ಸೇವಾ ವೇತನಕ್ಕಾಗಿ ಲೋಕಾ ಮೊರೆ
ಕನ್ನಡಪ್ರಭ ವಾರ್ತೆ, ರೋಣ, ಡಿ. 24
19 ವರ್ಷಗಳಿಂದ ಕನ್ನಡ ಭಾಷಾ ಸೇವಾ ವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದರೂ, ಈವರೆಗೂ ಶಿಕ್ಷಣ ಇಲಾಖೆ ವೇತನ ಪಾವತಿಸುವಲ್ಲಿ ಗಮನ ಹರಿಸುತ್ತಿಲ್ಲ. ತಾಲೂಕು ಬಿಇಒ ಕಚೇರಿಗೆ ಅಲೆದು ಬೇಸರವಾಗಿದ್ದು, ನ್ಯಾಯ ದೊರಕಿಸಿಕೊಡಿ ಎಂದು ತಾಲೂಕಿನ ಸವಡಿ ಗ್ರಾಮದ 79ರ ವಯೋವೃದ್ಧ ನಿವೃತ್ತ ಶಿಕ್ಷಕ ಇಬ್ರಾಹಿಂಸಾಬ್ ತಳ್ಳಿಹಾಳ ಇವರು ಸೋಮವಾರ ತಾಪಂ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಜಿಲ್ಲಾ ಲೋಕಾಯುಕ್ತರಲ್ಲಿ ಮನವಿ ಸಲ್ಲಿಸಿ ವಿನಂತಿಸಿದರು.
1994ರಲ್ಲಿ ನಾನು ವೃತ್ತಿ ಹೊಂದಿದ್ದು, ನಿವೃತ್ತಿ ಪೂರ್ವದಲ್ಲಿಯೇ ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ಪಾಸಾಗಿದ್ದೇನೆ. ಸರ್ಕಾರ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ (ಸರ್ಕಾರಿ ಭಾಷಾ ವೇತನ) ಕೊಡಲಾಗುತ್ತಿದೆ. ಅದಕ್ಕಾಗಿ ನಿವೃತ್ತಿ ಬಳಿಕ ನಾನು ಭಾಷಾ ಸೇವಾ ವೇತನಕ್ಕಾಗಿ ಈವರೆಗೂ ರೋಣ ತಾಲೂಕ ಬಿಇಒ ಕಚೇರಿಗೆ 6 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಮೌಖಿಕವಾಗಿ ನೂರಾರು ಬಾರಿ ಮನವಿ ಮಾಡಿದ್ದೇನೆ. ಈವರೆಗೂ ಯಾವುದಕ್ಕೂ ಉತ್ತರವಿಲ್ಲದಂತಾಗಿದೆ.
ಈ ಕುರಿತು ಕೇಳಿದರೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಕಳುಹಿಸಲಾಗಿದೆ ಎನ್ನುತ್ತಾರೆ. ಉಪ ನಿರ್ದೇಶಕರ ಕಚೇರಿಗೆ ಹೋಗಿ ಕೇಳಿದರೆ, ತಾಲೂಕು ಬಿಇಒ ಕಚೇರಿಯಿಂದ ನಿಮ್ಮ ಯಾವುದೇ ಕಾಗದಗಳು ಬಂದಿಲ್ಲ ಎನ್ನುತ್ತಾರೆ. ನನಗೆ ವಯಸ್ಸಾಗಿದೆ. ನಡೆದಾಡಲು ಆಗುತ್ತಿಲ್ಲ 19 ವರ್ಷಗಳಿಂದ ಭಾಷಾ ವೇತನಕ್ಕಾಗಿ ಕಚೇರಿಗೆ ಅಲೆಯುವುದೇ ಆಗಿದೆ. ಬಿಇಒ ಕಚೇರಿಯಲ್ಲಿ ನನ್ನ ಕೂಗು ಯಾರಿಗೂ ಕೇಳುತ್ತಿಲ್ಲ. ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವೃದ್ಧ ನಿವೃತ್ತ ಶಿಕ್ಷಕ ಇಬ್ರಾಹಿಂಸಾಬ್ ತಳ್ಳಿಹಾಳ ಲೋಕಾಯುಕ್ತರಲ್ಲಿ ಅಳಲು ತೋಡಿಕೊಂಡರು. ಮನವಿ ಸ್ವೀಕರಿಸಿದ ಲೋಕಾಯುಕ್ತ ಸಿಬ್ಬಂದಿ ಎಂ.ಎಂ. ಅಯ್ಯನಗೌಡ್ರ ಮಾತನಾಡಿ, ಈ ಕುರಿತು ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದು, ನ್ಯಾಯ ದೊರಕಿಸಿಕೊಡುವಲ್ಲಿ ಲೋಕಾಯುಕ್ತ ಇಲಾಖೆ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು.
ಗ್ರಾಪಂ ಜಾಗೆ ಕಬಳಿಕೆ: ಗ್ರಾಂಪಂಗೆ ಸೇರಿದ ಆಸ್ತಿ ನಂಬರ್ 727ನ ಖುಲ್ಲಾ ಜಾಗೆಯು 1969ರ ಆಚೆಗೆ ಗ್ರಾಪಂಗೆ ಸೇರಿತ್ತು, ಈಗ ಮಾತ್ರ ಆ ಜಾಗೆಯು ಖಾಸಗಿ ವ್ಯಕ್ತಿಯಾದ ನಿಡಗುಂದಿ ಗ್ರಾಮದ ಪಂಚಪ್ಪ ಕಳಕಪ್ಪ ಕರಡಿಯವರ ಹೆಸರಿನಲ್ಲಿದೆ. ಈ ಜಾಗೆಯು ಗ್ರಾಪಂಗೆ ಸೇರಿದ್ದಾಗಿದ್ದರಿಂದ 1970ರ ಹಿಂದಿನ ಉತಾರಗಳನ್ನು ಪಡೆಯಲು ನಿಡಗುಂದಿ ಗ್ರಾಪಂ ಗೆ ಕಳೆದ ಜುಲೈ 5ರಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದೂ, ಈ ವರೆಗೂ ಮಾಹಿತಿ ನೀಡಿಲ್ಲ. ಗ್ರಾಪಂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಇದರಲ್ಲಿ ಗ್ರಾಪಂ ಕೈವಾಡವಿದೆ. 1970ರ ಆಚೆಗಿನ ಉತಾರ (ಫಹಣಿ ಪತ್ರ) ನೀವೇ ಒದಗಿಸಿಕೊಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿಡಗುಂದಿ ಗ್ರಾಮದ ಸುರೇಶ ಹುಬ್ಬಳ್ಳಿ, ಪರಸಪ್ಪ ವಡ್ಡರ, ಅಶೋಕ ತಳವಾರ, ಕಳಕಪ್ಪ ಹೊಟ್ಟಿನ, ಅಂದಪ್ಪ ಚಲವಾದಿ ಅವರು ಲೋಕಾಯುಕ್ತರಲ್ಲಿ ಮನವಿ ಸಲ್ಲಿಸದರು.
ದೂರು ದಾಖಲಿಸಲು ಹಿಂದೇಟು: ಮನೆಯಲ್ಲಿನ 10 ತೊಲೆ ಬಂಗಾರ, ಬೆಳ್ಳಿ ಸಾಮಗ್ರಿ, ರು. 50 ಸಾವಿರ ನಗದು ಸೇರಿದಂತೆ ಅನೇಕ ಬೆಲೆ ಬಾಳುವ ವಸ್ತುಗಳು ಕಳುವಾದ ಕುರಿತು ಕಳೆದ 4 ತಿಂಗಳಿನಿಂದ ತಾಲೂಕಿನ ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅಲೆದರೂ, ಪೊಲೀಸ್ರು ಮಾತ್ರ ದೂರು ದಾಖಲಿಸಿಕೊಳ್ಳದೇ ಸಮಜಾಯಿಷಿ ಕಳಿಸುತ್ತಿದ್ದಾರೆ.
ಕಳುವು ನಡೆದ ಬಳಿಕ ಬೆರಳಚ್ಚು ಮತ್ತು ಶ್ವಾನದಳ ತಂಡ ಕರೆಯಿಸಿ ಪರಿಶೀಲಿಸಿ ಎಂದು ಬಿನ್ನಹಿಸಿಕೊಂಡರೂ ಕೇಳಲಿಲ್ಲ. ಈವರೆಗೂ ಕಳುವಾದ ವಸ್ತುಗಳು ಸಿಕ್ಕಿರುವುದಿಲ್ಲ. ಇದರಿಂದ ನಮ್ಮ ಕುಟುಂಬ ಬೀದಿ ಪಾಲಾಗಿದೆ. ನೀವಾದರೂ ನ್ಯಾಯ ದೊರಕಿಸಿ ಕೊಡಬೇಕು ಎಂದು ತಾಲೂಕಿನ ಅಬ್ಬಿಗೇರಿ ಗ್ರಾಮದ ಮಲ್ಲಿಕಾರ್ಜುನ ಮಳಗಿ ಲೋಕಾಯುಕ್ತರಲ್ಲಿ ಅಳಲು ತೋಡಿಕೊಂಡರು. ಒಟ್ಟು 3 ಅರ್ಜಿಗಳು ಬಂದಿದ್ದವು. ಈ ಕುರಿತು ನಮ್ಮ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಲೋಕಾಯುಕ್ತ ಸಿಬ್ಬಂದಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

