ಗದಗ

ಇದ್ದೂ ಇಲ್ಲದಂತಾದ ಸಂತೆ ಮಾರುಕಟ್ಟೆ

Published On :

ಕನ್ನಡಪ್ರಭ ವಾರ್ತೆ, ರೋಣ, ಡಿ. 16
ಸಂತೆ ಮಾರುಕಟ್ಟೆಗಾಗಿ ಉತ್ತಮವಾದ ಕಟ್ಟಡವಿದ್ದರೂ ಸ್ಥಳೀಯ ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದಾಗಿ ಉರಿ ಬಿಸಿಲು ಮತ್ತು ಗಲೀಜಿನಲ್ಲಿಯೇ ಕಾಯಿಪಲ್ಲೆ ಮಾರುಕಟ್ಟೆ ನಡೆಯುತ್ತಿದ್ದು, ವ್ಯಾಪಾರಸ್ಥರ, ಸಾರ್ವಜನಿಕರ ಸಮಸ್ಯೆಗೆ ಯಾರೂ ಸ್ಪಂದಿಸುವವರೇ ಇಲ್ಲದಂತಾಗಿದೆ.
ಬಳಕೆಗೂ ಮುನ್ನವೇ ನೂತನ ಸಂತೆ ಮಾರುಕಟ್ಟೆ ಸಂಕೀರ್ಣ ಪಾಳು ಬಿದ್ದಿದ್ದು, ಜನತೆ ಪುರಸಭೆಯ ಆಡಳಿತ ವೈಖರಿಗೆ ಅತೀವ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲೆಂದು ಸರ್ಕಾರ ಬಯಲಲ್ಲಿ ನಡೆಯುವ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ದಿಸೆಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸಂಕೀರ್ಣಗಳನ್ನು ನಿರ್ಮಿಸಿದೆ. ವಿಪರ್ಯಾಸವೆಂದರೆ ನಿರ್ಮಿಸಲಾದ ಬೃಹತ್ ಸಂತೆ ಮಾರುಕಟ್ಟೆ ಉದ್ಘಾಟನೆಗೊಂಡು 28 ತಿಂಗಳಾದರೂ ಈವರೆಗೂ ಪುರಸಭೆ ಟೆಂಡರ್ ಪ್ರಕ್ರಿಯೆಗೆ ಮುಂದಾಗದೇ ಇರುವುದರಿಂದ ಸಂತೆ ಮಾರುಕಟ್ಟೆ ಸಂಕೀರ್ಣ ಸದ್ಬಳಕೆಯಾಗದೇ ನಿರುಪಯುಕ್ತವಾಗಿದ್ದು, ಸದ್ಯ ಇಲ್ಲಿ ಎಗ್ಗಿಲ್ಲದೇ ಅನೈತಿಕ ಚಟುವಟಿಕೆ ನಡೆಯುತ್ತಿವೆ.
ರು. 46 ಲಕ್ಷದಲ್ಲಿ ನಿರ್ಮಾಣ: 2007-08ರ ರಾಜ್ಯ ಹಣಕಾಸು ಆಯೋಗದ ಅಡಿಯಲ್ಲಿ (ಎಸ್.ಎಫ್.ಸಿ) ರು. 46 ಲಕ್ಷ ವೆಚ್ಚದಲ್ಲಿ 46 ಮಳಿಗೆಗಳನ್ನೊಳಗೊಂಡ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಈ ಹಿಂದಿನ ಶಾಸಕರ ಅವಧಿಯಲ್ಲಿ 2011 ಸೆಪ್ಟೆಂಬರ್ 7ರಂದು ಅಂದಿನ ಮುಖ್ಯಮಂತ್ರಿ ಡಿ.ವಿ. ಸಂದಾನಂದಗೌಡ ಅವರಿಂದ ಉದ್ಘಾಟನೆಗೊಂಡಿತು.
ಇಂದಿಗೂ ಮಳಿಗೆಗಳ ವಿತರಣೆಗೆ ಟೆಂಡರ್ ಕರೆದು ವ್ಯಾಪಾರಸ್ಥರಿಗೆ ವಿತರಿಸದೇ ಪುರಸಭೆ ಆಡಳಿತ ಮತ್ತು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ.
ಬಿರುಕುಬಿಟ್ಟ ಕಟ್ಟಡ: ಸಂಕೀರ್ಣದ ಎಲ್ಲ ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಕಟ್ಟಡವು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಬೀಳುವ ಹಂತಕ್ಕೆ ತಲುಪಿದೆ. ಮಳೆಗೆಗಳಿಗೆ ಬೀಗ ಹಾಕದೇ ಇರುವುದರಿಂದ ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕುಡಿತ, ಮೋಜು ಮಸ್ತಿಗೆ ಪಡ್ಡೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಸಾರಾಯಿ ಕುಡಿಯುವುದು, ಇಸ್ಪೀಟ್ ಆಡಿ ಗಲೀಜು ಮಾಡಲಾಗುತ್ತಿದೆ. ಅಲ್ಲದೇ ದನಗಳನ್ನು ಕಟ್ಟುತ್ತಾರೆ.
 ಕೆಲವರು ಇಲ್ಲಿನ ಕೆಲ ಮಳಿಗೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಅಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸಿಟ್ಟು ಬೀಗ ಹಾಕಿಟ್ಟುಕೊಂಡಿದ್ದಾರೆ. ಇನ್ನು ಕೆಲ ಮಳಿಗೆಗಳು ಅನೈತಿಕ ಚಟುವಟಿಕೆಗೆ ಬುಕ್ಕಾದಂತಿವೆ.

ಎಲ್ಲರಿಗೂ ತೊಂದರೆ
ವಾರದಲ್ಲಿ 2 ದಿನ ಮಂಗಳವಾರ ಮತ್ತು ಗುರುವಾರ ಸಂತೆ ನಡೆಯುತ್ತಿದೆ. ಸುಸಜ್ಜಿತ ಕಟ್ಟಡ ಇದ್ದೂ ಇಲ್ಲದಂತಾಗಿದ್ದು, ತರಕಾರಿ ಮತ್ತು ದಿನಸಿ ವ್ಯಾಪಾರಸ್ಥರು ಬಿಸಿಲು, ಧೂಳು ಮತ್ತು ಗಲೀಜು ಜಾಗೆಯಲ್ಲಿಯೇ ಅನಿವಾರ್ಯವಾಗಿ ವ್ಯಾಪಾರ, ವಹಿವಾಟು ಮಾಡುತ್ತಿದ್ದಾರೆ. ಗ್ರಾಹಕರು ಧೂಳು ಮತ್ತು ಗಲೀಜು ವಾಸನೆಯಿಂದ ಮೂಗು ಮುಚ್ಚಿಕೊಂಡೇ ಸಂತೆ ಮಾಡುತ್ತಿದ್ದಾರೆ. ಇನ್ನೂ ಹಂದಿ, ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ನೂರಾರು ತೊಂದರೆಗಳ ಮಧ್ಯೆ ವ್ಯಾಪರ ನಡೆಯುತ್ತಿದೆ. ಬಡವರು ಕೈಗೆಟುಕುವ ದರದಲ್ಲಿ ಟೆಂಡರ್ ನಡೆಯಬೇಕು ಎನ್ನುತ್ತಾರೆ ಸಂತೆ ವ್ಯಾಪಾರಿಗಳಾದ  ನೀಲವ್ವ ಜಡಮಳ್ಳಿ, ಬೀಬೀಜಾನ ನೀಲುಗಲ್, ಇಸ್ಮೈಲ್ ನಾಲಬಂದ, ಮಾಬುಬೀ ಹುನಸಿಕಟ್ಟಿ, ತಿಪ್ಪಣ್ಣ ಚಿಕ್ಕೇನಕೊಪ್ಪ, ಶರಣಪ್ಪ ಬೇವಿನಗಿಡದ.
-ಪಿ.ಎಸ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.