ಗದಗ

ಬಿಸಿಲಿನ ತಾಪಕ್ಕೆ ಕಮರಿದ ಕಡಲೆ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 22
ತಾಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಈಗ ಹತ್ತಾರು ಸಮಸ್ಯೆ ದಾಟಿ ಬಂದಿದ್ದು, ಆದರೀಗ ಅತಿಯಾದ ಬಿಸಿಲಿನ ತಾಪದಿಂದ ಒಣಗುತ್ತಿದೆ.
ರಾತ್ರಿಯೆಲ್ಲಾ ಅತಿಯಾದ ಚಳಿ, ಹಗಲೆಲ್ಲ ಅತಿಯಾದ ಬಿಸಿಲಿನಿಂದ ಕಡಲೆ ಬೆಳೆಗೆ ತೇವಾಂಶದ ಕೊರತೆ ಎದುರಾಗಿದ್ದು, ಈಗಾಗಲೇ ಬಹುತೇಕ ಬೆಳೆಗಳು ಒಣಗಿವೆ. ಅಲ್ಲದೇ ಕೆಲ ರೈತರಿಗೆ ಇಳುವರಿ ಕುಸಿತವಾಗುವ ಆತಂಕ ಎದುರಾಗಿದೆ. ಉತ್ತಮ ಇಳುವರಿ ಪಡೆದು ಲಾಭಗಳಿಸಬೇಕೆನ್ನುವು ರೈತರ ಆಸೆ ಕಮರಿದೆ.  
ಈ ಭಾಗದಲ್ಲಿ ಸತತವಾಗಿ 2 ವರ್ಷದಿಂದ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ  ಎದುರಿಸಿದ್ದರು. ಪ್ರಸಕ್ತ ಸಾಲಿನಲ್ಲಾದರೂ ಉತ್ತಮ ಮಳೆಯಾಗಿ ಹೆಚ್ಚಿನ ಇಳುವರಿ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ರೈತಾಪಿ ವರ್ಗವಿತ್ತು. ಆದರೆ, ಹಿಂಗಾರು ಹಂಗಾಮಿನ ಪ್ರಾರಂಭದಲ್ಲಿ ಉತ್ತಮವಾದ ಮಳೆಯಾಯಿತಾದರೂ ಅದರ ತೇವಾಂಶ ಮಾತ್ರ ಭೂಮಿಯಲ್ಲಿ ಹೆಚ್ಚಿನ ದಿನಗಳ ಕಾಲ ಉಳಿಯದೇ ಇರುವುದರಿಂದ ಇಂದು ರೈತರು ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ತಾಲೂಕಿನ ರೈತರ ಗೋಳು ಹೇಳತೀರದಂತಾಗಿದೆ.
ಬಿತ್ತನೆ ವಿವರ: ಪ್ರಸಕ್ತ ಸಾಲಿನಲ್ಲಿ ನರಗುಂದ ತಾಲೂಕು ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳೂ ಸೇರಿ 14,600 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಇದರಲ್ಲಿ ಹಲವಾರು ರೈತರು ಒಣಬೇಸಾಯ ಪದ್ಧತಿಯನ್ನೇ ಆಧರಿಸಿ ಬಿತ್ತನೆ ಮಾಡಿದ್ದರೆ. ಕೆಲವಾರು ರೈತರು ಮಾತ್ರ ಕಾಲುವೆ ನೀರಾವರಿ ನಂಬಿದ್ದಾರೆ. ಆದರೆ, ವಿಪರ್ಯಾಸವೆಂದರೆ ಕಾಲುವೆ ನೀರಾವರಿಯನ್ನು ನಂಬಿರುವ ರೈತರು ಕಾಲುವೆಯಲ್ಲಿ ಸಮರ್ಪಕವಾದ ನೀರು ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ನೀರಾವರಿ ಹೊಂದಿರುವ ರೈತರೂ ಸಮಸ್ಯೆ ಎದುರಿಸುವಂತಹ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಎಕರೆಗೆ ರು. 10 ಸಾವಿರ ಖರ್ಚು: ಕಡಲೆ ಬೆಳೆ ಬಿತ್ತನೆ ಸೇರಿದಂತೆ ಕೀಟ ಬಾಧೆಯ ನಿರ್ವಹಣೆ ಎಲ್ಲ ಖರ್ಚನ್ನು ಗಮನಿಸಿದಲ್ಲಿ ಪ್ರತಿ ಎಕೆರೆಗೆ ರು. 10 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿಕೊಂಡಿರುವ ರೈತರಿಗೀಗ ದಿಕ್ಕೇ ತೋಚದಂತಾಗಿದೆ. ಸದ್ಯ ಹೊಲದಲ್ಲಿರುವ ಕಡಲೆ ಬೆಳೆ ನೋಡಿದಲ್ಲಿ ಅವರು ಬಿತ್ತನೆ ಮಾಡಿದಷ್ಟು ಕಾಳುಗಳೂ ಬರುವ ಸ್ಥಿತಿ ಇಲ್ಲ. ಇನ್ನು ಕೆಲ ರೈತರ ಬೆಳೆಗಳು ಉತ್ತಮವಾಗಿದ್ದರೂ ನಿರೀಕ್ಷಿಸಿದಷ್ಟು ಕಡಲೆ ಇಳುವರಿ ಪಡೆಯಲು ಸಾಧ್ಯವಿಲ್ಲದಂತಾಗಿದೆ.

 ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.