ಗದಗ

ಸಂಕ್ಷಿಪ್ತ ಸುದ್ದಿ

Published On :

ಇಂದು ಮಹಿಳೆಯರಿಗಾಗಿ ತಾಲೂಕು ಸಮ್ಮೇಳನ
ಗದಗ:  ಗದುಗಿನ ಜಮಾತೆ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ಡಿ. 21ರ ಬೆಳಗ್ಗೆ 10.30 ಗಂಟೆಗೆ ಸ್ಥಳೀಯ ತಾಜ್ ನಗರದ ಹಿರಾ ಇಸ್ಲಾಮಿಕ್ ಸೆಂಟರ್‌ದಲ್ಲಿ ಮಹಿಳೆಯರಿಗಾಗಿ ತಾಲೂಕು ಸಮ್ಮೇಳನ ಏರ್ಪಡಿಸಿದೆ. ಆಧುನಿಕ ಮಹಿಳೆಯ ಸಮಸ್ಯೆಗಳು ಮತ್ತು ಅವುಗಳ ಪರಿಹಾರ, ವಿವಾಹ ಮತ್ತಿತರ ಸಮಾರಂಭಗಳ ಇಸ್ಲಾಮಿ ನಿಯಮಗಳು ಹಾಗೂ ಇನ್ನಿತರ ವಿಷಯವಾಗಿ ವಿದ್ವಾಂಸರು ಮಾತನಾಡುವರು ಎಂದು ಜಮಾಅತೆ ಇಸ್ಲಾಮಿ ಹಿಂದ್ ಗದಗ ಸಂಚಾಲಕ ಕೆ.ಐ. ಶೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವತಿಯ ಮೇಲೆ ಹಲ್ಲೆ: ಪ್ರತಿಭಟನೆ
ಗಜೇಂದ್ರಗಡ: ಬಳ್ಳಾರಿ ಕೋಟೆ ಪ್ರದೇಶದಲ್ಲಿ ಶ್ರೀಲಕ್ಷ್ಮೀ ಎನ್ನುವ ಯುವತಿ ಮೇಲೆ ಹಲ್ಲೆ ಮಾಡಿರುವ ಸಂಸದ ಸಣ್ಣ ಫಕೀರಪ್ಪನ ಪುತ್ರ, ಪತ್ನಿ, ಮತ್ತು 13 ಜನ ಸಹಚರರಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸ್ಥಳೀಯ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ವಿದ್ಯಾರ್ಥಿನಿ ಉಪ ಸಮಿತಿ ಕಾರ್ಯಕರ್ತೆಯರು ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ವಿಶೇಷ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ವಿದ್ಯಾರ್ಥಿನಿ ಉಪ ಸಮಿತಿಯ ಜಿಲ್ಲಾ ಸಂಚಾಲಕಿ ಮಾನವ್ವ ರಾಠೋಡ ಮಾತನಾಡಿ, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಹೆಚ್ಚಾಗಿ ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರು ಸಾಮಾನ್ಯ ಜನರ ಮೇಲೆ ನೆಡಸುವ ದುಷ್ಕೃತ್ಯಗಳಿಗೆ ನ್ಯಾಯ ಸಿಗುತ್ತಿಲ್ಲ ಎಂಬುದು ಖೇದಕರ ಎಂದರು.  ಎಸ್‌ಎಫ್‌ಐ ನಗರ ವಿದ್ಯಾರ್ಥಿನಿ ಉಪಸಮಿತಿಯ ಸಹಕಾರ್ಯದರ್ಶಿ ಸಾವಿತ್ರಿ ಲಮಾಣಿ ಮಾತನಾಡಿದರು. ಮಂಜುಳಾ ಹಡಪದ, ಶಿಲ್ಪಾ ಅರಗಂಜಿ, ಶಿಲ್ಪಾ ಭಿಕ್ಷಾವತಿಮಠ, ಈರವ್ವ ಜಾಲಿಹಾಳ, ಜ್ಯೋತಿ ಜಿಗಳೂರ, ರೇಖಾ ಮ್ಯಕಲ್, ಶ್ರುತಿ ಕಮತರ, ನಿಂಗಮ್ಮ ಕಲೊಂಡಿ, ಪೂರ್ಣಿಮಾ ಡಗ್ಗಿ, ಪವಿತ್ರ ಮನಕೇರಿ, ಆಫ್ರೀನ್ ಮೋಮಿನ್, ರೇಣುಕಾ ಕುಂಬಾರ ಪಾಲ್ಗೊಂಡಿದ್ದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ
ನರೇಗಲ್ಲ: ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷ್ಟಿಕೋನದಿನದಿಂದ ಸರ್ಕಾರ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬ ಮಕ್ಕಳು ಪಡೆದು ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಎಂದು ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ ಹೇಳಿದರು.  ಅವರು ಈಚೆಗೆ ಸ್ಥಳೀಯ ಕೆಎಸ್‌ಎಸ್ ಪ್ರೌಢ ಶಾಲೆಯಲ್ಲಿ 2013-14ನೇ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರವು ಕೊಡಮಾಡಿದ ಉಚಿತ ಸೈಕಲ್ ವಿತರಣೆ ನೆರವೇರಿಸಿ ಮಾತನಾಡಿದರು. ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದೆಂಬ ನಿಲುವು ಹೊಂದಿರುವ ಸರ್ಕಾರ ಅಕ್ಷರ ದಾಸೋಹ, ಕ್ಷೀರಭಾಗ್ಯ, ಸೈಕಲ್ ವಿತರಣೆಯಂತಹ ಹಲವಾರು ಯೋಜನೆಗಳನ್ನು ಮಕ್ಕಳಿಗಾಗಿ ಆಯೋಜಿಸಿದ್ದು, ಇದರ ಸದ್ಬಳಕೆಯಾಗುವ ಅವಶ್ಯಕತೆಯಿದೆ ಎಂದರು. ಪಪಂ ಉಪಾಧ್ಯಕ್ಷೆ ಅನ್ನಪೂರ್ಣ ಗಿಂಡಿ, ಗದಗ ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಪುನೀತಕುಮಾರ, ಮುಖ್ಯೋಪಾಧ್ಯಾಯ ಕೆ.ಎಸ್. ಬೆನಕನವಾರಿ, ಎಚ್.ಎಂ. ಕುರಿ ಮುಂತಾದವರು ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ಮನೆ ಮೇಲೆ ಲೋಕಾ ದಾಳಿ
ಲಕ್ಷ್ಮೇಶ್ವರ:  ಕುಂದಗೋಳ ತಾಲೂಕಿನ ಸಂಶಿಯ ನಾಡ ಕಚೇರಿಯಲ್ಲಿ ಉಪತಹಸೀಲ್ದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಗುಡ್ಡಪ್ಪ ದಾಸಪ್ಪನವರ ಪಟ್ಟಣದ ಇಂದಿರಾನಗರದಲ್ಲಿ ವಾಸವಾಗಿದ್ದು, ಅವರ ಮನೆ, ಸಂಶಿಯ ನಾಡ ಕಚೇರಿ ಹಾಗೂ ಗುಡಗೇರಿಯ ಅವರ ಮಾವನ ಮನೆಯ ಮೇಲೆ ಶುಕ್ರವಾರ ಬೆಳಗ್ಗೆ ಏಕ ಕಾಲದಲ್ಲಿ ಧಾರವಾಡ ಹಾಗೂ ಗದಗ ಲೋಕಾಯುಕ್ತರು ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ಅಕ್ರಮ ಆಸ್ತಿ ಹಾಗೂ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಧಾರವಾಡ ಎಸ್‌ಪಿ. ಕೆ. ಪರಶುರಾಮ ಈ ಕುರಿತು ಮಾಹಿತಿ ನೀಡಿದರು.  ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾಗಿ ನೌಕರಿಗೆ ಸೇರಿದ ಮಂಜುನಾಥ ಜಿ. ದಾಸಪ್ಪನವರ 20 ವರ್ಷಗಳಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಬಡ್ತಿ ಹೊಂದಿದ ಅವರು ಈಗ ಸಂಶಿ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್‌ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ಇಂದಿರಾ ನಗರದಲ್ಲಿನ ಮನೆಯ ಮೇಲೆ ಶುಕ್ರವಾರ ಬೆಳಗಿನ ವೇಳೆಯಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಮನೆಯಲ್ಲಿದ್ದ ನಗದು, ಬಂಗಾರ, ಬೆಳ್ಳಿ ಹಾಗೂ ವಿವಿಧ ಬ್ಯಾಂಕಿನ ಪಾಸ್ ಬುಕ್‌ಗಳು, ಅಕ್ರಮ ಆಸ್ತಿಯ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಕುಂದಗೋಳ ತಾಲೂಕಿನ ಸಂಶಿಯ ನಾಡ ಕಚೇರಿ ಹಾಗೂ ಗುಡಗೇರಿಯ ಮಾವನ ಮನೆಯ ಮೇಲೆ ದಾಳಿ ಸಂಜೆ ವೇಳೆಗೂ ಮುಂದುವರೆದಿದೆ. ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ, ಶಿವಳ್ಳಿ, ಕೆ.ಸಿ. ಅಸುಂಡಿ, ಪಿಎಸ್‌ಐ ಬಿದರಿ, ಹುಲ್ಲಣ್ಣವರ ಸಿಬ್ಬಂದಿ ನಾರಾಯಣ ಚೂರಿ, ಮೋಹನ ಕಂಗೂರಿ, ಡಿ.ವೈ. ಜಗತಾಪ, ಪ್ರದೀಪ ಕುದರಿ, ದೀಪಾಲಿ, ದ್ರಾಕ್ಷಾಯಣಿ ಬಳಿಗಾರ, ಹಂಚಿನಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.