ಮುಶಿಗೇರಿ: ಶುಚಿತ್ವಕ್ಕಿಲ್ಲ ಬೆಲೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 25
ಗ್ರಾಮಗಳ ನೈರ್ಮಲ್ಯಕ್ಕೆ ಸರ್ಕಾರ ಕೋಟ್ಯಂತರ ಅನುದಾನ ವೆಚ್ಚ ಮಾಡುತ್ತಿದೆ. ಆದರೆ, ಅದು ಎಲ್ಲಿ ಬಳಕೆಯಾಗುತ್ತದೆಯೋ ತಿಳಿಯುತ್ತಿಲ್ಲ.
ಸರ್ಕಾರದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳದೇ ಹಿಂದುಳಿದ ಪ್ರದೇಶಗಳು ಹಿಂದೆಯೇ ಉಳಿಯುತ್ತಿವೆ.
ಅವುಗಳ ಅಭಿವೃದ್ಧಿ ಮರೀಚಿಕೆಯಾದಂತಾಗಿದೆ. ಇದಕ್ಕೆ ಮುಶಿಗೇರಿ ಗ್ರಾಮ ದುಸ್ಥಿತಿ ಚಿತ್ರಣವೇ ಸಾಕ್ಷಿ. ಗ್ರಾಮದ ಪ್ರಮುಖ ಹೃದಯ ಭಾಗವಾದ ಮಾರುಕಟ್ಟೆ ಬಯಲಿನ ಮಧ್ಯದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮನೆಯಿಂದ ಹರಿದು ಬರುವ ಗಲೀಜು ನೀರಿನಿಂದ ಎಲ್ಲವೂ ಕೊಳಚೆಮಯವಾಗಿದೆ.
ಇದರ ಮೇಲೆಯೆ ಜನರ ಸಂಚಾರ, ವಾಹನ ಸಂಚಾರ ನಡೆಯುತ್ತಿದೆ. ಗ್ರಾಮ ಸ್ವರಾಜ್ಯ ಕಲ್ಪನೆಯ ಕನಸು ಕನಸಾಗಿಯೇ ಉಳಿದಿದೆ. ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಕಾಲುದಾರಿಯೇ ಚರಂಡಿಯಾಗಿ ಮಾರ್ಪಟ್ಟಿವೆ.
ಓಣಿಯ ರಸ್ತೆ ಮೇಲೆ ಎಲ್ಲೆಂದರಲ್ಲಿ ಮನೆಯಿಂದ ಹರಿದು ಬರುವ ಕೊಳಚೆ ರಾರಾಜಿಸುತ್ತಿದೆ. ನೀರು ಹರಿಯುವ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ, ಮನೆಯ ಮುಂದೆಯೇ ಮಹಿಳೆಯರು ಬಟ್ಟೆ ತೊಳೆಯುವುದರಿಂದ ರಸ್ತೆ ಪಕ್ಕದಲ್ಲಿ ಅಶುಚಿತ್ವ ನಿರ್ಮಾಣವಾಗಿದೆ.
ಸ್ವಚ್ಛತೆಗೆ ಆದ್ಯತೆ ಇಲ್ಲ
ಸರ್ಕಾರ ಗ್ರಾಮಗಳ ಶುಚಿತ್ವ ಕಾಪಾಡಲು ಹಾಗೂ ಗ್ರಾಮಸ್ಥರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಗ್ರಾಮ ಪಂಚಾಯಿತಿ ಮೂಲಕ ಲಕ್ಷಾಂತರ ಹಣ ವೆಚ್ಚ ಮಾಡುತ್ತಿದೆ. ಆದರೆ ಅಂತಹ ಯೋಜನೆಗಳ ಫಲ ವಾಸ್ತವವಾಗಿ ಜನತೆಗೆ ತಲುಪುತ್ತಿಲ್ಲ ಎಂಬುದಕ್ಕೆ ಈ ಗ್ರಾಮದ ಚಿತ್ರಣವೇ ನಿದರ್ಶನ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ. ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಗಲೀಜು ನೀರು ರಸ್ತೆಗೆ ನುಗ್ಗಿ ದುರ್ನಾತ ಹರಡುತ್ತಿದೆ. ರಸ್ತೆಯಲ್ಲಿ ಹರಿಯುವ ಗಲೀಜು ನೀರಿನಿಂದ ಜನರು ನಿತ್ಯ ಮೂಗು ಮುಚ್ಚಿಕೊಂಡು ನಡೆದಾಡುವ ದುಸ್ಥಿತಿ ಎದುರಾಗಿದೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡದೇ ತೆಪ್ಪಗೆ ಕುಳಿತಿದ್ದಾರೆ ಎಂದು ಗ್ರಾಮದ ಜನತೆ ದೂರುತ್ತಾರೆ.
ರಸ್ತೆಗಳೆಲ್ಲ ಕೆಸರುಮಯ
ಗ್ರಾಮದ ಎಲ್ಲ ಓಣಿಯ ರಸ್ತೆಗಳೆಲ್ಲ ಕೆಸರುಮಯವಾಗಿವೆ. ಇದರಿಂದ ಸಂಚಾರಕ್ಕೂ ಸಂಚಕಾರವನ್ನುಂಟು ಮಾಡಿದೆ. ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ಕೆಸರು ತುಂಬಿದ ನೀರು ನಿಂತಿದ್ದರಿಂದ ಸೊಳ್ಳೆಗಳು ವ್ಯಾಪಕವಾಗಿ ಹರಡಿವೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದು. ಹೀಗಾಗಿ ಗ್ರಾಮ ಅವ್ಯವಸ್ಥೆಯ ಆಗರವಾಗಿದೆ.
ಬಹುತೇಕ ಕೃಷಿಕರು ವಾಸವಾಗಿರುವ ಈ ಗ್ರಾಮದ ಜನತೆಗೆ ಮೇಲಿಂದ ಮೇಲೆ ಅನಾರೋಗ್ಯದ ಭೀತಿಯೂ ಕಾಡಲಾರಂಭಿಸಿದೆ. ಮನೆಯ ಮುಂದೆ ನಿಲ್ಲುವ ಕಲ್ಮಷ ನೀರಿನಿಂದ ರೋಗಾಣುಗಳು ವ್ಯಾಪಾಕವಾಗಿ ಹರಡಿ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಈ ಗ್ರಾಮದ ಸ್ಛಚ್ಛತೆಗೆ ಮುಂದಾಗುತ್ತಾರೇಯೇ ಎನ್ನುವುದು ಜನರ ಪ್ರಶ್ನೆಯಾಗಿದೆ.
ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

