ಗದಗ

ನುಗ್ಗೆ, ಕರಿಬೇವೇ ಪದವೀಧರನಿಗೆ ಬೆಲ್ಲ

Published On :

ಕನ್ನಡಪ್ರಭ ವಾರ್ತೆ, ನರೇಗಲ್ಲ, ಡಿ. 29
ಕಲಿತವರು ಸರ್ಕಾರಿ ಇಲ್ಲವೇ ಉತ್ತಮ ಕಂಪನಿಯಲ್ಲಿ ನೌಕರಿ ಸಿಕ್ಕರೆ ಸಾಕಪ್ಪಾ ಹಾಯಾಗಿರಬಹುದೆಂಬ ಕಾಲ ಇದು. ಹೀಗಿರುವಾಗ ಉತ್ತಮ ಶಿಕ್ಷಣ ಹೊಂದಿದ್ದರೂ ನೌಕರಿ ಬೇಡಪ್ಪಾ ರೈತಾಪಿ ಕೆಲಸದಲ್ಲೇ ಸುಖವಿದೆ. ಇಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವ ಯುವರೈತ ಇಲ್ಲಿಗೆ ಸಮೀಪದ ಹೊಸಳ್ಳಿಯಲ್ಲಿದ್ದಾನೆ.
ಗ್ರಾಮೀಣ ಪ್ರದೇಶದ ವಿಶ್ವನಾಥ ಎನ್ನುವ ಈತ ಡಿಪ್ಲೋಮಾ ಪದವೀಧರನಾಗಿದ್ದರೂ ನೌಕರಿ ಬೇಡ ಕೃಷಿಯಲ್ಲೇ ಏನೆಲ್ಲಾ ಇದೆ ಎಂಬುದನ್ನು ಕೇವಲ ನಾಲ್ಕೇ ವರ್ಷದಲ್ಲಿ ಸಾಧಿಸಿ ತೋರಿಸಿದ್ದಾನೆ. ಮಳೆಯಾಶ್ರಿತ ಬರಡು ಭೂಮಿಯಲ್ಲಿ ಏನು ಬೆಳೆಯಲು ಸಾಧ್ಯವಿದೆ ಎಂದು ಕೈಕಟ್ಟಿಕೊಂಡು ಕುಳಿತುಕೊಂಡಿದ್ದ ರೈತರ ಮಧ್ಯ ವಿಶ್ವನಾಥಸಾಧನೆಯ ಮೈಲುಗಲ್ಲಾಗಿದ್ದಾನೆ.
26 ವರ್ಷದ ವಿಶ್ವನಾಥ ರಡ್ಡೇರ ಶಾಲಾ ಸಮಯದಲ್ಲೇ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ. ಯುವಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕೃಷಿ ಅಂಕಣಗಳನ್ನು, ಲೇಖನಗಳನ್ನು ಓದುತ್ತಲೇ ಕೃಷಿಯಡೆಗೆ ಹೆಚ್ಚು ಆಕರ್ಷಿತನಾಗಿ ಅವಶ್ಯಕ ಮಾಹಿತಿಗಳನ್ನು ಅನುಭವಿಕರಿಂದ ಕೇಳಿ ತಿಳಿದುಕೊಂಡ. ಡಿಪ್ಲೋಮಾ ಓದಿ, ದೊರಕಿದ ಸರ್ಕಾರಿ ನೌಕರಿ, ಉತ್ತಮ ಸಂಬಳ ತೊರೆದು ಕೃಷಿ ಕಾರ್ಯದಲ್ಲಿ ತೊಡಗಿದ್ದಾನೆ. 7 ಎಕರೆ ಜಮೀನಿನಲ್ಲಿ ವರ್ಷದಲ್ಲಿ ಸುಮಾರು ರು. 13 ಲಕ್ಷಕ್ಕೂ ಹೆಚ್ಚಿನ ಆದಾಯ ತಂದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾನೆ. ಮಿಶ್ರ ಬೇಸಾಯ ಹಾಗೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಮಾದರಿಯಾಗಿದ್ದಾನೆ.
ಕೃಷಿಯಲ್ಲಿ ವಿವಿಧ ತರಹ: ನೀರು ಪೂರೈಕೆಗೆ ಅನುಗುಣವಾಗಿ ಹನಿ ನೀರಾವರಿ ಮೂಲಕ ನುಗ್ಗೆ, ಕರೀಬೇವು, ಮಾವು, ತೆಂಗು, ಪಪ್ಪಾಯಿ, ಕಿರುನೆಲ್ಲಿ, ಬೆಟ್ಟದನೆಲ್ಲಿ, ಸೀತಾಫಲ, ಪೇರಲ, ತಾಳೆ, ಎಣ್ಣೆತಾಳೆ, ಹುಣಸೆ, ನಿಂಬೆ, ಹಾಗೂ ತರಕಾರಿ ಬೆಳೆಗಳಾದ ಬದನೆ, ಮೆಣಸಿನಕಾಯಿ, ಈರುಳ್ಳಿ, ಸೌತೆಕಾಯಿ ಶಿಸ್ತುಬದ್ದವಾಗಿ ಬೆಳೆಯುತ್ತಿದ್ದಾನೆ.
ನೌಕರಿಗೆ ವಿದಾಯ: 2008ರಲ್ಲಿ ಡಿಪ್ಲೋಮಾ ಪದವಿ ಪಡೆದ ವಿಶ್ವನಾಥನ ತಂದೆಯ ಆಸೆ ಮಗನನ್ನು ಎಂಜಿನಿಯರಿಂಗ್ ಓದಿಸಬೇಕು ಎನ್ನುವುದಾಗಿತ್ತು. ಇದಕ್ಕೊಪ್ಪದ ವಿಶ್ವನಾಥ, ಕೆಪಿಟಿಸಿಎಲ್‌ನಲ್ಲಿ 8 ತಿಂಗಳ ಗುತ್ತಿಗೆ ಆಧಾರದ ಮೇರೆಗೆ ಮಾಡಿದ ನೌಕರಿಗೆ ಗುಡ್‌ಬೈ ಹೇಳಿ ಕೃಷಿ ಕಾಯಕದಲ್ಲಿ ತೊಡಗಿದ್ದಾನೆ. ಕಳೆದ ವರ್ಷದ ಬರಗಾಲದ ಮಧ್ಯದಲ್ಲೂ 10 ಎಕರೆ ನೀರಾವರಿ ಭೂಮಿಯಲ್ಲಿ, 7 ಎಕರೆ 20 ಗುಂಟೆಯಲ್ಲಿ 51 ಟನ್ ನುಗ್ಗೆ ಫಸಲು, ಅದರಿಂದ ರು. 10.90 ಲಕ್ಷ ಆದಾಯ, 1.20 ಗುಂಟೆಯಲ್ಲಿ 24 ಟನ್ ಕರಿಬೇವು ಬೆಳೆದು ರು. 2.50 ಲಕ್ಷ ಆದಾಯ ತೆಗೆದಿದ್ದಾನೆ.
ಈ ವರ್ಷ ಕೃಷಿ ಭೂಮಿ ಹೆಚ್ಚಿಸಲಾಗಿದ್ದು, ವಿದ್ಯುತ್ ಅಭಾವ ಹಾಗೂ ಬೆಲೆ ಕುಸಿತದಿಂದಾಗಿ ನುಗ್ಗೆ ಫಸಲಿನಿಂದ ರು. 8 ಲಕ್ಷ ಹಾಗೂ ಕರಿಬೇವಿನಿಂದ ರು. 2.20 ಲಕ್ಷ, 8 ಎಕರೆ ಒಣ ಭೂಮಿಯಲ್ಲಿ ಈರುಳ್ಳಿ ಬೆಳೆಯಿಂದ ರು. 15 ಲಕ್ಷ ಆದಾಯ ಪಡೆದಿದ್ದಾನೆ. ಇನ್ನುಳಿದವುಗಳಿಂದ ಒಟ್ಟಾರೆ ರು. 35 ಲಕ್ಷದವರೆಗೂ ಆದಾಯ ತೆಗೆಯುವ ವಿಶ್ವಾಸ ಹೊಂದಿದ್ದಾನೆ. ಇದರಲ್ಲಿ ಈಗಾಗಲೇ ಈರುಳ್ಳಿ, ನುಗ್ಗೆ, ಕರಿಬೇವಿನಿಂದ ಫಸಲು ಕೈಗೆ ದೊರೆತಿದ್ದು, ಉಳಿದ ಫಸಲಿಗಾಗಿ ಕಾಯುತ್ತಿದ್ದಾನೆ.
ಸರ್ಕಾರ ಇಂತಹ ಅಪ್ರತಿಮ ಯುವ ರೈತರನ್ನು ಗುರುತಿಸಿ ಹೆಚ್ಚಿನ ಅಧ್ಯಯನಕ್ಕೆ ದೇಶ, ವಿದೇಶಗಳಿಗೆ ಕಳುಹಿಸಿ ಉತ್ತೇಜನ ನೀಡಬೇಕು. ಕೃಷಿ ಇಲಾಖೆ ಕೂಡ ಇಂಥವರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು
- ಶಿವು ಜುಮ್ಮನಗೌಡ, ಹೊಸಳ್ಳಿಯ ಗ್ರಾಮಸ್ಥ
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಸಮರ್ಪಕ ಕೃಷಿ ಕೈಗೊಂಡರೆ ಹೆಚ್ಚೆಚ್ಚು ಸಂಪಾದಿಸಲು ಸಾಧ್ಯವಿದೆ. ನೂರಾರು ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬಹುದು. ಇದರಿಂದ ನಾನು ಬದುಕುತ್ತೇನೆ, ನನ್ನೊಡನೆ ಇತರರು ಜೀವನ ಸಾಗಿಸಲು ಕೃಷಿ ಸಹಕಾರಿ.
- ವಿಶ್ವನಾಥ ರಡ್ಡೇರ (ಯುವ ರೈತ)

-ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.