ ಮತ್ತು ಕಾಲ್ನಡಿಗೆ ಜಾಥಾ ಮುಂತಾದ ಹೋರಾಟಗಳನ್ನು ಹಮ್ಮಿಕೊಂಡು ಮನವಿ ಅರ್ಪಿಸಿದರೂ ಸರ್ಕಾರಗಳು ಕೇವಲ ಭರವಸೆಯನ್ನು ನೀಡುತ್ತ ಕಾಲಹರಣ ಮಾಡುತ್ತಿವೆ.
ಮುಂಡರಗಿ ತಹಸೀಲ್ದಾರ್ ಮುಖಾಂತರ ಕೇಂದ್ರ ರೇಲ್ವೆ ಮಂತ್ರಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಗದಗ ಜಿಲ್ಲಾಧಿಕಾರಿ, ರೇಲ್ವೆ ಅಧಿಕಾರಿಗಳಿಗೆ ಕೊಟ್ಟ ಮನವಿ ಪತ್ರಗಳನ್ನು ಪರಿಗಣಿಸಿಲ್ಲ. ಹೀಗಾಗಿ, ಈ ಕಾಗದ ಪತ್ರಗಳು ಶವಗಳಾಗಿ ಉಳಿದಿವೆ. ಆದ್ದರಿಂದ ಈ ಕಾಗದ ಪತ್ರಗಳ ಶವಯಾತ್ರೆ ನಡೆಸಲಾಯಿತು ಎಂದರು.
ಈ ಸಂದರ್ಭದಲ್ಲಿ ಯಮನಪ್ಪ ಭಜಂತ್ರಿ, ಕೊಟ್ರಗೌಡ ಪಾಟೀಲ, ಸಹದೇವಪ್ಪ ಭಜಂತ್ರಿ, ಡಿ.ಎಸ್. ಪೂಜಾರ, ಶಂಕರಗೌಡ ಪಾಟೀಲ, ಬಿ.ಎಸ್. ಹೂಗಾರ, ನಾಗಪ್ಪ ಜಾಲಪ್ಪನವರ, ಕುರುವತೆಪ್ಪ ಅರಿಶಿನದ, ವೀರಭದ್ರಪ್ಪ ಕಬ್ಬಿನದ, ಬಸಪ್ಪ ವಡ್ಡರ, ಮೋಹನ್ಗೌಡ ಪಾಟೀಲ, ನಿಂಗನಗೌಡ ಪಾಟೀಲ, ಪ್ರಕಾಶ ಪೂಜಾರ, ಮಲ್ಲೇಶ ಕಕ್ಕೂರ, ಮಾಬೂಸಾಬ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಶರಣೆಯರ ತತ್ವಗಳನ್ನು ಮನೆ ಮನಕ್ಕೆ ತಲುಪಿಸಲು ಬದ್ಧ
ಗದಗ: ಶರಣ, ಶರಣೆಯರ ತತ್ವಗಳನ್ನು ಮನೆ ಮನಕ್ಕೆ ತಲುಪಿಸುವ ಮೂಲಕ ಧಾರ್ಮಿಕ ಮತ್ತು ಚಿಂತನ ಪರವಾದ ಕಾರ್ಯಕ್ರಮಗಳನ್ನು ಗದಗ ಜಿಲ್ಲಾದ್ಯಂತ ಹಮ್ಮಿಕೊಳ್ಳಲು ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಕಂಕಣಬದ್ಧವಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೇಮಾ ಬಿಂಕದಕಟ್ಟಿ ಹೇಳಿದರು.
ಇತ್ತೀಚಿಗೆ ನಗರದ ಸಮಿತಿಯ ಕಾರ್ಯಾಲಯದಲ್ಲಿ ಜರುಗಿದ ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಜಿಲ್ಲೆಯ ಎಲ್ಲ ತಾಲೂಕಿನ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕದಳಿ ಮಹಿಳಾ ವೇದಿಕೆಯ ನರಗುಂದ ತಾಲೂಕಾಧ್ಯಕ್ಷೆ ಲೀಲಾ ಹಸಬಿ, ಶಿರಹಟ್ಟಿ ತಾಲೂಕು ಅಧ್ಯಕ್ಷೆ ಶೀಲಾ ಪಾಟೀಲ, ರೋಣ ತಾಲೂಕು ಅಧ್ಯಕ್ಷೆ ಗಾಯತ್ರಿ ನಾಗನೂರ, ಮುಂಡರಗಿ ತಾಲೂಕು ಅಧ್ಯಕ್ಷೆ ಸೀತಾ ಬಸಾಪುರ, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಂತಾ ಕಲೆಗುಟಿಗರ್, ನೀಲವ್ವ ನಾರ್ಶಿ, ವಿದ್ಯಾ ಸೂಡಿಶೆಟ್ಟರ್, ಗಿರಿಜಾ ವಾಲಿ ಮುಂತಾದವರು ಉಪಸ್ಥಿತರಿದ್ದರು. ನಿರ್ಮಲಾ ಅರಳಿ ಹಾಗೂ ಜ್ಯೋತಿ ಕಾಳೆ ಪ್ರಾರ್ಥಿಸಿದರು. ಖಜಾಂಚಿ ಅನ್ನಪೂರ್ಣಾ ವರವಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀದೇವಿ ಪಾಟೀಲ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

