ಬಡವರು ಸರ್ಕಾರದ ಯೋಜನೆಗಳಿಂದ ವಂಚಿತ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 26
ಪ್ರತಿ ವರ್ಷ ಸರ್ಕಾರದಿಂದ ಮಂಜೂರಾಗುವ ವಿಶೇಷ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಚುನಾಯಿತ ಜನ ಪ್ರತಿನಿಧಿಗಳ ಗಮನಕ್ಕೆ ತರದೇ, ಅಧಿಕಾರಿಗಳ ಮಟ್ಟದಲ್ಲಿಯೇ ಫಲಾನುಭವಿಗಳ ಆಯ್ಕೆ ನಡೆದು ಪದೇ ಪದೇ ಒಬ್ಬರೇ ಫಲಾನುಭವಿಗಳು ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಬಡ ಮತ್ತು ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದು ತಾಪಂ ಸದಸ್ಯ ತಿಮ್ಮರಡ್ಡಿ ಅಳವಂಡಿ, ಶಿವನಗೌಡ ಕಂಠಿಗೌಡ್ರ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.
ಗುರುವಾರ ಪಟ್ಟಣದ ತಾಪಂನ ಸಾಮರ್ಥ್ಯ ಸೌಧದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಹನಿ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ರೈತರಿಗೆ ವಿತರಿಸಲಾದ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿದ್ದು, ಸರಿಯಾದ ಸಮಯಕ್ಕೆ ವಿತರಣೆ ಮಾಡದೇ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡಿ ಏಜನ್ಸಿದಾರರು ಕಳಪೆ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಏಕಪಕ್ಷೀಯವಾಗಿ ವರ್ತಿಸದೇ ಸಮಗ್ರ ಪರಿಶೀಲನೆ ಮಾಡುವಂತೆ ತಾಕೀತು ಮಾಡಿದರು.
ಪ್ರತಿ ವರ್ಷವೂ ಒಬ್ಬರೇ ಫಲಾನುಭವಿ ಆಯ್ಕೆಯಾಗುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಇದುವರೆಗೆ ಆಯ್ಕೆಯಾದ ಫಲಾನುಭವಿಗಳ ಯಾದಿ ನೀಡುವಂತೆ ಆಗ್ರಹಿಸಿದರಲ್ಲದೇ ಇಲಾಖೆಯಲ್ಲಿ ಇದುವರೆಗೆ ಬಂದಿರುವ ಯೋಜನೆಗಳ ಸಮಗ್ರ ಮಾಹಿತಿ, ಬಿಡುಗಡೆಯಾದ ಅನುದಾನ ಮತ್ತು ಸಹಾಯಧನದ ಬಗ್ಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ರಾಜ್ಯವಲಯ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ ಅರ್ಹ ಫಲಾನುಭವಿಗಳಲ್ಲದವರಿಗೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ತಳ್ಳು ಗಾಡಿಗಳನ್ನು ವಿತರಿಸಿದ್ದು, ಸಮರ್ಪಕ ಬಳಕೆಯಾಗದೇ ನಿಜವಾದ ಫಲಾನುಭವಿಗೂ ಸಿಗದೇ ಸರ್ಕಾರದ ಯೋಜನೆ ಹಳ್ಳ ಹಿಡಿದಿದ್ದು, ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಕುಂಬಾರ ಯಾವುದನ್ನೂ ಪರಿಶೀಲನೆ ಮಾಡದೇ ಬರೀ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು. ತಾಲೂಕಿನಲ್ಲಿ ಒಟ್ಟು 8 ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ವಸತಿ ನಿಲಯ (ಹಾಸ್ಟೆಲ್) ಇದ್ದು, ಇವುಗಳಲ್ಲಿ 16 ದಿನಗೂಲಿ ಅಡುಗೆ ಕೆಲಸಗಾರರಿದ್ದು, ಸರ್ಕಾರಿ ಸುತ್ತೋಲೆ ಪ್ರಕಾರ ಪ್ರತಿ ತಿಂಗಳು ಇವರಿಗೆ ಚೆಕ್ ಮೂಖಾಂತರ ರು. 5 ಸಾವಿರ ವೇತನ ನೀಡಬೇಕೆಂದಿದ್ದು, ಇಲಾಖೆ ಅಧಿಕಾರಿ ಬರೀ ರು. 3 ಸಾವಿರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರತಿಯೊಬ್ಬ ಅಡುಗೆದಾರರ ಉಳಿದ ರು. 2 ಸಾವಿರ ಯಾರಿಗೆ ಕೊಡುತ್ತೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಲಾಯಿತು.
ಅಧಿಕಾರಿ ತಬ್ಬಿಬ್ಬು: ಸದಸ್ಯ ತಿಮ್ಮರಡ್ಡಿ ಅಳವಂಡಿ ಅವರ ಪ್ರಶ್ನೆಗೆ ಅಧಿಕಾರಿ ಕೆಲ ಸಮಯ ತಬ್ಬಿಬ್ಬಾದರು. ಉತ್ತರಿಸಲು ತಡವರಿಸಿ ನಂತರ ಅಡುಗೆದಾರರಿಗೆ ಇಂತಿಷ್ಟೇ ವೇತನ ನೀಡಬೇಕೆಂದು ಸರ್ಕಾರಿ ಸುತ್ತೋಲೆ ಬಂದಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮೌಖಿಕವಾಗಿ ಚರ್ಚೆ ಮಾಡಿದ್ದು, ಅಲ್ಲಿ ನಿಗದಿಪಡಿಸಿದ ವೇತನ ನೀಡುತ್ತಿರುವುದಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಂತೆ ಸದಸ್ಯರು ಅಸಮಾಧಾನಗೊಂಡು ಈ ರೀತಿಯ ಉತ್ತರ ಸಮಂಜಸವಲ್ಲ. ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ಎಚ್ಚರಿಸಿದರು.
ಭೂ ಮಾಪನಾ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ರೈತರ ಪೋಡಿ ಪ್ರಕರಣಗಳು ಬಾಕಿ ಇವೆ. ಅನೇಕ ಬಾರಿ ಹಣ ತುಂಬಿ ಅರ್ಜಿ ನೀಡಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಬರೀ ಅರ್ಜಿ ಕಳೆದಿದೆ. ಮತ್ತೊಮ್ಮೆ ಅರ್ಜಿ ನೀಡಿ ಎಂದು ರೈತರನ್ನು ಸತಾಯಿಸುತ್ತಿದ್ದಾರೆ. ಈ ಇಲಾಖೆಯಲ್ಲಿ ಏಜೆಂಟರ್ (ದಲ್ಲಾಳಿ)ಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಇವರನ್ನು ಮುಂದು ಬಿಟ್ಟು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸದಸ್ಯ ಶಿವನಗೌಡ ಕಂಠಿಗೌಡ್ರ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ವಿವಿಧ ಇಲಾಖೆಗಳ ಬಗ್ಗೆ ಚರ್ಚೆ ನಡೆಯಿತು. ತಾಪಂ ಅಧ್ಯಕ್ಷೆ ಸುನಂದ ಬಿದರಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾರದ ಕವಲೂರ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ, ಸದಸ್ಯ ಚನ್ನಪ್ಪ ಜಗಲಿ, ಗಂಗವ್ವ ಲಮಾಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಮೊದಲು ಈಚೆಗೆ ನಿಧನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಶೋಕಾಚರಣೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

