ಒಣಗಿದ ಉದ್ಯಾನ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 24
20 ವರ್ಷಗಳ ಹಿಂದೆ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆ ಪಕ್ಕದಲ್ಲಿ ಪುರಸಭೆಯಿಂದ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಬೇಸಿಗೆಯಲ್ಲಿ ಸ್ವಲ್ಪಮಟ್ಟಿಗೆ ಒಣಗಿ, ಮತ್ತೆ ಮಳೆಗಾಲಕ್ಕೆ ತನ್ನಷ್ಟಕ್ಕೆ ತಾನೇ ಚಿಗುರೊಡೆಯಿತ್ತಿತ್ತು. ಒಮ್ಮೆಯೂ ಇಡೀ ಉದ್ಯಾನ ಸಂಪೂರ್ಣ ಒಣಗಿರಲಿಲ್ಲ. ಆದರೆ, ಈಗ 6-8 ತಿಂಗಳಿನಿಂದ ಸಂಪೂರ್ಣ ಒಣಗಿ ಹೋಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಸಾರ್ವಜನಿಕರು, ಪರಿಸರವಾದಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಕ್ಕಳಿಂದ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಸುಂದರ ಉದ್ಯಾನವನ ಇದೀಗ ಹಂದಿ, ನಾಯಿಗಳ ಹಾಗೂ ಬಿಡಾಡಿ ದನಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಈ ಉದ್ಯಾನವನದ ಎದುರಿನಲ್ಲಿರುವ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ನಿತ್ಯ ಇಲ್ಲಿಯೇ ಕುಳಿತು ಊಟೋಪಾಹಾರ ಮಾಡುತ್ತಿದ್ದರು. ಇದೀಗ ಅಲ್ಲಿ ಹಂದಿಗಳು ಎಲ್ಲೆಂದರಲ್ಲಿ ಗಲೀಜು ಮಾಡುತ್ತಿರುವುದರಿಂದ ನೆಲದ ಮೇಲೆ ಕುಳಿತುಕೊಳ್ಳಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಹಳ್ಳಹಿಡಿದ ಜೋಕಾಲಿ, ಕಾರಂಜಿ: ಉದ್ಯಾನವನಕ್ಕೆ ಬರುವ ಮಕ್ಕಳು ಆಟವಾಡಲೆಂದು ನಿರ್ಮಿಸಿದ್ದ ಜೋಕಾಲಿಯ ಸರಪಳಿ ಹರಿದು ಆಟವಾಡಲು ಬರದಂತಾಗಿದೆ. ಅಲ್ಲದೆ ಇಲ್ಲಿರುವ ಜಾರು ಬಂಡಿಯೂ ತುಕ್ಕು ಹಿಡಿದಿದೆ.
ಉದ್ಯಾನವನಕ್ಕೆ ಬರುವವರ ಕಣ್ಣು ತಂಪಾಗಿಸಲು, ಮಕ್ಕಳನ್ನು ರಂಜಿಸಲು ಕಾರಂಜಿಯನ್ನು ನಿರ್ಮಾಣ ಮಾಡಿ ಅದಕ್ಕೆ ರಾತ್ರಿ ಸಮಯದಲ್ಲಿ ವಿವಿಧ ಬಣ್ಣದ ಲೈಟ್ಗಳನ್ನು ಹಾಕಲಾಗಿತ್ತು. ಇದೀಗ ಇಲ್ಲಿನ ಗಿಡಮರಗಳಿಗೇ ನೀರು ಇಲ್ಲದಿರುವುದರಿಂದ ಕಾರಂಜಿಯೂ ಸ್ಥಗಿತಗೊಂಡಿದೆ. ಕಾರಂಜಿ ಕಟ್ಟಡದ ಕಲ್ಲುಗಳನ್ನು ಯಾರೋ ಕಿತ್ತುಕೊಂಡು ಹೋಗಿರುವುದು ಕಂಡು ಬರುತ್ತಿದೆ.
ಆಡಳಿತ ಮಂಡಳಿ ನಿರ್ಲಕ್ಷ್ಯ: ಅಧಿಕಾರಿಗಳ ನಿರ್ಲಕ್ಷ್ಯ, ಅಲ್ಲದೇ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಉದ್ಯಾನವನದ ಕುರಿತು ಕಾಳಜಿ ತೋರಿಸಿದರೆ ಈ ದುಸ್ಥಿತಿ ಬರುತ್ತಿರಲಿಲ್ಲ. ಆದರೆ, ಪುರಸಭೆ ಚುನಾವಣೆ ಮುಗಿದು 10 ತಿಂಗಳು ಆದರೂ ಇದುವರೆಗೂ ನೂತನ ಸದಸ್ಯರು ಅಧಿಕಾರ ಸ್ವೀಕರಿಸದಿರುವುದರಿಂದ ನೂತನ ಸದಸ್ಯರ ಕಾಳಜಿ ಕೊರತೆಯಿಂದಲೂ ಉದ್ಯಾನವನ ತನ್ನ ಸೌಂದರ್ಯ ಕಳೆದುಕೊಳ್ಳಲು ಕಾರಣವಾಗಿದೆ. 13ನೇ ಹಣಕಾಸು ಯೋಜನೆಯಡಿಯಲ್ಲಿ ಉದ್ಯಾನವನದ ಅಭಿವೃದ್ಧಿಗಾಗಿ ಹಣ ಇದ್ದರೂ ಅದನ್ನು ಬಳಕೆ ಮಾಡುತ್ತಿಲ್ಲ ಎಂದು ರ್ಸಾಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸೂಕ್ತ ವ್ಯವಸ್ಥೆ ಮಾಡುತ್ತೇವೆ: ಉದ್ಯಾನವನ ಸಂಪೂರ್ಣ ಹಾಳಾಗಿರುವ ಕುರಿತು ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಅವರನ್ನು ಮಾತನಾಡಿಸಿದಾಗ, ಉದ್ಯಾನವನದಲ್ಲಿರುವ ಮೋಟರ್ನಿಂದ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅದರಿಂದ ಒಂದೇ ಒಂದು ಹನಿ ನೀರು ಬರುತ್ತಿಲ್ಲ. ಇದರಿಂದಾಗಿ ಉದ್ಯಾನವನದಲ್ಲಿನ ಎಲ್ಲ ಗಿಡಮರಗಳು ಹಾಗೂ ಕರಕಿ ಹುಲ್ಲು(ಲಾನ್) ಸಂಪೂರ್ಣ ಒಣಗಿ ಹೋಗಲು ಕಾರಣವಾಗಿದೆ. ಇದೀಗ ಅಲ್ಲಿ ಹೊಸ ಮೋಟರ್ ಕೂಡ್ರಿಸಲು ಪರವಾನಗಿಗೆ ಕಳುಹಿಸಲಾಗಿದ್ದು, ಅದು ಪಾಸಾಗಿ ಬಂದ ತಕ್ಷಣವೇ ಹೊಸ ಬೋರ್ಹಾಕಿಸಿ ಗಿಡಗಳಿಗೆ ನೀರು ಹಾಕಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಅಭಿವೃದ್ಧಿಗೊಳಿಸದಿದ್ದರೆ ಸತ್ಯಾಗ್ರಹದ ಎಚ್ಚರಿಕೆ
ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ ಇಂದು ಸಂರ್ಪೂಣ ಹಾಳಾಗಿದೆ. ಈ ಕುರಿತು ಅನೇಕ ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಪುರಸಭೆ ಆವರಣದಲ್ಲಿರುವ ಮಹಾತ್ಮಾಗಾಂಧೀಜಿ ಮೂರ್ತಿಯು ಸಂಪೂರ್ಣ ಹಾಳಾಗಿದ್ದರೂ ಅದನ್ನು ಬದಲಾವಣೆ ಮಾಡುತ್ತಿಲ್ಲ. ಇದಕ್ಕೆ ಜವಾಬ್ದಾರಿಯುತ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಉದ್ಯಾನವನ ಪುನರ್ ನಿರ್ಮಾಣ ಹಾಗೂ ನೂತನ ಗಾಂಧೀಜಿಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿ ಡಿ. 31 ರಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಕ್ರಾಂತಿಸೇನೆ, ಕನ್ನಡ ಜನಾಭಿವೃದ್ಧಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಹಾಗೂ ಪರಿಸರ ಪ್ರೇಮಿಗಳ ನೇತೃತ್ವದಲ್ಲಿ ಪುರಸಭೆ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ತಿಳಿಸಿದ್ದಾರೆ.
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

