ನರಗುಂದ: ಬಿಸಿಲಿಗೆ ಬಾಡಿದ ಬೆಳೆ
ಕನ್ನಡಪ್ರಭ ವಾರ್ತೆ, ನರಗುಂದ, ಡಿ. 25
ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ, ರೈತರ ಹಾಗೂ ರೈತನ ಮಿತ್ರ ಎತ್ತುಗಳ ವರ್ಷದ ಆಹಾರದ ಬೆಳೆಯಾದ ಜೋಳದ ಬೆಳೆಯು ತೇವಾಂಶದ ಕೊರತೆಯಿಂದ ಒಣಗುತ್ತಿದ್ದು, ತಾಲೂಕಿನ ರೈತರಲ್ಲಿ ಬೇಸರವನ್ನುಂಟು ಮಾಡಿದೆ.
ಮಳೆರಾಯನ ಚೆಲ್ಲಾಟದಿಂದ, ಸದ್ಯ ತೆನೆ ಹಾಕುವ ಹಾಗೂ ಕಾಳು ಕಟ್ಟುವ ಹಂತದಲ್ಲಿರುವ ಜೋಳಕ್ಕೆ ನೀರಿನ ಸಮಸ್ಯೆ ಎದುರಾಗಿದೆ.
ಒಂದು ವಾರದಿಂದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಹಗಲಿನ ವೇಳೆಯಲ್ಲಿ ಅತಿಯಾದ ಬಿಸಿಲು, ರಾತ್ರಿಯ ವೇಳೆಯಲ್ಲಿ ಅತಿಯಾದ ಚಳಿ ಇರುತ್ತದೆ. ಸಮರ್ಪಕ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಭೂಮಿಯು ಬೇಗನೇ ತೇವಾಂಶ ಕಳೆದುಕೊಂಡಿದ್ದು, ಬಿಸಿಲಿನ ತಾಪದಿಂದ ಭೂಮಿಯಲ್ಲಿ ದೊಡ್ಡ ದೊಡ್ಡ ಬಿರುಕು ಬಿಟ್ಟಿವೆ. ಜೋಳದ ಬೆಳೆಯ ಬೇರುಗಳು ಅಷ್ಟೊಂದು ಆಳವಾಗಿರದೇ ಭೂಮಿಯ ಮೇಲೆಯಲ್ಲಿ ಇರುವುದರಿಂದ ಭೂಮಿ ಬಿರುಕು ಬಿಟ್ಟು ಬೆಳೆ ಬೀಳುವ ಹಂತಕ್ಕೂ ಬಂದಿದೆ.
ಶೇ. 50 ರಷ್ಟು ಬಿತ್ತನೆ: ತಾಲೂಕು ಕೃಷಿ ಇಲಾಖೆಯ ಮಾಹಿತಿ ಆಧಾರದಲ್ಲಿ ತಾಲೂಕಿನ ಒಟ್ಟು ಹಿಡುವಳಿ ಭೂಮಿಯ ಶೇ. 50ರಷ್ಟು ಭೂಮಿಯಲ್ಲಿ ಈ ಬಾರಿ ಜೋಳ ಬಿತ್ತನೆಯಾಗಿದೆ. ನರಗುಂದ ಬಯಲು ಸೀಮೆಯ ನಾಡಾಗಿರುವುದರಿಂದ ಇಲ್ಲಿ ಮಳೆಯ ಪ್ರಮಾಣವೇ ಕಡಿಮೆ. ಇದರೊಟ್ಟಿಗೆ ಅತಿಯಾದ ಬಿಸಿಲಿನಿಂದ ಬೆಳೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇನ್ನು ನರಗುಂದ ತಾಲೂಕಿನ ಕೆಲವು ರೈತರು ಮಾತ್ರ ಜೋಳಕ್ಕೂ ಕಾಲುವೆಯ ನೀರನ್ನೇ ಹಾಯಿಸಬೇಕು. ಇಲ್ಲವಾದಲ್ಲಿ ರೈತರೊಟ್ಟಿಗೆ ವರ್ಷಪೂರ್ತಿ ಜಾನುವಾರುಗಳಿಗೆ ಬೇಕಾಗುವ ಮೇವೂ ಲಭ್ಯವಾಗುವುದಿಲ್ಲ. ಈ ಎಲ್ಲ ಅಂಶಗಳೇ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜೋಳದ ಬೀಜ ಬಿತ್ತನೆ ಮಾಡಿದ ಬಳಿಕ ಉತ್ತಮ ಹವಾಗುಣದ ಮೇಲೆಯೇ ಈ ಬೆಳೆ ಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ 2 ರಿಂದ 3 ಅಡಿ ಬೆಳೆದು ಒಣಗಿ ಹೋಗುತ್ತಿದ್ದು, ನಮಗೆಲ್ಲಾ ಆತಂಕ ತಂದಿದೆ. ನಮಗೂ ಹಾಗೂ ಜಾನುವಾರುಗಳಿಗೂ ಆಹಾರವಾಗುವ ಜೋಳದ ಬೆಳೆಯೇ ರೈತರ ಮೂಲ ಆಧಾರವಾಗಿದೆ.
- ಶರಣಪ್ಪ ಅಂಗಡಿ, ಎಲ್.ಎಂ. ಲಿಂಗದಾಳ
ನರಗುಂದ ತಾಲೂಕಿನ ವಿವಿಧ ಗ್ರಾಮಗಳ ರೈತರು.
ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

