ಗದಗ

ಒಣಗುತ್ತಿದೆ ಬೆಳೆ, ಕಮರುತ್ತಿದೆ ಕನಸು

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಡಿ. 25
ಭಾರತದ ಕೃಷಿಯೆಂದರೆ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ ಎಂಬ ಕೃಷಿ ಮತ್ತು ಆರ್ಥಿಕ ತಜ್ಞರ ಅಭಿಪ್ರಾಯ ಸತ್ಯ.
ಬಿತ್ತಿದ ಬೀಜಗಳು ಮೊಳಕೆಯೊಡೆದು ಮೇಲಕ್ಕೆದ್ದು ಕಣ್ಣು ಬಿಡುವ ಹೊತ್ತಿಗೆ ಹಿಂಗಾರು ಹಂಗಾಮಿನ ಮಳೆ ಮಾಯವಾಗಿ ತೇವಾಂಶದ ಕೊರತೆಯಿಂದ ಬಾಡುತ್ತಿರುವ ಬೆಳೆ ಕಂಡು ರೈತರು ದಂಗಾಗಿದ್ದಾರೆ.
ಲಕ್ಷ್ಮೇಶ್ವರ ಹೋಬಳಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತಿರುವ ಬಿಳಿ ಜೋಳ, ಹತ್ತಿ ಹಾಗೂ ಸೂರ್ಯಕಾಂತಿ ಬೆಳೆ ಬಿಸಿಲ ಬೇಗೆಗೆ ಕಮರಿ ಹೋಗುತ್ತಿರುವುದು ರೈತರಲ್ಲಿನ ಸಂಕಟಕ್ಕೆ ಕಾರಣವಾಗಿದೆ.
ನೂರಾರು ಆಸೆ, ಕನಸುಗಳನ್ನು ಹೊತ್ತು ತನ್ನ ಜೀವವನ್ನೇ ಒತ್ತೆ ಇಟ್ಟು ಭೂತಾಯಿ ಒಡಲಲ್ಲಿ ದುಡಿಯುವ ರೈತನ ಬದುಕು ಮೂರಾಬಟ್ಟೆಯಾಗುವಂತಹ ಸ್ಥಿತಿ ಆಗುತ್ತಿರುವುದು ನೋವಿನ ಸಂಗತಿ. ನಮ್ಮ ದೇಶದ ಶೇ. 70ರಷ್ಟು ಜನರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಲಕ್ಷ್ಮೇಶ್ವರ ಹೋಬಳಿಯಲ್ಲಿ ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಜೋಳವನ್ನು ಹಾಗೂ 3.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬೀಜ ಬಿತ್ತಲಾಗಿದೆ.
 ಆದರೆ, ಬಿತ್ತಿದ ಬೀಜಗಳು ಮೊಳಕೆಯೊಡೆದು ಚೋಟುದ್ದ ಆಗುವ ಹೊತ್ತಿಗೆ ಒಣಗಿ ಹೋಗಿ ರೈತನ ಎದೆಗೆ ಬರದ ಬಿಸಿ ತಾಗುತ್ತಿರುವುದು ದುರದೃಷ್ಟಕರ. ಅಲ್ಲದೇ ಕಡಲೆಗೆ ಮೆತ್ತಿಕೊಂಡಿರುವ ಕೀಟಗಳು, ಸೂರ್ಯಕಾಂತಿಗೆ ಅಂಟಿರುವ ಬೂದು ರೋಗ, ಕುಸುಬೆ ಬೆಳೆಗೆ ಕಾಡುತ್ತಿರುವ ರಸ ಹೀರುವ ಶೀರು ಹೇನುಗಳ ಕಾಟದಿಂದ ರೈತ ಬಸವಳಿದು ಹೋಗಿದ್ದಾನೆ.
ಲಕ್ಷ್ಮೇಶ್ವರ ಹೋಬಳಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬಿಳಿಜೋಳ, ಸೂರ್ಯಕಾಂತಿ, ಕಡಲೆ, ಕುಸುಬಿ, ಹಿಂಗಾರು ಜೈದರ ಹತ್ತಿ ಬೆಳೆಗಳು ಒಣಗಿ ಹೋಗುತ್ತಿವೆ. ಸರ್ಕಾರದ ಆದೇಶದಂತೆ ಈಗ ಜಿಲ್ಲೆಯ ಕೃಷಿ ಅಧಿಕಾರಿಗಳು ಸಮೀಕ್ಷಾ ಕಾರ್ಯ ಕೈಗೊಂಡಿದ್ದು, ಮಳೆಯ ಕೊರೆತೆಯಿಂದ ಹಾಳಾದ ಬೆಳೆಗಳ ಬಗ್ಗೆ ಸರ್ಕಾರ ಯಾವ ಕ್ರಮ ಅನುಸರಿಸುತ್ತದೆಯೋ ಅದರಂತೆ ನಾವು ನಡೆದುಕೊಳ್ಳುತ್ತೇವೆ.
 ಸೋಮು ಲಮಾಣಿ
ಕೃಷಿ ಸಹಾಯಕ ಅಧಿಕಾರಿ
ಸರ್ಕಾರ ರೈತರ ನೆರವಿಗೆ ಬರಲಿ
ಲಕ್ಷ್ಮೇಶ್ವರ ಹೋಬಳಿಯಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶವು ಕೆಂಪು ಮತ್ತು ಮಸಾರಿ ಭೂಮಿಯಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗದಿರುವುದರಿಂದ ಈ ಭಾಗದಲ್ಲಿ ಬರದ ಛಾಯೆ ಆವರಿಸಿದೆ. ಇಷ್ಟಾದರೂ ಶಿರಹಟ್ಟಿ ತಾಲೂಕನ್ನು ಬರ ಪೀಡಿತ ಪ್ರದೇಶದಿಂದ ಕೈಬಿಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಿಂಗಾರು ಹಂಗಾಮಿನಲ್ಲಿ ಮಳೆಯ ಕೊರೆತೆಯಿಂದ ಲಕ್ಷ್ಮೇಶ್ವರ ಹೋಬಳಿಯ ದೊಡ್ಡೂರು, ಸೂರಣಗಿ, ಅಕ್ಕಿಗುಂದ ಆದ್ರಳ್ಳಿ, ಕುಂದ್ರಳ್ಳಿ, ಬಟ್ಟೂರು, ಪು. ಬಡ್ನಿ, ಬೂದಿಹಾಳ, ಅಂಕಲಿ, ಕೋಗನೂರು, ಶಿಗ್ಲಿ, ರಾಮಗೇರಿ, ಗೋವನಾಳ, ಗೊಜನೂರ, ಬಾಲೆಹೊಸೂರ, ಕೊಂಚಿಗೇರಿ ಮೊದಲಾದ ಗ್ರಾಮಗಳ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಈ ರೈತರ ನೆರವಿಗೆ ಸರ್ಕಾರ ಬರಬೇಕು.
- ಶಿವಣ್ಣ ಗಾಣಿಗೇರ, ಯಲ್ಲಾಪುರದ ಮಹಾದೇವಗೌಡ ನರಸಮ್ಮನವರ, ದೊಡ್ಡೂರು ಗ್ರಾಮದ ರೈತರು



-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.