ಮುಂಡರಗಿ ಬರ ಪ್ರದೇಶವೆಂದು ಘೋಷಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 22
ಮುಂಡರಗಿ ತಾಲೂಕಿನಲ್ಲಿ ಮಳೆಗಾಲಕ್ಕಿಂತ ಬರಗಾಲವೇ ಹೆಚ್ಚು. ಆದಾಗ್ಯೂ ಸಹ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಬರಗಾಲ ತಾಲೂಕುಗಳನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ಮುಂಡರಗಿ ತಾಲೂಕನ್ನು ಕೈ ಬಿಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸಲ್ಲದು ಎಂದು ರಾಜ್ಯ ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಅವರು ಈಚೆಗೆ ಮುಂಡರಗಿ ಹಾಗೂ ಡಂಬಳ ಹೋಬಳಿಗಳ ರೈತರ ಹೊಲಗಳಿಗೆ ತೆರಳಿ ಅಲ್ಲಿ ಒಣಗಿ ನಿಂತಿರುವ ಬೆಳೆಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿರುವ 175 ತಾಲೂಕುಗಳಲ್ಲಿ ಮುಂಡರಗಿ ತಾಲೂಕು ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕು. 67 ತಾಲೂಕುಗಳನ್ನು ಘೋಷಣೆ ಮಾಡುವ ಸಂದರ್ಭದಲ್ಲಿ ಮುಂಡರಗಿ ತಾಲೂಕನ್ನು ಕೈಬಿಟ್ಟಿರುವುದು ಆಶ್ಚರ್ಯ ತಂದಿದೆ. ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಬೆಳೆಗಳು ನಾಶವಾಗಿವೆ. ಮೆಕ್ಕೆಜೋಳ, ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗಿ ನಿಂತು, ರೈತರು ಸಾಲದ ಬಾಧೆಯಿಂದ ನರಳುವಂತಾಗಿದೆ. ತಾಲೂಕಿನಲ್ಲಿ ಹಿಂಗಾರಿ ಮಳೆಯೂ ಕೈಕೊಟ್ಟಿದ್ದರಿಂದ ಬಿಳಿಜೋಳ ಒಣಗಿ ನಿಂತಿದ್ದು, ಸೂರ್ಯಕಾಂತಿ ಬೂದಿ ರೋಗಕ್ಕೆ ತುತ್ತಾಗಿದೆ. ಗೋದಿಬೆಳೆ ಹುಟ್ಟಿ ಕೇವಲ ನಾಲು ದಂಟುಗಳಾಗಿ ಒಣಗಿಹೋಗಿದೆ. ಹಿಂಗಾರಿ ಬೆಳೆ ಸಂಪೂರ್ಣ ನಾಶವಾಗಿದ್ದರೂ ತಾಲೂಕನ್ನು ಬರಗಾಲ ಪ್ರದೇಶವೆಂದು ಸರ್ಕಾರ ಘೋಷಿಸಿಲ್ಲ. ಬರಗಾಲ ಘೋಷಣೆಗೆ ಸರ್ಕಾರದ ಮಾನದಂಡವೇನು ಎಂದು ಗೌಡರ ಪ್ರಶ್ನಿಸಿದರು. ಬರಗಾಲ ಪ್ರದೇಶವನ್ನು ಘೋಷಣೆ ಮಾಡುವ ಪೂರ್ವದಲ್ಲಿ ಸಂಪುಟ ಸಭೆನಡೆಸಿ ಸಭೆಯಲ್ಲಿ ಬರಗಾಲ ಪ್ರದೇಶವೆಂದು ಘೋಷಣೆ ಮಾಡುವ ತಾಲೂಕುಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಮುಂಡರಗಿ ತಾಲೂಕಿನ ಹೆಸರನ್ನು ಪ್ರಸ್ತಾಪ ಮಾಡದಿರುವುದು ಅವರು ನಮ್ಮ ತಾಲೂಕಿನ ಬಗ್ಗೆ ತೋರಿಸುತ್ತಿರುವ ನಿರ್ಲಕ್ಷ್ಯ ಎತ್ತಿತೋರಿಸುತ್ತಿದೆ.
ರಾಜಕೀಯವಾಗಿ ಒಡೆದು ಹೋಗಿರುವ ಮುಂಡರಗಿ ತಾಲೂಕಿಗೆ ಈ ರೀತಿ ಪದೇ ಪದೇ ಅನ್ಯಾಯವಾಗುತ್ತಲೇ ಬಂದಿದೆ. ಶಿರಹಟ್ಟಿ ಶಾಸಕರು ಶಿರಹಟ್ಟಿ ತಾಲೂಕನ್ನು, ರೋಣ ಶಾಸಕರು ರೋಣ ತಾಲೂಕನ್ನು ಹೆಚ್ಚು ಅಭಿವೃದ್ಧಿ ಪಡಿಸುವ ಮೂಲಕ ಮುಂಡರಗಿ ತಾಲೂಕನ್ನು ನಿರ್ಲಕ್ಷಿಸಿದ್ದಾರೆ. ಇವರೀರ್ವರಿಗೂ ಮುಂಡರಗಿ ತಾಲೂಕಿನ ಮತದಾರರು ಮತಹಾಕಿದ್ದಾರೆ ಎನ್ನುವುದನ್ನು ಮರೆಯಬಾರದು. ಸಂಸದರಾಗಲಿ, ವಿಪ ಸದಸ್ಯರಾಗಲಿ ಒಮ್ಮೆಯೂ ಇತ್ತಕಡೆ ತಿರುಗಿಯೂ ನೋಡಿಲ್ಲ.
ಸರ್ಕಾರ ಈ ಕೂಡಲೇ ಮುಂಡರಗಿಯನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಈರ್ವರು ಶಾಸಕರು ಇದಕ್ಕೆ ಒತ್ತಡ ತರಬೇಕು. ಸರ್ಕಾರ ಒಂದು ವೇಳೆ ಘೋಷಿಸದೇ ಹೋದಲ್ಲಿ ತಾಲೂಕಿನ ರೈತರೊಂದಿಗೆ ಗದಗ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಜರುಗುವ ಕೆಡಿಪಿ ಸಭೆಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು. ಕರವೇ ಅಧ್ಯಕ್ಷ ಶಿವು ಬಾರಕೇರ, ಈಶ್ವರಪ್ಪ ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

