ಗದಗ

ಶೌಚಾಲಯವಿಲ್ಲದೆ ಮಕ್ಕಳ ಪರದಾಟ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 26
ತಾಲೂಕಿನ ಶಿರೋಳ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಶೌಚಾಲಯಗಳು ನಿರ್ಮಾಣವಾಗಿದ್ದರೂ ಅವುಗಳ ನಿರ್ವಹಣೆ ಇಲ್ಲದೇ ಕಳೆದೆರಡು ವರ್ಷದಿಂದ ವಿದ್ಯಾರ್ಥಿಗಳು ಬಹಿರ್ದೆಸೆಗೆ ಬಯಲು ಜಾಗವನ್ನೇ ಆಶ್ರಯಿಸುವಂತಾಗಿದೆ.
ಈ ಬಗ್ಗೆ ಗಮನ ನೀಡಬೇಕಾದ, ಹಾಸ್ಟೇಲ್ ವಾರ್ಡ್‌ನ್ ಹಾಗೂ ತಾಲೂಕು ಅಧಿಕಾರಿಗಳು ನಿದ್ರೆಗೆ ಜಾರಿದ್ದು, ವಿದ್ಯಾರ್ಥಿಗಳ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.
ಹಾಸ್ಟೇಲ್‌ನಲ್ಲಿರುವ ಶೌಚಾಲಯಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸರಿಯಾಗಿ ಇರದೇ ಇರುವುದರಿಂದ ವಿದ್ಯಾರ್ಥಿಗಳು ಬೆಳಗ್ಗೆ ಶಾಲೆಗೆ ಬೇಗ ಹೋಗಲು ಅಥವಾ ವಿದ್ಯಾಭ್ಯಾಸ ಮಾಡಲು ಬೇಗ ಏಳುತ್ತಾರೆ. ಆದರೆ ಕತ್ತಲಲ್ಲಿಯೇ ಬಯಲು ಬಹಿರ್ದೆಸೆಗೆ ದೂರ ಪ್ರದೇಶಗಳಿಗೆ  ಹೋಗಬೇಕಾದ ಸ್ಥಿತಿ ಇದೆ. ಅನಿವಾರ್ಯವಾಗಿ ವಿದ್ಯಾರ್ಥಿಗಳು ಬ್ಯಾಟರಿ ತೆಗೆದುಕೊಂಡು ಹೋಗುತ್ತಾರೆ.
ವಿದ್ಯಾರ್ಥಿಗಳು ಈ ರೀತಿ ಪ್ರಯಾಸ ಪಡುತ್ತಿದ್ದರೂ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಅವರ ಓದಿಗೆ ಅನುಕೂಲ ಮಾಡಿಕೊಡಲು ಕ್ರಮಕೈಗೊಳ್ಳದಿರುವುದು ಮಾತ್ರ ದುರದೃಷ್ಟಕರ.
ಮಕ್ಕಳಿಗೆ ಭಯ: ಮಕ್ಕಳಿಗೆ ಊಟದ ವಿಷಯದಲ್ಲಿ ಏನಾದರೂ ಸಮಸ್ಯೆಯಾಗಿ ಅಥವಾ ಆರೋಗ್ಯದಲ್ಲಿ ಏರು ಪೇರಾದರೆ ಬಹಿರ್ದೆಸೆಗೆ ಹೋಗಲು ಇನ್ನಿಲ್ಲದ ಸಂಕಟ ಪಡುತ್ತಿದ್ದಾರೆ. ಅದರಲ್ಲಿಯೂ ತಡರಾತ್ರಿ ಏನಾದರೂ ಸಮಸ್ಯೆಗಳಾದಲ್ಲಿ ವಿದ್ಯಾರ್ಥಿಗಳು ಕತ್ತಲಲ್ಲಿಯೇ ಹೊರಗೆ ಹೋಗಬೇಕು. ಇನ್ನು ಹಾಸ್ಟೇಲ್‌ನಲ್ಲಿ ಮಕ್ಕಳಿಗೆ ಸರಿಯಾದ ವಿದ್ಯುತ್ ಸಂಪರ್ಕ ನೀಡದೇ ಇರುವುದರಿಂದಲೂ ಮಕ್ಕಳು ರಾತ್ರಿ ವೇಳೆಯಲ್ಲಿ ಭಯಪಡುತ್ತಿದ್ದಾರೆ. ಈ ಬಗ್ಗೆ ಅದ್ಯಾರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳ ಆರೋಪಿಸುತ್ತಾರೆ.
2 ವರ್ಷದಿಂದ ನಿರ್ಲಕ್ಷ್ಯ: ಈ ಶೌಚಾಲಯಗಳು ಇದ್ದೂ ಇಲ್ಲದಂತಾಗಿದ್ದು, 2 ವರ್ಷದಿಂದ ಸ್ಥಗಿತಗೊಂಡಿದ್ದರೂ ಅಧಿಕಾರಿಗಳು ಅದೇಕೇ ಇವುಗಳ ದುರಸ್ತಿಗೆ ಮುಂದಾಗಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಈ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ ಎನ್ನುವುದು ಈ ಹಾಸ್ಟೇಲ್‌ನಲ್ಲಿನ ಅವ್ಯವಸ್ಥೆ ಕಂಡರೆ ಅರಿವಾಗುತ್ತದೆ. ಸರ್ಕಾರ ಕೋಟ್ಯಂತರ ಅನುದಾನ ಮಕ್ಕಳ ಶಿಕ್ಷಣಕ್ಕಾಗಿ, ಬಡ ಮಕ್ಕಳ ಅಭಿವೃದ್ಧಿಗಾಗಿ ಹಣ ವ್ಯಯಿಸುತ್ತಿದ್ದರೂ ಅದು ಸಮರ್ಪಕವಾಗಿ ಬಳಕೆಯಾಗದಿರುವುದು ಮಾತ್ರ ದುರಂತವೇ ಸರಿ.
ಪ್ರತಿ ದಿನ ವಿದ್ಯಾರ್ಥಿಗಳಿಗೆ ಬಯಲು ಬಹಿರ್ದೆಸೆಗೆ ಹೋಗಲು ಕಷ್ಟವಾಗುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗನೇ ವಿದ್ಯಾರ್ಥಿಗಳಿಗೆ ಶೌಚಾಲಯಗಳನ್ನು ಸರಿಪಡಿಸಿ ಬಳಕೆಗೆ ನೀಡಲು ಮುಂದಾಗಬೇಕು.
- ಎಂ.ಬಿ. ಶಿಳೋದ, ವಿಶ್ವನಾಥ, ಗ್ರಾಮಸ್ಥರು
ಈ ಹಿಂದೆ ನಿರ್ಮಿಸಿದ ಶೌಚಾಲಯಗಳು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿವೆ. ಹೊಸ ಶೌಚಾಲಯ ನಿರ್ಮಿಸಲು ರು.  8-10 ಲಕ್ಷ ನೀಡಬೇಕೆಂಬ ಪ್ರಸ್ತಾವನೆಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ.  
- ರವಿ ಗುಂಜಿಕರ, ಹಾಸ್ಟೇಲ್, ಅಧಿಕಾರಿ


-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.