ಗದಗ

ಅಯ್ಯಪ್ಪ ಮಾಲಾಧಾರಿಗಳಿಂದ ಪ್ರತಿಭಟನೆ

Published On :

ಗದಗ: ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ಸರ್ಕಾರ ಮತಗಳಿಕೆಯ ದುರಾಸೆಯಲ್ಲಿ ಬಹುಸಂಖ್ಯಾತ ಹಿಂದೂಗಳ ತುಷ್ಟೀಕರಣ ನಡೆಸುತ್ತಿದೆ ಎಂದು ಜಿಲ್ಲಾ ಶ್ರೀರಾಮಸೇನಾದ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ಜಿಲ್ಲಾ ಶ್ರೀರಾಮಸೇನೆ ಹಾಗೂ ಜಿಲ್ಲಾ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಗಾಂಧಿವೃತ್ತದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ನೇತೃತ್ವವಹಿಸಿ ಮಾತನಾಡಿದರು.
ಹಿಂದೂ ಧರ್ಮದ ಎಲ್ಲ ಜಾತಿ, ಜನಾಂಗಗಳು ಜಾತಿಭೇದ ಮರೆತು ಆಚರಿಸುವ ಅಯ್ಯಪ್ಪಸ್ವಾಮಿ ವ್ರತಧಾರಿಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಆರ್ಥಿಕ ನೆರವು ದೊರೆತಿರುವುದಿಲ್ಲ. ಪ್ರಜಾಪ್ರಭುತ್ವದ ಅಡಿಯಲ್ಲಿ ಎಲ್ಲರೂ ಸರಿಸಮಾನರು ಎಂಬ ಸಂವಿಧಾನದ ಮೂಲ ಆಶಯಗಳ ಕುರಿತು ಮಾತನಾಡುವ ಸರ್ಕಾರ ಹಿಂದೂ ಯಾತ್ರಾರ್ಥಿಗಳಿಗೆ ಯಾವುದೇ ರೀತಿಯ ನೆರವು ನೀಡದೇ ತಾರತಮ್ಯ ನೀತಿ ಅನುಸರಿಸುತ್ತಿದೆ.
ಪ್ರತಿವರ್ಷ ಹಜ್‌ಯಾತ್ರೆಗೆ ತೆರಳುವ ಮುಸ್ಲಿಂ ಬಾಂಧವರಿಗೆ ಆರ್ಥಿಕ ನೆರವು, ವಿಶೇಷ ರೈಲು, ವಿಮಾನ ಸೌಕರ್ಯ ಸೇರಿದಂತೆ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಭೂಮಿ ಮತ್ತು ಆರ್ಥಿಕ ನೆರವು ನೀಡುತ್ತಿವೆ. ಆದರೆ, ಪ್ರತಿವರ್ಷ 48 ದಿನಗಳ ವ್ರತಾಚರಣೆಯ ಮೂಲಕ ದೇಶದ ವಿವಿಧ ರಾಜ್ಯಗಳಿಂದ ಶಬರಿಮಲೆಗೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಯಾವುದೇ ಆರ್ಥಿಕ ನೆರವಾಗಲಿ, ವಿಶೇಷ ವ್ಯವಸ್ಥೆಯಾಗಲಿ ಕಲ್ಪಿಸದೇ ಸಾಮಾಜಿಕ ನ್ಯಾಯದ ವಿರುದ್ಧ ಸರ್ಕಾರ ಕಾರ್ಯ ನಡೆಸುತ್ತಿದೆ. ಆರ್ಥಿಕ ತೊಂದರೆಯ ಮಧ್ಯದಲ್ಲಿಯೇ ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗೆ ನೆರೆಯ ಕೇರಳ ರಾಜ್ಯದಲ್ಲಿ ಬೇಕಾಬಿಟ್ಟಿ ವಿಧಿಸುವ ರಸ್ತೆ ತೆರಿಗೆ ಭಾರವಾಗುತ್ತಿದ್ದು, ಈ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿದೆ.
ಮುಜರಾಯಿ ಇಲಾಖೆಯ ಅಡಿಯಲ್ಲಿನ ಹಿಂದೂ ದೇವಸ್ಥಾನಗಳಿಂದ ಬರುವ ಕೋಟ್ಯಂತರ ಆದಾಯ ಹಿಂದೂಗಳಿಗೆ ದೊರಕದೇ ಹೋಗುತ್ತಿರುವುದು ವಿಷಾದಕರ ಸಂಗತಿ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಮಾಲಾಧಾರಿ ಶಬರಿಮಲೆ ಯಾರ್ಥಾರ್ತಿಗಳಿಗೆ ರು. 5 ಸಾವಿರ ಯಾತ್ರಾ ಸಹಾಯಧನ ನೀಡುವ ಮತ್ತು ಶಬರಿಮಲೆಯಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಪ್ರತ್ಯೇಕ ಮೂಲ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಎಂ.ಬಿ. ಬಸಾಪುರ, ಕಾರ್ಯದರ್ಶಿ ಆರ್.ಎನ್. ಕಮಿತ್ಕರ್, ಮಹೇಶ ರೋಖಡೆ ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕುಗಳ ಮತ್ತು ಅವಳಿ ನಗರದ ವಿವಿಧ ಸನ್ನಿಧಾನಗಳ ಮಾಲಾಧಾರಿ ಸ್ವಾಮಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ ನಗರದ ಜೋಡಮಾರುತಿ ದೇವಸ್ಥಾನದಿಂದ ಪ್ರಾರಂಭಿಸಲಾದ ಪ್ರತಿಭಟನಾ ಮೆರವಣಿಗೆ ಚವಡಿಕೂಟ, ಹುಯಿಲಗೋಳ ನಾರಾಯಣರಾವ ವೃತ್ತ, ಮಹೇಂದ್ರಕರ ವೃತ್ತದ ಮೂಲಕ ಗಾಂಧಿವೃತ್ತಕ್ಕೆ ಆಗಮಿಸಿ, ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಜಯಶ್ರೀ ಸಿಂತ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.