ಗದಗ

ಮಾನವೀಯ ಸಮಾಜ ನಿರ್ಮಾಣವಾಗಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 22
ಮಹಿಳೆಯಿಂದ ಮಾತ್ರ ಮಾನವೀಯತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಮಾತೆ ಇಸ್ಲಾಮಿ ಹಿಂದ್‌ನ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಾಜಿದಾ ಲಾಲ್ಮಿಯಾ ಹೇಳಿದರು. ಅವರು ಶನಿವಾರ ಇಲ್ಲಿನ ತಾಜ್‌ನಗರದ ಹಿರಾ ಇಸ್ಲಾಮಿಕ್ ಸೆಂಟರ್‌ದಲ್ಲಿ ಮಹಿಳೆ-ಮಾನವೀಯತೆಯ ಶಿಲ್ಪಿ ಎಂಬ ವಿಷಯವಾಗಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಒಂದು ದಿನದ ತಾಲೂಕು ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಧಾರವಾಡ ಜಿಲ್ಲಾ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಸಂಚಾಲಕಿ ತಾಹೀರಾ ಅಂಜುಮ್ ಮಾತನಾಡಿ, ನೈತಿಕತೆಯು ಇತ್ತಿಚಿನ ದಿನಗಳಲ್ಲಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಮಹಿಳೆ ಪರಿಸ್ಥಿತಿಯ ಕೈಗೊಂಬೆಯಾಗುತ್ತಿದ್ದಾಳೆ, ಇದು ನಿಲ್ಲಬೇಕು. ಮಹಿಳೆಯರು ಜಾಗ್ರತರಾಗಬೇಕು. ಅಲ್ಲದೆ ಈ ಬಗ್ಗೆ ನವ ಪೀಳಿಗೆಯನ್ನು ಜಾಗೃತಿಗೊಳಿಸಿ ಪರಿಸ್ಥಿತಿಯನ್ನು ಸರಿದಾರಿಗೆ ತರುವಂತಾಗಲು ತರಬೇತಿಗೊಳಿಸುವುದು ಇಂದಿನ ಅವಶ್ಯಕತೆ ಇದೆ ಎಂದರು. ಜಮಾತೆ ಇಸ್ಲಾಮಿ ಹಿಂದ್‌ನ ಹುಬ್ಬಳ್ಳಿಯ ಮಹಿಳಾ ಸಂಚಾಲಕಿ ಸಲ್ಮಾ ಶೇಖ, ರಾಬಿಯಾ ಯರಗಟ್ಟಿ, ಗದಗ ಸಂಚಾಲಕಿ ಸೂಫಿಯಾ ಮುಲ್ಲಾ, ತಾಹೀರಾಬೇಗಂ ಶಿರಹಟ್ಟಿ ಮಾತನಾಡಿದರು. ಮುನವರ್ ಸುಲ್ತಾನಾ ಶಿರಹಟ್ಟಿ ಅವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸೂಫಿಯಾ ಮುಲ್ಲಾ ಪ್ರಾಸ್ತಾವಿಕ ಮಾತನಾಡಿದರು. ರಿಜ್ವಾನಾ ಮಕಾನದಾರ ನಿರೂಪಿಸಿದರು. ಮೆಹಬೂಬಿ ಧಾರವಾಡ ವಂದಿಸಿದರು.
ಮಹಿಳಾ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು: ಮಹಿಳೆ ಮತ್ತು ಪುರುಷರು ಸಮಾನರು. ಪ್ರತಿಸ್ಪರ್ಧಿಗಳಲ್ಲ. ಮಹಿಳೆಯರ ಮೇಲೆ ಹಿಂಸೆ, ದೌರ್ಜನ್ಯ, ಬಲಾತ್ಕಾರ, ಮಾನಭಂಗ, ಮದುವೆ ಸಂದರ್ಭದಲ್ಲಿ ಹಣ ಮತ್ತು ಸೌಂದರ್ಯವನ್ನು ಮಾನದಂಡವಾಗಿ ನೋಡುವ ಸಂಪ್ರದಾಯ, ಮದುವೆ ನಂತರ ಪೀಡಿಸುವ ನೀತಿ ಖಂಡಿಸುವುದು. ವಿವಾಹ ಬಂಧನ, ಕರ್ತವ್ಯ ನಿರ್ವಹಣೆ, ಮಕ್ಕಳ ಜನನ, ಪಾಲನೆ ಮತ್ತು ಪೋಷಣೆ, ಮನೆಯ ಕಾರ್ಯಗಳ ಈಡೇರಿಕೆ, ಸಮಾಜ ಮತ್ತು ಮಾನವೀಯತೆಯ ನಿರ್ಮಾಣದಲ್ಲಿ ಪುರುಷರ ಪಾತ್ರಕ್ಕಿಂತ ಮಹಿಳೆಯರು ಕಡಿಮೆ ಎಂದು ಭಾವಿಸಬಾರದು ಎಂದು ಸಮ್ಮೇಳನ ವಿನಂತಿಸುವುದು.
ಮಹಿಳೆಯರನ್ನು ಭೋಗದ ವಸ್ತುಗಳೆಂದು ಬಿಂಬಿಸುವಂತಹ ಆಧುನಿಕ ಸಿನಿಮಾ, ಹಾಡುಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಬಂಧಕ ಕಾಯ್ದೆಯನ್ನು ರಚಿಸಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸುತ್ತದೆ. ಶಾಲಾ ಕಾಲೇಜುಗಳಲ್ಲಿ, ಬಸ್ ರೈಲುಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಸೂಕ್ತ ವ್ಯವಸ್ಥೆ ನೀಡಬೇಕು. ದೇಶದ ಏಕತೆ, ಅಖಂಡತೆ ಮತ್ತು ಸರ್ವತೋಮುಖ ಅಭಿವೃದ್ಧಿಯ ವಿಷಯದಲ್ಲಿ ಕೋಮುವಾದ ಮನೋಭಾವ ತಾಳುವುದು ಸರಿಯಲ್ಲ. ಭಾರತ ಸರ್ಕಾರವು ದೇಶದ ಜಾತ್ಯತೀತ ವಾತಾವರಣವನ್ನು ನಿರಂತರ ಕದಡಲು ಯತ್ನಿಸುವ ಕೋಮುವಾದಿ ಶಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಸಮ್ಮೇಳನವು ಠರಾವುಗಳನ್ನು ಅಂಗೀಕರಿಸಿದ್ದು ವಿಶೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.