ಗದಗ

ಬಸ್ ತಡೆದು ಮಾರನಬಸರಿ ಗ್ರಾಮಸ್ಥರ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರೋಣ, ಡಿ. 26
ಸರಿಯಾದ ಸಮಯಕ್ಕೆ ಸಾರಿಗೆ ಸಂಸ್ಥೆ ಬಸ್‌ಗಳು ಬರದೇ ಇರುವುದರಿಂದ ಬೇಸತ್ತ ತಾಲೂಕಿನ ಮಾರನಬಸರಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಾರಿಗೆ ಅವ್ಯವಸ್ಥೆ ಖಂಡಿಸಿ ಗುರುವಾರ ಗ್ರಾಮಕ್ಕಾಗಮಿಸಿದ ಬಸ್ ತಡೆದು ಪ್ರತಿಭಟಿಸಿದರು.
ಕಳೆದ 3-4 ತಿಂಗಳಿನಿಂದ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ವೇಳೆಗೆ ತಕ್ಕಂತೆ ಹೋಗಲಾಗುತ್ತಿಲ್ಲ. ಅಲ್ಲದೇ ಗ್ರಾಮದ ಜನತೆ ಬೇರೆಡೆ ಪ್ರಯಾಣಿಸಬೇಕೆಂದರೆ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾರಿಗೆ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಸಾರಿಗೆ ಅಧಿಕಾರಿಗಳ ವರ್ತನೆ ತೀವ್ರ ಬೇಸರ ತಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಕ್ಕೆ ರೋಣ ಸಾರಿಗೆ ಘಟಕದಿಂದ ಬಸ್ ಸಂಚಾರ ವ್ಯವಸ್ಥೆಯಿದ್ದು, ಗ್ರಾಮಕ್ಕೆ ಆಗಮಿಸುವ ಪ್ರತಿ ವಾಹನಗಳು 3-4 ತಿಂಗಳುಗಳಿಂದ ಸರಿಯಾದ ಸಮಯಕ್ಕೆ ಬಾರದೆ ಘಂಟೆಗಂಟಲೇ ತಡವಾಗಿ ಆಗಮಿಸುತ್ತಿವೆ. ನಿತ್ಯ ಪ್ರಯಾಣ ಮಾಡುವ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ರೋಣ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಅನೇಕ ಬಾರಿ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರೂ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುತ್ತಿಲ್ಲ. ಅವ್ಯವಸ್ಥೆ ಸರಿಪಡಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು.
ಬಾರದ ಅಧಿಕಾರಿ
ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸ್ಥಳಕ್ಕೆ ರೋಣ ಘಟಕ ವ್ಯವಸ್ಥಾಪಕರು ಬರಬೇಕು. ಇಲ್ಲಿನ ಅವ್ಯವಸ್ಥೆಯನ್ನು ಖುದ್ದಾಗಿ ಅವರೇ ತಿಳಿದು ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಕಾರ್ಯ ಕೈಗೊಳ್ಳಬೇಕು ಎಂದು ಪಟ್ಟುಹಿಡಿದು ಕುಳಿತ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಾರದಿದ್ದಾಗ ಕೆರಳಿದ ಪ್ರತಿಭಾಟನಾಕಾರರು ಸಾರಿಗೆ ಅಧಿಕಾರಿಗಳ ವರ್ತನೆ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರಿಂದ ಮನವೊಲಿಕೆ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಮನಗಂಡ ನರೇಗಲ್ಲ ಪೊಲೀಸರು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ, ಖುದ್ದಾಗಿ ನಾವೇ ರೋಣ ಸಾರಿಗೆ ಘಟಕಕ್ಕೆ ಭೇಟಿ ನೀಡಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಯತ್ನಿಸುತ್ತೇವೆ ಎಂದು ಮನವೊಲಿಸಿದ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಜನತೆ ಮತ್ತು ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗ್ರಾಪಂ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.