ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಬಿಜೆಪಿ ಸಭೆ
ಮುಂಡರಗಿ: ಡಿ. 19ರಂದು ಬೆಳಗ್ಗೆ 10-30ಕ್ಕೆ ಮುಂಡರಗಿ ಪುರಸಭೆಯ ಗಾಂಧಿ ಭವನದಲ್ಲಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಜರುಗಲಿದೆ. ಸಭೆಯನ್ನು ಮಾಜಿ ಸಚಿವ ಹಾಗೂ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಉದ್ಘಾಟಿಸಲಿದ್ದಾರೆ. ದೇವಪ್ಪ ಇಟಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಎಂ.ಎಸ್. ದೊಡ್ಡನಗೌಡ್ರ, ಎಂ.ಎಸ್. ಕರಿಗೌಡ್ರ, ಕರಬಸಪ್ಪ ಹಂಚಿನಾಳ, ಛಗನ್ ರಾಜಪೂರೋಹಿತ್, ತಿಮ್ಮರೆಡ್ಡಿ ಅಳವಂಡಿ, ಜಾನು ಲಮಾಣಿ ಆಗಮಿಸಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾರ್ಯದರ್ಶಿ ಶಿವು ನಾಡಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹದಾಯಿ ನದಿ ಜೋಡನೆ ಹೋರಾಟ: ಬೆಂಬಲಕ್ಕೆ ಕರೆ
ರೋಣ: ಮಲಪ್ರಭಾ ಜಲಾಶಯಕ್ಕೆ(ಡ್ಯಾಂ) ಮಹಾದಾಯಿ ನದಿಯನ್ನು ಜೋಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಸೌವದತ್ತಿ ಮಿನಿ ವಿಧಾನಸೌಧ ಎದುರು ರೈತ ಸೇನಾ ಕರ್ನಾಟಕ ಸಂಘ ಕಳೆದ ಡಿ. 16ರಿಂದ ಡಿ. 22 ರವರೆಗೂ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಧರಣಿಯಲ್ಲಿ ತಾಲೂಕಿನ ರೈತ ಸಮುದಾಯ, ಸಾರ್ವಜನಿಕರು ಭಾಗವಹಿಸಿ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ವೀರೇಶ ಸೋಬರದಮಠ, ಪ್ರಧಾನ ಕಾರ್ಯದರ್ಶಿ ಎಸ್.ಆರ್. ಅಂಬಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಮಹದಾಯಿ ನದಿ ಜೋಡನೆಯಿಂದಾಗಿ ಉತ್ತರ ಕರ್ನಾಟಕದ 4 ಜಿಲ್ಲೆ, 9 ತಾಲೂಕಿನ ಗ್ರಾಮಗಳಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಅನುಕೂಲವಾಗಲಿದೆ. ಡಿ. 18 ರಿಂದ ಜಲಾಶಯದ ಪರಿಶೀಲನೆ ಮತ್ತು ನದಿ ಜೋಡನೆ ಕುರಿತು ಚಿಂತನೆಗಾಗಿ ಕೇಂದ್ರದಿಂದ ಜಲಸಂಪನ್ಮೂಲ ತಾಂತ್ರಿಕ ತಂಡ, ನ್ಯಾಯಾಧೀಶರ ತಂಡ ಬರಲಿದೆ. ಈ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನಿಂದ ರೈತ ಬಾಂಧವರು, ಸಾರ್ವಜನಿಕರು ಆಗಮಿಸಿ ಕೈಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ರೋಣ:  ಭೀಮಾಂಬಿಕಾ ಕುರುಬ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ 2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.  ದೃಢೀಕೃತ ಝೆರಾಕ್ಸ್ ಅಂಕಪಟ್ಟಿಯೊಂದಿಗೆ ಡಿ. 26ರೊಳಗೆ ಬಸವರಾಜ ನಿಲಗಾರ, ಭೀಮಾಂಭೀಕಾ ಜನರಲ್ ಸ್ಟೋರ್ಸ್, ಶಿವಪೇಟೆ ರೋಣ. ಈ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸುಭಾಸ್ ನೀಲಗಾರ (9742550226) ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ಆಹಾರ, ಬಟ್ಟೆ ವಿತರಿಸಿದ ಅಜೀತ ಬಾಗಮಾರ
ಗಜೇಂದ್ರಗಡ:  ಸಮೀಪದ ರಾಜೂರ ಗ್ರಾಮದಲ್ಲಿ ವಾಸಿಸುವ ಬಡ ಕುಟುಂಬದ ವಿಕಲಚೇತನ ಮಂಜುನಾಥ ಮತ್ತು ಮಾನಸಿಕ ಅಸ್ವಸ್ಥೆ ವಿಜಯಲಕ್ಷ್ಮಿ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಬಾಗಮಾರ ಸೇವಾ ಸಮಿತಿ ಸಂಸ್ಥೆ ಕಾರ್ಯಾದರ್ಶಿ ಅಜೀತ ಬಾಗಮಾರ ಸಾಂತ್ವನ ಹೇಳಿದರು.  ಬಳಿಕ ವಿಕಲಚೇತನ ಮಕ್ಕಳಿಗೆ ಆಹಾರ, ಬಟ್ಟೆ ವಿತರಿಸುವ ಜತೆಗೆ ವೈದ್ಯಕೀಯ ಚಿಕಿತ್ಸೆಗೆ ಭರವಸೆ ನೀಡಿದರು. ವಿಕಲಚೇತನ ಮಂಜುನಾಥನನ್ನು ತಿರುಪತಿಯ ಬುದ್ಧಿಮಾಂದ್ಯ ಹಾಗೂ ವಿಕಲಚೇತನರ ಪುನರ್‌ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುವುದು.
ಜತೆಗೆ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ವತಿಯಿಂದ ವೈದ್ಯರನ್ನು ಕಳುಹಿಸಲಾಗುವುದು. ವಿಕಲಚೇತನ ಮಗು ಹಾಗೂ ಕುಟುಂಬದ ಸದಸ್ಯರಿಗೆ ತಿರುಪತಿಗೆ ಕಳುಹಿಸಲು ತಗಲುವ ವೆಚ್ಚ, ಇನ್ನಿತರ ಖರ್ಚು ನೀಡುವುದಾಗಿ ತಿಳಿಸಿದರು.
ಗುರು ನಾವಡೆ, ಅರಿಹಂತ ಬಾಗಮಾರ, ರಾಘು ಗೋಂಧಳೆ, ಮೋಹನ ಕನಕೇರಿ, ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ, ಗ್ರಾಪಂ ಉಪಾಧ್ಯಕ್ಷ ಶಂಕ್ರಪ್ಪ ಹಾದಿಮನಿ, ಗ್ರಾಪಂ ಸದಸ್ಯ ಶಿವಕುಮಾರ ಜಾಧವ, ಮುಜಾವರ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.