ಹಳ್ಳಹಿಡಿದ ಶುದ್ಧ ನೀರು ಘಟಕ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 21
13ನೇ ಹಣಕಾಸು ಆಯೋಗದಡಿ ಅತಿ ಶೋಷಿತ ಹಾಗೂ ನೀರಿನ ಗುಣಮಟ್ಟದ ತೀವ್ರ ಸಮಸ್ಯೆಗೊಳಗಾಗಿರುವ ಗ್ರಾಮೀಣ ಜನವಸತಿಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸಮರ್ಪಕ ವ್ಯವಸ್ಥೆಯೊಂದಿಗೆ ಅಳವಡಿಸಲು ಸರ್ಕಾರ ಕೋಟ್ಯಂತರ ಅನುದಾನ ನೀಡಿದ್ದು, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಯೋಜನೆ ತಾಲೂಕಿನಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ.
ಸಮಸ್ಯಾತ್ಮಕ ಗ್ರಾಮೀಣ ಪ್ರದೇಶಗಳಾದ ಆದ್ರಳ್ಳಿ, ಗೊಜನೂರ, ಛಬ್ಬಿ, ಬನ್ನಿಕೊಪ್ಪ, ಮಾಡಳ್ಳಿ, ಮಾಗಡಿ, ಯಳವತ್ತಿ, ರಣತೂರ, ಸೂರಣಗಿ ಗ್ರಾಮಗಳಲ್ಲಿ 2 ಮತ್ತು 4 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕಗಳನ್ನು ಅಳವಡಿಸಿದ್ದು, ಬರೀ ಶೆಡ್ಗಳು ಮಾತ್ರ ಕಾಣುತ್ತಿದ್ದು, ಯಾವ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಯೋಜನೆಯಲ್ಲಿ ಕೋಟ್ಯಂತರ ಹಣದ ಅವ್ಯವಹಾರ ನಡೆದಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಗಂಭೀರ ಆರೋಪ: ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ 6 ಸಾವಿರ ಜನಸಂಖ್ಯೆ ಇದ್ದು, ಜನರು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. 3 ಕಿ.ಮೀ. ದೂರದ ಸೋಗೀಹಾಳ ಗ್ರಾಮಕ್ಕೆ ಹೋಗಿ ನಿತ್ಯ ಕುಡಿಯುವ ನೀರು ತರುವ ಸ್ಥಿತಿ ಇದೆ. ಗ್ರಾಮದಲ್ಲಿ ಬೋರ್ವೆಲ್ನಿಂದ ಬರುವ ನೀರು ಸವುಳಾಗಿದ್ದು, ಕುಡಿಯಲು ಬರುವುದಿಲ್ಲ. ಈ ಗ್ರಾಮದ ಹೊರ ವಲಯದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ತರಾತುರಿಯಲ್ಲಿ ಯಾರ ಗಮನಕ್ಕೂ ತರದೇ ಶೆಡ್ ನಿರ್ಮಿಸಿ ಹೋಗಿದ್ದು, 3 ವರ್ಷ ಕಳೆದರೂ ಕಾರ್ಯನಿರ್ವಹಿಸದೇ ರು. 10 ಲಕ್ಷಕ್ಕೂ ಹೆಚ್ಚು ಮೊತ್ತದ ಬಿಲ್ ತೆಗೆದಿದ್ದು, ಶೆಡ್ಗೆ ಬೀಗ ಹಾಕಿ ಹೋಗಿದ್ದಾರೆ. ಅಧಿಕಾರಿಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರು ತಿರುಗಿಯೂ ನೋಡಿಲ್ಲ ಎಂದು ಗ್ರಾಪಂ. ಅಧ್ಯಕ್ಷೆ ಶಾಂತವ್ವ ಮಾನಪ್ಪ ಲಮಾಣಿ ಆರೋಪಿಸುತ್ತಾರೆ.
ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಹಾಗೂ ಗ್ರಾಮದಲ್ಲಿ ಜರುಗಿದ ಜನಸ್ಪಂದನ ಸಭೆಯಲ್ಲಿಯೂ ಅಧಿಕಾರಿಗಳ ಗಮನ ಸೆಳೆದಿದ್ದು, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಶೆಡ್ ಪಕ್ಕದಲ್ಲಿ ಸಿಂಟ್ಯಾಕ್ಸ್ ಕೆಡವಿ ಹೋಗಿದ್ದು, ಜನತೆಗೆ ಮಾತ್ರ ಶುದ್ಧ ಕುಡಿಯುವ ನೀರು ಕನಸಾಗಿಯೇ ಉಳಿದಿದೆ ಎಂದು ಗ್ರಾಪಂ ಸದಸ್ಯರಾದ ರಮೇಶ ಲಮಾಣಿ, ಸೀತಾಬಾಯಿ ಲಮಾಣಿ, ಬಸವರಾಜ ಕಾಮನವರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರ ತವರು ಜಿಲ್ಲೆಯಲ್ಲಿಯೇ ಯೋಜನೆ ವಿಫಲಗೊಂಡು ಕೋಟ್ಯಂತರ ಹಣದ ಅವ್ಯವಹಾರ ನಡೆದಿದ್ದರೂ ಇತ್ತ ಗಮನ ಹರಿಸದೇ ಇರುವ ಬಗ್ಗೆ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯ ಸಫಲತೆ ಹಾಗೂ ಅವುಗಳ ಕಾರ್ಯಕ್ಷಮತೆಯ ವರದಿಯನ್ನು ಜಿಲ್ಲಾ ಪಂಚಾಯಿತಿಯವರು ಸರ್ಕಾರಕ್ಕೆ ನೀಡಬೇಕೆಂಬ ಕಟ್ಟುನಿಟ್ಟಿನ ಆದೇಶವಿದ್ದು, ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವ ಬಗ್ಗೆ ನಿಸ್ಫಕ್ಷಪಾತ ತನಿಖೆಯಿಂದ ಹೊರಬರಬೇಕಾಗಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮ: ಛಬ್ಬಿ ಗ್ರಾಮದ ಶೆಡ್ನಲ್ಲಿರುವ ನೀರು ಶುದ್ಧೀಕರಣ ಯಂತ್ರಗಳನ್ನು ಗುತ್ತಿಗೆದಾರರು ತೆಗೆದುಕೊಂಡು ಹೋಗಿದ್ದಾರೆ. 3 ತಿಂಗಳಿಂದ ಬೀಗ ಹಾಕಿದ್ದು, ತೆಗೆದಿಲ್ಲ. ಗ್ರಾಮದ ಜನತೆ ಅಶುದ್ಧ, ಸವಳು ನೀರೆ ಕುಡಿಯಲು ಬಳಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಂಬಂಧಪಟ್ಟ ತಾಲೂಕಿನ ಜಿಪಂ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಜಾನು ಲಮಾಣಿ ಆಗ್ರಹಿಸಿದ್ದಾರೆ.
ಹೆಚ್ಚಿನ ಮಾಹಿತಿ ಇಲ್ಲ
ತಾಲೂಕಿನ ಒಂಬತ್ತು ಗ್ರಾಮಗಳಲ್ಲಿ ಕನಿಷ್ಠ 10 ವರ್ಷಗಳ ನಿರ್ವಹಣೆ, ವ್ಯವಸ್ಥೆ ಜವಾಬ್ದಾರಿಯೊಂದಿಗೆ ಆಧುನಿಕ ತಂತ್ರಜ್ಞಾನದ ಶುದ್ಧೀಕರಣ ಘಟಕಗಳನ್ನು ಅಳವಡಿಸಲು ಹೈದ್ರಾಬಾದ್ ಮೂಲದ ಸ್ಯ್ಮಾಟ್ ಆಕ್ಯೂವಾ ಖಾಸಗಿ ಕಂಪನಿಯ ಗುತ್ತಿಗೆದಾರರು ಈ ಕಾರ್ಯನಿರ್ವಹಿಸಿದ್ದು, ಕಳೆದ 2 ವರ್ಷಗಳಿಂದ ಈ ಕಾರ್ಯ ನಡೆದಿದೆ. ಹೊಸದಾಗಿ ವರ್ಗಾವಣೆಗೊಂಡು ಬಂದಿದ್ದು, ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಎಲ್ಲವನ್ನು ಪರಿಶೀಲನೆ ನಡೆಸುವುದಾಗಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಜೆ.ಆರ್. ಹೆಗಡೆ ಹೇಳುತ್ತಾರೆ.
ಹೋರಾಟದ ಎಚ್ಚರಿಕೆ
ಅವ್ಯವಹಾರ ನಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಒಂದು ವಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸದೇ ಹೋದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದೆದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಆದರಳ್ಳಿ ಗ್ರಾಮದ ಸೀತವ್ವ ಲಮಾಣಿ, ರತ್ನವ್ವ ಲಮಾಣಿ, ಯಂಕವ್ವ ಶಂಕ್ರಪ್ಪ ಲಮಾಣಿ, ಚನ್ನಪ್ಪ ಲಮಾಣಿ, ಪರಶುರಾಮ ಲಮಾಣಿ, ಪಾಂಡಪ್ಪ ಲಮಾಣಿ, ಶಂಕ್ರಪ್ಪ ಲೋಕಪ್ಪ ಲಮಾಣಿ, ಮಾಂತಗೌಡ ಕೊಟ್ರಗೌಡ ಪಾಟೀಲ, ನಾನಪ್ಪ ಗೋವಿಂದಪ್ಪ ಲಮಾಣಿ ಕೃಷ್ಣಪ್ಪ ಲಮಾಣಿ ಎಚ್ಚರಿಸಿದ್ದಾರೆ.
ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

