ಗದಗ

ಬದುಕಿಗೆ ಮಾನವೀಯತೆ ತಳಹದಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 30
ಸಮಾಜದಲ್ಲಿ ಹೆಣ್ಣು, ಗಂಡು ಎಂಬ ಭೇದ ತೊರೆದು, ಮಾನವೀಯತೆ ತಳಹದಿಯ ಮೇಲೆ ಬದುಕು ಸಾಗಿಸಿದಾಗ ಮಾತ್ರ ಆಧಿಕಾಲದಿಂದಲೂ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯದಂತಹ ಅನಾಗರಿಕ ಕೃತ್ಯ ತೊಲಗಲು ಸಾಧ್ಯ ಎಂದು ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಪಾಟೀಲ ಹೇಳಿದರು.
ಅವರು ಭಾನುವಾರ ಸಂಜೆ ಸ್ಥಳೀಯ ಸೇವಾಲಾಲ ಸಮುದಾಯ ಭವನದಲ್ಲಿ ರೋಣ ತಾಲೂಕು ದಲಿತ ಸಾಹಿತ್ಯ ಪರಿಷತ್ ಹಾಗೂ ಕ.ರಾ.ದ ಸಂಘರ್ಷ ಸಮಿತಿ ವತಿಯಿಂದ ಸಾಹಿತಿ ಪ್ರೊ. ಎಫ್.ಎಸ್. ಕರಿದುರಗನವರ ರಚಿಸಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಎಂಬ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮಾನವೀಯತೆಯ ತಳಹದಿಯ ಮೇಲೆ ಬದುಕಿದಾಗ ದೇಶದಲ್ಲಿನ ಅನಾಗರಿಕ ಕೃತ್ಯ ತೊಲಗಲು ಸಾಧ್ಯ. ಪುರುಷರು ಮಹಿಳಾತನವನ್ನು ಮೈಮನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಹೋದರತ್ವತೆಯ ಬೀಜ ಬಿತ್ತಿ,  ತಾಯ್ತನದ ಮಹತ್ವ ಅರಿಯಬೇಕಿದೆ. ಮಹಿಳೆಯರೂ ಪುರುಷರನ್ನು ಗೌರವಾನ್ವಿತವಾಗಿ ಕಂಡು ಜೀವನ ಸಾಗಸಿದಾಗ ಐಕ್ಯತಾ ಮತ್ತು ಸುಂದರ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು. ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಮಾತನಾಡಿ, ಪುಸ್ತಕ ರಚಿಸಿ ಅದರ ಆದಾಯದ ಮೇಲೆ ಬದುಕು ಸಾಗಿಸುವಂತ ವಾತಾವರಣ ಕನ್ನಡ ಸಾಹಿತ್ಯದಲ್ಲಿ ನಿರ್ಮಾಣವಾಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಎಲ್ಲದಕ್ಕಿಂತ ಮನುಷ್ಯ ನೀತಿಯೇ ಮುಖ್ಯ. ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸುವ ಮಹನೀಯರನ್ನು ರಾಜ್ಯ ಸರ್ಕಾರ ಸದಾ ಪ್ರೋತ್ಸಾಹಿಸುತ್ತಿದೆ. ಯುವಪಡೆ ಆಧುನಿಕ ಭರಾಟೆಯಲ್ಲಿ ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಿದ ಯುವ ಬರಹಗಾರರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈ ದಿಸೆಯಲ್ಲಿ ಯುವ ಸಾಹಿತಿ ಪ್ರೊ. ಎಫ್.ಎಸ್. ಕರಿದುರಗನವರ ತಮ್ಮ ಸಾಹಿತ್ಯ ಕೃಷಿ ಕಾಯಕದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ. ಇಂತಹ ಸಾಮಾಜಿಕ ಚಿಂತನೆಯ ಸಾಹಿತಿಗಳನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದರು.
ಕೆಎಲ್‌ಇ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಡಾ. ಲಿಂಗರಾಜ ಮುಳ್ಳಳ್ಳಿ, ಕೃತಿ ವಿಮರ್ಶೆ ಮಾಡಿದರು. ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಶ್ರೀಗಳು, ರೋಣದ ಗುಲಗಂಜಿ ಮಠದ ಗುರುಪಾದ ಶ್ರೀಗಳು, ಕಾಲಕಾಲೇಶ್ವರ ದೇಗುಲ ಅರ್ಚಕ ಮಲ್ಲಯ್ಯಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ರೋಣ ತಾಲೂಕು ಭೋವಿ (ವಡ್ಡರ) ಸಮಾಜದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೀಡಲಾಯಿತು. ಬಳಿಕ ಚೈತ್ರಾ ಸಾಂಸ್ಕೃತಿಕ ಕಲಾವಿದರಿಂದ ಹಾಗೂ ರಾಮಕೃಷ್ಣ ಪೂಜಾರಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಹಾವೇರಿ ಲೋಕಸಭಾ ಮತಕ್ಷೇತ್ರದ ಉಪಾಧ್ಯಕ್ಷ ಮಿಥುನ್ ಪಾಟೀಲ, ಡಾ. ಸಂತೋಷ ಯಾವಗಲ್, ಸವಿತಾ ಭಾಂಡಗೆ, ಮಹಾದೇವಿ ಗಂಜಿಗೌಡ್ರ, ಸುಮಂಗಲಾ ಇಟಗಿ, ರೇಣುಕಾ ಹೂಗಾರ, ರಂಜಾನಬಿ ಹುಬ್ಬಳ್ಳಿ, ವಿಜಯಲಕ್ಷ್ಮಿ ಕಲ್ಮಂಗಿಮಠ, ಲಕ್ಷ್ಮಿ ದಾನಿ, ಅನಸೂಯಾ ಕರಿದುರಗನವರ, ಮಲ್ಲಮ್ಮ ದಿವಾಣದ, ಎನ್.ಕೆ. ಬೇವಿನಮರದ, ವಿ.ಆರ್. ಗುಡಿಸಾಗರ, ಅಶೋಕ ಬಾಗಮಾರ, ಎಸ್.ಎಂ. ಅರಗಿದ್ದಿ, ವೀರಣ್ಣ ಸೊನ್ನದ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ವೀರಣ್ಣ ಶೆಟ್ಟರ, ಪ್ರಭು ಮೇಟಿ, ರವಿ ದಂಡಿನ, ಉಮೇಶ ರಾಠೋಡ, ಮಾರುತೆಪ್ಪ ಕಲ್ಲೋಡ್ಡರ, ಮುದಿಯಪ್ಪ ಮುಧೋಳ, ಷಣ್ಮುಕಪ್ಪ ನಿಡಗುಂದಿ ಮುಂತಾದವರು ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ಸ್ವಾಗತಿಸಿದರು. ಬಿ.ಕೆ. ಮಾದಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.