ಸುದ್ದಿ ಸಂಕ್ಷೇಪ
ಬೆಳೆ ವಿಮೆ ತುಂಬಲು ಸೂಚನೆ
ನರಗುಂದ: ತಾಲೂಕಿನ ರೈತ ಬಾಂಧವರು 2013-14ನೇ ಸಾಲಿನ ಹಿಂಗಾರು ಬೆಳೆಗಳಾದ ಗೋದಿ, ಜೋಳ, ಸೂರ್ಯಕಾಂತಿ, ಗೋವಿನ ಜೋಳ, ಕಡಲೆ, ಹುರಳಿ, ಅಗಸಿ, ಸೇರಿದಂತೆ ವಿವಿಧ ಬೆಳೆಗಳ ವಿಮೆ ತುಂಬಲು ಡಿಸೆಂಬರ್ 31 ಕೊನೆಯ ದಿನವಾಗಿದ್ದು, ತಾಲೂಕಿನ ರೈತರು ತಮ್ಮ ಹತ್ತಿರದ ವಿ.ಎಸ್.ಎಸ್. ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬೆಳೆವಿಮೆ ತುಂಬ ಬಹುದಾಗಿದೆ. ಇನ್ನು ಬೇಸಿಗೆ ಹಂಗಾಮಿಗೆ ಬೆಳೆ ವಿಮೆ ತುಂಬಲು ಫೆಬ್ರವರಿ 28 ಕೊನೆಯ ದಿನವಾಗಿದೆ ಎಂದು ಪ್ರಭಾರ ಕೃಷಿ ಅಧಿಕಾರಿ ಎಸ್.ಎ. ಸೂಡಿಶೆಟ್ಟರ್ ಪ್ರಕಟಣೆ ತಿಳಿಸಿದೆ.
ಪಾರ್ಶ್ವವಾಯು ಜಾಗೃತಿ ಮೂಡಲಿ
ಗದಗ: ಪಾರ್ಶ್ವವಾಯು ತಡೆಯಬಹುದಾದ ರೋಗವಾಗಿದೆ. ಅದರ ಬಗ್ಗೆ ಜಾಗೃತಿ ಅವಶ್ಯವಾಗಿದ್ದು, ಪಾರ್ಶ್ವವಾಯು ಬರಬಹುದಾದ ಕಾರಣ ತಿಳಿದು ಸೂಕ್ತ ಔಷಧಿ ಪಡೆದಲ್ಲಿ ಈ ರೋಗವನ್ನು ತಡೆಯಬಹುದಾಗಿದೆ ಎಂದು ಡಾ. ಜಿ.ಬಿ. ಪಾಟೀಲ ಹೇಳಿದರು. ಅವರು ಈಚೆಗೆ ಡಿ.ಜಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜಿನ ಪಂಚಕರ್ಮ ವಿಭಾಗ ಮತ್ತು ಎನ್.ಎಸ್.ಎಸ್. ಘಟಕದ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವಪಾರ್ಶ್ವವಾಯು ರೋಗ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾರ್ಶ್ವವಾಯು ಪೀಡಿತರಿಗೆ ಅನುಕಂಪದ ಬದಲು ಮನೋಧೈರ್ಯ ಕೊಡಬೇಕು. ನಿರಂತರ ಚಿಕಿತ್ಸೆ ಮತ್ತು ರೋಗಿಯ ಸ್ವಪ್ರಯತ್ನದಿಂದ ರೋಗಿಯು ಬೇಗನೆ ಗುಣಮುಖನಾಗುತ್ತಾನೆ ಎಂದರು. ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಉಮೇಶ ಪುರದ, ಹಿರಿಯ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ, ಡಾ. ವಿ.ಎಂ. ಸಜ್ಜನರ ಪಾರ್ಶ್ವವಾಯು ರೋಗದ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕ ಡಾ. ಎ.ಎಸ್. ಪಾಟೀಲ ಉಪನ್ಯಾಸ ನೀಡಿದರು. ಎನ್.ಎಸ್.ಎಸ್. ಘಟಕದ ಸಂಯೋಜಕ ಡಾ. ಬೂದೇಶ ಕನಾಜ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಈಚೆಗೆ ಗದಗನಲ್ಲಿ ಜರುಗಿದ ಜಿಲ್ಲಾ ಮಟ್ಟದ ಟೆನ್ನಿಕ್ವಾಯಟ್ ಸ್ಪರ್ಧೆಯಲ್ಲಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೋಮಶೇಖರ ಚವ್ಹಾಣ, ಪ್ರವೀಣ ಜಾವೂರ, ಪ್ರಮೋದ ಜಿಗಳೂರ, ಬಸವ್ವಾ ಲಮಾಣಿ, ಸುಮಿತ್ರಾ ಹರ್ಲಾಪುರ, ರಾಜೇಶ್ವರಿ ವಡ್ಡರ, ಭಾಗ್ಯಶ್ರೀ ಮಾರನಬಸರಿ, ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿ ಡಿ. 20 ರಂದು ಬೆಂಗಳೂರನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಲಿದ್ದಾರೆ ಎಂದು ದೈಹಿಕ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26ರಂದು ಬೈಕ್ ರ್ಯಾಲಿ
ಮುಂಡರಗಿ: ಗದಗ, ಕೊಪ್ಪಳ ಭಾಗದ ರೈತರ ಜೀವನಾಡಿಯಾಗಿರುವ ಶಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯನ್ನು ಸರ್ಕಾರ ತೀವ್ರಗತಿಯಲ್ಲಿ ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಮುಂಡರಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಡಿಸೆಂಬರ್ 26ರಂದು ಮುಂಡರಗಿಯಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ. ಈ ಕುರಿತು ಪ್ರಕಟನೆ ನೀಡಿರುವ ತಾಲೂಕು ಕರವೇ ಅಧ್ಯಕ್ಷ ಶಿವಾನಂದ ಬಾರಕೇರ ಡಿ. 26ರಂದು ಬೆಳಗ್ಗೆ 9ಕ್ಕೆ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಿಂದ ಬೈಕ್ ರ್ಯಾಲಿ ಹೊರಡಲಿದ್ದು, ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ರ್ಯಾಲಿಗೆ ಚಾಲನೆ ನೀಡುವರು. ರ್ಯಾಲಿಯು ಮುಂಡರಗಿ, ಬರದೂರು, ಮೇವುಂಡಿ, ಡಂಬಳ, ಕದಾಂಪುರ, ಪಾಪನಾಶಿ, ಅಡವಿಸೋಮಾಪುರ ಮಾರ್ಗವಾಗಿ ಗದಗಕ್ಕೆ ತೆರಳಿ ಅಲ್ಲಿ ಹೊಸಬಸ್ ನಿಲ್ದಾಣ, ಹಳೆ ಡಿಸಿ ಕಚೇರಿ, ಭೀಷ್ಮ ಕೆರೆ ಮತ್ತು ಮುಳಗುಂದ ನಾಕಾ ಮಾರ್ಗವಾಗಿ ಡಿಸಿ ಕಚೇರಿಗೆ ತಲುಪಿ ನಂತರ ಮನವಿ ಅರ್ಪಿಸುವುದಾಗಿ ತಿಳಿಸಿದ್ದಾರೆ.
ಇಂದು ಪೂರ್ವಭಾವಿ ಸಭೆ
ನರಗುಂದ: ಪಟ್ಟಣದ ತಾಪಂ ಸಭಾಭವನದಲ್ಲಿ ಡಿ. 23ರಂದು ಮಧ್ಯಾಹ್ನ 2ಕ್ಕೆ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಯುವಜನ ಮೇಳವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಸಂಘಟಿಸಬೇಕಾಗಿದ್ದರಿಂದ ಈ ಕುರಿತು ಚರ್ಚಿಸಲು ಹಾಗೂ ಮೇಳವನ್ನು ವ್ಯವಸ್ಥಿತವಾಗಿ ಸಂಘಟಿಸಲು ಚರ್ಚಿಸಲು ಸಭೆ ಕರೆಯಲಾಗಿದೆ. ತಾಲೂಕಿನ ಎಲ್ಲ ಯುವಕ, ಯುವತಿ ಮಂಡಳಗಳ ಸದಸ್ಯರು ಭಾಗವಹಿಸಬೇಕೆಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ
ಗದಗ: ನಗರದ 35ನೇ ವಾರ್ಡ್ ವಿಶ್ವೇಶ್ವರಯ್ಯ ಬಡಾವಣೆಯ ಸುತ್ತಮುತ್ತಲ ಪ್ರದೇಶದಲ್ಲಿನ ಪ್ರಮುಖ ರಸ್ತೆಗಳಲ್ಲಿ ಯಾವುದೇ ಪರವಾನಗಿ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ರಿಲಯನ್ಸ್ ಕಂಪನಿಯು 4ಜಿ ತಂತ್ರಜ್ಞಾನ ಅಳವಡಿಸಲು ಬೇಕಾಬಿಟ್ಟಿಯಾಗಿ ಭೂಮಿ ಅಗೆಯುತ್ತಿದ್ದು ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಮಗಾರಿಯನ್ನು ಗುತ್ತಿಗೆ ಹಿಡಿದವರು ಆಂಧ್ರಪ್ರದೇಶದವರಾಗಿದ್ದು, ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಅವರು ಎಲ್ಲಿ ಯಾವ ರಸ್ತೆಯನ್ನು ಅಗೆಯುತ್ತಾರೆ ಎನ್ನುವ ಬಗ್ಗೆ ಅವರಿಗೇ ಗೊತ್ತಿಲ್ಲ. ಇನ್ನು ರಸ್ತೆ ಅಗೆಯುವ ಪೂರ್ವದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕಾಮಗಾರಿಯ ಕುರಿತು ಅಗತ್ಯ ದಾಖಲೆಗಳನ್ನು ನೀಡಿ ಎಂದರೂ ಸಮರ್ಪಕವಾಗಿ ಉತ್ತರಿಸುತ್ತಿಲ್ಲ.
ಮನೆಯ ಮುಂಭಾಗ ಹಾಗೂ ಸಾರ್ವಜನಿಕ ಸ್ಥಳಗಲ್ಲಿ ಬೇಕಾಬಿಟ್ಟಿಯಾಗಿ ಭೂಮಿಯನ್ನು ಅಗೆಯುತ್ತಿದ್ದು, ಇದು ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದೆ. ಕೆಲವೆಡೆ ಅಗೆದ ಭೂಮಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು, ಈ ಕುರಿತು ನಗರಸಭೆಯ ಅಧಿಕಾರಿಗಳು ಹಾಗೂ ಗದಗ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

