ಗದಗ

ಕಳ್ಳರ ಕರಾಮತ್ತಿಗೆ ಕಿಟಕಿ, ಬಾಗಿಲು ಮಾಯ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 19
ಪಟ್ಟಣದ ಸೋಮಾಪುರ ಓಣಿಯ ಕೆರೆಯ ದಡದ ಮೇಲೆ ವಾಸಿಸುತ್ತಿದ್ದ ನಿವಾಸಿಗಳಿಗಾಗಿ ತಾಲೂಕಿನ ಹಿರೇಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ 102 ಮನೆಗಳನ್ನು ನಿರ್ಮಿಸುವ ಕಾರ್ಯ ಮೊದಲು ಭರದಿಂದ ನಡೆದಿತ್ತು. ಈಗ ಅರ್ಧಕ್ಕೆ ನಿಂತ ಹಲವಾರು ತಿಂಗಳುಗಳೇ ಕಳೆದಿದ್ದು, ಆ ಮನೆಗಳ ಕಿಟಕಿ, ಬಾಗಿಲುಗಳು ಕಳ್ಳರ ಪಾಲಾಗುತ್ತಿವೆ.
ಈ ಬಗ್ಗೆ ಗಮನ ನೀಡಬೇಕಾದ ಪುರಸಭೆಯ ಅಧಿಕಾರಿಗಳು ಮಾತ್ರ ನಿದ್ರೆಗೆ ಜಾರಿದ್ದಾರೆ. ಅವರನ್ನು ಎಚ್ಚರಿಸಬೇಕಾದ ತಾಲೂಕು ಆಡಳಿತವಂತೂ ಕುಂಭಕರ್ಣ ನಿದ್ರೆಯಲ್ಲಿದೆ.
ಗುಡಿಸಲು ವಾಸಿಗಳು: ಪಟ್ಟಣದ ಸೋಮಾಪುರ ಕೆರೆಯ ನೀರನ್ನು ಈ ಹಿಂದೆ ಇಡೀ ಪಟ್ಟಣದ ಜನತೆ ಕುಡಿಯಲು ಬಳಸುತ್ತಿದ್ದರು. ಆದರೆ, ಪಟ್ಟಣದಲ್ಲಿ ಬೋರ್ ಮತ್ತು ಕೆಂಪಕೆರೆ ಆದ ಮೇಲೆ ಈ ಕೆರೆ ಪಾಳು ಬಿದ್ದ ಹಿನ್ನೆಲೆಯಲ್ಲಿ ಇದರ ದಂಡೆಯ ಮೇಲೆ ಮನೆ ಇಲ್ಲದವರು, ಗುಡಿಸಲು ಹಾಕಿಕೊಂಡು ವಾಸಿಸಲಿಕ್ಕೆ ಪ್ರಾರಂಭಿಸಿದರು. ಇವರ ಸಂಖ್ಯೆಯೂ ದಿನೇ ದಿನೇ ಬೆಳೆಯಲಾರಂಭಿಸಿತು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಕೆರೆಯನ್ನು ಹೂಳೆತ್ತಲು ಹಣ ಮಂಜೂರಾದ ಹಿನ್ನೆಲೆಯಲ್ಲಿ ಈ ಕೆರೆ ಆ ಯೋಜನೆಯಲ್ಲಿ ಆಯ್ಕೆಯಾಗಿತ್ತು.
102 ಮನೆಗಳ ನಿರ್ಮಾಣ: ಕೆರೆಯ ಹೂಳೆತ್ತಬೇಕಾದಲ್ಲಿ ಕೆರೆಯ ಸುತ್ತಲೂ ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದ ಕುಟುಂಬಗಳನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾದ ಹಿನ್ನೆಲೆಯಲ್ಲಿ ಈ ಗುಡಿಸಲು ನಿವಾಸಿಗಳಿಗೆ ಹಿರೇಕೊಪ್ಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಜಮೀನು ಖರೀದಿಸಿ, 102 ಮನೆಗಳನ್ನು ನಿರ್ಮಿಸಲು ಪುರಸಭೆಯವರು ತೀರ್ಮಾನಿಸಿದರು. ಈ ಯೋಜನೆಯಲ್ಲಿ ಫಲಾನುಭವಿಗಳು ರು. 30 ಸಾವಿರ, ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ರು. 75 ಸಾವಿರ, ಬ್ಯಾಂಕ್‌ಗಳಿಂದ ರು. 75 ಸಾವಿರ ಸಾಲದಲ್ಲಿ ಕಾಂಕ್ರೀಟ್ ಮನೆಗಳನ್ನು ಕಟ್ಟಲು ಪ್ರಾರಂಭ ಮಾಡಲಾಯಿತು. ಆದರೆ, ಈ ಮನೆಗಳ ನಿರ್ಮಾಣ ಮುಗಿಯುವ ಪೂರ್ವದಲ್ಲಿಯೇ ಅದ್ಯಾವ ಕಾರಣಕ್ಕೆ ಭೂಸೇನಾ ನಿಗಮದವರು ಅರ್ಧಕ್ಕೆ ನಿಲ್ಲಿಸದರೋ ಗೊತ್ತಿಲ್ಲ, ಅಲ್ಲಿಂದ ಇಲ್ಲಿಯವರೆಗೂ ಅವು ಹಾಗೆಯೇ ನಿಂತಿವೆ.
ಕಳ್ಳರ ಕಾಟ: ಈ ಮನೆಗಳಲ್ಲಿ ಕೆಲ ಮನೆಗಳಿಗೆ ಕಿಟಕಿ, ಬಾಗಿಲುಗಳನ್ನು ಹಾಕಿದರು. ಆದರೆ, ಕಾಮಗಾರಿ ಪೂರ್ಣಗೊಳ್ಳದೇ ಎಲ್ಲವೂ ಅರ್ಧದಲ್ಲಿಯೇ ನಿಂತ ಹಿನ್ನೆಲೆಯಲ್ಲಿ ಮನೆಗಳಿಗೆ ಹಾಕಲಾಗಿರುವ ಕಿಟಕಿ, ಬಾಗಿಲುಗಳು ಕಳ್ಳರ ಪಾಲಾಗುತ್ತಿವೆ. ಸದ್ಯ ಶೇ. 95ರಷ್ಟು ಮನೆಗಳ ಬಾಗಿಲು ಹಾಗೂ ಕಿಟಕಿಗಳು ಕಳ್ಳರ ಪಾಲಾಗಿರುವುದು ಅಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ತಿಳಿದು ಬರುವ ಸತ್ಯವಾಗಿದೆ.

ನಾವು ಪ್ರತಿ ದಿನ ವಿಷ ಜಂತುಗಳ ಭಯದಲ್ಲಿಯೇ ಈ ಕೆರೆಯ ದಂಡೆಯ ಮೇಲೆ ಜೀವನ ಮಾಡಬೇಕಾಗಿದೆ. ಅದಕ್ಕೆ ಬೇಗನೇ ಹೊಸ ಆಸರೆ ಮನೆಗಳು ಕಟ್ಟಿಕೊಡಬೇಕು. ಇದಕ್ಕಿರುವ ಎಲ್ಲ ಸಮಸ್ಯೆಗಳನ್ನು ಸರ್ಕಾರ, ತಾಲೂಕು ಆಡಳಿತ ಸರಿಪಡಿಸಬೇಕು.
 ಬಿ.ಎಂ. ಖರೇಸಿ, ಸಿ.ಎಂ. ತುಮ್ಮನಕಟ್ಟಿ
ಫಲಾನುಭವಿಗಳು
102 ಮನೆಗಳಲ್ಲಿ ಬಹುತೇಕ ಮನೆಗಳು ಪೂರ್ಣಗೊಂಡಿವೆ. ಕೆಲವು ಮಾತ್ರ ಅರ್ಧಕ್ಕೆ ನಿಂತಿವೆ. ಉಳಿದ ಮನೆ ನಿರ್ಮಿಸಲು ಭೂ ಸೇನಾ ನಿಗಮದವರಿಗೆ ಮನವಿ ಮಾಡಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.

ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.