ಗದಗ

ಮಹಿಳೆ ಬಲಿ ಪಡೆದರೇ ನರೇಗಲ್ಲ ಪೊಲೀಸರು?

Published On :

ಗದಗ: ಪೊಲೀಸರು ಎಂದರೆ ನಮ್ಮ ರಕ್ಷಕರು. ಆದರೆ, ನರೇಗಲ್ಲ ಠಾಣೆಯ ಸಿಬ್ಬಂದಿ ಮಾತ್ರ ಸಾರ್ವಜನಿಕರ ಪಾಲಿಗೆ ಯಮರೂಪಿಯಾಗಿದ್ದು, ಮಂಗಳವಾರ ರಾತ್ರಿ ವಾಹನ ತಪಾಸಣೆಯ ಹೆಸರಿನಲ್ಲಿ ಮಹಿಳೆಯೋರ್ವಳ ಸಾವಿಗೆ ಪರೋಕ್ಷವಾಗಿ ಕಾರಣವಾಗಿದ್ದು, ಘಟನೆ ನಂತರ, ನರೇಗಲ್ಲ ಪಟ್ಟಣವೇ ಪ್ರತಿಭಟನೆಗಿಳಿದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಏನಿದು ಘಟನೆ ?: ಜಿಲ್ಲೆಯ ನೀರಲಗಿ ಗ್ರಾಮದ ಈರವ್ವ ಪೂಜಾರ (50) ಎನ್ನುವ ಮಹಿಳೆಯ ಆರೋಗ್ಯದಲ್ಲಿ ಮಂಗಳವಾರ ಸಂಜೆ ಏರುಪೇರಾಗಿದೆ. ಇದರಿಂದ ಆತಂಕಗೊಂಡ ಮನೆಯವರು ತಕ್ಷಣವೇ ಗ್ರಾಮದಲ್ಲಿರುವ ಟಾಟಾ ಮ್ಯಾಜಿಕ್ ವಾಹನದಲ್ಲಿ ತೊಂದರೆಗೊಳಗಾದ ಮಹಿಳೆಯನ್ನು ನರೇಗಲ್ಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವಾಗ ಈ ವೇಳೆಯಲ್ಲಿಯೇ ಯಮರೂಪದಲ್ಲಿ ಅಡ್ಡ ಬಂದವರೇ ನರೇಗಲ್ಲ ಪೊಲೀಸ್ ಠಾಣೆಯ ಸಿಬ್ಬಂದಿ. ಅದರಲ್ಲಿಯೂ ಠಾಣೆಯ ಪಿ.ಎಸ್.ಐ. ಎನ್.ಎಚ್. ಬೇಲೂರ, ರೋಗಿಯನ್ನು ಸಾಗಿಸುತ್ತಿದ್ದ ವಾಹನವನ್ನು ನಿಲ್ಲಿಸಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ವಾಹನ ಚಾಲನಾ ಪತ್ರಗಳನ್ನು ನೀಡುವಂತೆ ಸೂಚಿಸಿದ್ದಾರೆ.
ರೋಗಿಯನ್ನು ಕರೆದುಕೊಂಡು ಬರುವ ಅವಸರದಲ್ಲಿ ನನ್ನ ದಾಖಲೆಗಳನ್ನು ಬಿಟ್ಟು ಬಂದಿದ್ದೇನೆ. ದಯವಿಟ್ಟು ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಬಿಡಿ, ನಂತರ ಬಂದು ದಾಖಲೆಗಳನ್ನು ತೋರಿಸುತ್ತೇನೆ ಎಂದು ಚಾಲಕ ಗೋಗರೆದರೂ ಕ್ಯಾರೆ ಎನ್ನದ ಸಿಬ್ಬಂದಿ ದಾಖಲೆಗಳನ್ನು ನೀಡಿಯೇ ಹೋಗು, ಇಲ್ಲವೇ ದಂಡವನ್ನು ಭರಿಸು (ಲಂಚ) ಎಂದು ತಿಳಿಸಿದ್ದು, ಚಾಲಕ ಅದಕ್ಕೂ ನನ್ನ ಬಳಿ ಹಣವಿಲ್ಲ ಎಂದು ವಿನಂತಿಸಿದರೂ ಗಮನ ನೀಡಿದ ಅಧಿಕಾರಿಗಳ ವರ್ತನೆ ಸಹಜವಾಗಿ ಈರವ್ವ ಅವರ ಸಂಬಂಧಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಗೊಂದಲ ನಡೆಯುವುದರೊಳಗೆ, ಅರ್ಧ ಗಂಟೆಗೂ ಹೆಚ್ಚಿನ ಸಮಯ ವ್ಯಯವಾಗಿದ್ದು, ಅಷ್ಟರಲ್ಲಿ ಈರವ್ವಳ ಪ್ರಾಣ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಘಟನೆಯ ನಂತರ ನರೇಗಲ್ಲ ಪಟ್ಟಣದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಹಲವಾರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಪೊಲೀಸರ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ, ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿದ್ದು ವಿಶೇಷವಾಗಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೂ ನಿಲ್ಲಿಸಿದರು: ಈ ಘಟನೆ ನಡೆದಿದ್ದು 12 ಗಂಟೆಗೆ, ಆದರೆ ಸಂಜೆ 4.30 ರವರೆಗೂ ರೋಗಿಯನ್ನು ತಂದಿದ್ದ ವಾಹನವನ್ನು ಅಗತ್ಯ ದಾಖಲೆಗಳನ್ನು ನೀಡಬೇಕು ಇಲ್ಲವೇ, ರು. 1500 ದಂಡವನ್ನು ಭರಿಸಬೇಕು ಎಂದು ಕಾಯಿಸಿದ್ದಾರೆ.  ಈ ಮಧ್ಯೆ ಕುಟುಂಬಸ್ಥರು ನಾವು ತಂದ ವಾಹನ ಬೇಡ, ಆ ಮಹಿಳೆ ಸಾಯುತ್ತಾಳೆ. ಕನಿಷ್ಠ ಮಾನವೀಯತೆ ಆಧಾರದಲ್ಲಿ ನಿಮ್ಮ ವಾಹನದಲ್ಲಾದರೂ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿ ಎಂದು ಗೋಗರೆದರೂ ಅಧಿಕಾರಿ ಬೇಲೂರ ಮಾತ್ರ ಗಮನ ನೀಡಿಲ್ಲ, ಇನ್ನೊಂದು ಗಮನಾರ್ಹ ವಿಷಯವೆಂದರೆ ಆ ಮಹಿಳೆಯನ್ನು ತಂದಿದ್ದ ವಾಹನದಲ್ಲೇ ಮಹಿಳೆ ಸಾವನ್ನಪ್ಪಿದ್ದು. ವಾಹನ ಕೂಡಾ ಪೊಲೀಸ್ ಠಾಣೆಯ ಆವರಣದಲ್ಲಿಯೇ ನಿಂತಿತ್ತು.
ಜನರಲ್ಲಿ ಬೇಸರ: ಪಿ.ಎಸ್.ಐ ಬೇಲೂರ ಈ ಹಿಂದೆ ಗದಗ ಬಡಾವಣೆ ಠಾಣೆ ಸೇರಿದಂತೆ ಅವರು ಕೆಲಸ ಮಾಡಿದ ಪ್ರತಿಯೊಂದು ಠಾಣೆಯಲ್ಲಿಯೂ, ಈ ರೀತಿ ವಾಹನಗಳನ್ನು ನಿತ್ಯವೂ ನಿಲ್ಲಿಸಿ, ತಪಾಸಣೆಯ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು ಎನ್ನುವ ಆರೋಪಗಳಿವೆ. ಅವರು ನರೇಗಲ್ಲ ಠಾಣೆಗೆ ವರ್ಗಾವಣೆಯಾಗಿ ಬಂದಾಗಿನಿಂದಲೂ ಈ ವ್ಯವಸ್ಥೆ ಹೆಚ್ಚಾಗಿತ್ತು. ಎಂದು ಪ್ರತಿಭಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಮಾತನಾಡುತ್ತಿದ್ದರು.
ಮೇಲ್ನೋಟಕ್ಕೆ ಅಧಿಕಾರಿಯ ತಪ್ಪು ಕಂಡು ಬರುತ್ತಿದ್ದು, ತಕ್ಷಣವೇ ಅವರನ್ನು ಅಮಾನತು ಮಾಡಲಾಗಿದೆ. ಈ ಘಟನೆಯ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವಿಷಾದ ವ್ಯಕ್ತ ಪಡಿಸುತ್ತದೆ. ಈ ಕುರಿತು ಸಮಗ್ರವಾದ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು.
- ಡಾ. ಶರಣಪ್ಪ ಎಸ್.ಡಿ.
ಎಸ್ಪಿ ಗದಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.