ಗದಗ

ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಿ

Published On :

ಗದಗ: ಮಹಿಳೆಯರು ಎದುರಿಸುತ್ತಿರುವ ಆತಂಕಕಾರಿ ಘಟನೆಗಳನ್ನು ದೂರಗೊಳಿಸಿ, ಆತ್ಮವಿಶ್ವಾಸ ತುಂಬುವ ಕ್ರಾಂತಿಕಾರಿಕ ಬದಲಾವಣೆಗೆ ಸರ್ಕಾರೇತರ ಸಂಘಟನೆಗಳು ಪ್ರಾಮುಖ್ಯ ನೀಡಬೇಕಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಎಚ್. ಆವಿನ್ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಾಂತ್ವಾನ, ಸ್ವಾಧಾರ ಕೇಂದ್ರಗಳ ಸಮಾಲೋಚಕರು, ಸಮಾಜ ಕಾರ್ಯಕರ್ತರು, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣಾ ಕಾಯ್ದೆ 2005 ನಿಯಮ 2006ರ ಕುರಿತು 2 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಕ್ಟೋಬರ್ 2005ರಲ್ಲಿ ಜಾರಿಗೊಳಿಸಲಾದ ಈ ಕಾಯ್ದೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ವರದಕ್ಷಣೆ ಕಿರುಕುಳ, ಮಾನಸಿಕ-ದೈಹಿಕ ಹಿಂಸೆ ತಡೆಗೆ ವಿಶೇಷವಾಗಿ ರೂಪಿಸಲಾಗಿದ್ದು, ಈ ಕಾಯ್ದೆ ಸದ್ದಿಲ್ಲದೇ ತನ್ನ ಕಾರ್ಯ ನಿರ್ವಹಿಸುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಇಂದು ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿದ್ದು, ಪ್ರತಿ ನಿಮಿಷಕ್ಕೆ ಓರ್ವ ಮಹಿಳೆ ದೌರ್ಜನ್ಯದಿಂದ ಸಾವಿಗೀಡಾಗುತ್ತಿದ್ದು, ಪ್ರತಿ 26 ನಿಮಿಷಗಳಿಗೆ ಒಂದು ಸ್ತ್ರೀಪೀಡನಾ ಪ್ರಕರಣ, 50 ನಿಮಿಷಕ್ಕೊಂದು ಕೀಟಲೆ ಪ್ರಕರಣ, 40 ನಿಮಿಷಕ್ಕೊಂದು ಮಹಿಳಾ ಅಪಹರಣ ವರದಿಯಾಗುತ್ತಿರುವುದು ವಿಷಾದಕರ ಸಂಗತಿ.
ಮಹಿಳೆಯರಿಗಾಗಿ ಕಾನೂನು: ಮಹಿಳೆಯರ ಹಕ್ಕು ಸಂರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಜಾರಿಯಲ್ಲಿದ್ದರೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕೆಲ ಪ್ರಕರಣಗಳು ದೂರುಗಳಾಗಿ ಪರಿವರ್ತನೆಯಾಗುತ್ತಿಲ್ಲ. ಸಮಾಜದಲ್ಲಿ ಜಾಗೃತಿಯ ಕೊರತೆ ಮತ್ತು ಮಹಿಳೆಯರಲ್ಲಿ ಆತ್ಮವಿಶ್ವಾಸದ ಕೊರತೆಯ ಕಾರಣ ಕಾಯ್ದೆ-ಕಾನೂನುಗಳ ಉದ್ದೇಶ ಅರ್ಥಪೂರ್ಣವಾಗಿ ಜಾರಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಘಟನೆಗಳು, ಸಮಾಜ ಸಂಘಟನೆಗಳು ಹಾಗೂ ಸರ್ಕಾರದ ವಿವಿಧ ಇಲಾಖೆ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ನೈಜ ಕಳಕಳಿ ವ್ಯಕ್ತಪಡಿಸುವುದು ಅವಶ್ಯಕವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕ ಸಂಘಟನೆಗಳು ಕಳಕಳಿಯ ಕಾರ್ಯಕ್ಕೆ ಪ್ರಾಮುಖ್ಯ ನೀಡಬೇಕಿದೆ. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಪ್ರತಿದಿನ ಮಹಿಳಾ ದೌರ್ಜನ್ಯಗಳು ಜರುಗುತ್ತಿವೆ. ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಸ್ಥಾಪಿಸಲಾದ (ಸಹಾಯವಾಣಿ) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೂರುಗಳು ದಾಖಲಾಗುತ್ತಿಲ್ಲ. ಮಹಿಳೆಯರಲ್ಲಿ ಕಾಯ್ದೆ ಕುರಿತು ಸಮಗ್ರ ಅರಿವು ಮೂಡದ ಕಾರಣ ದೂರುಗಳು ದಾಖಲಿಸುವಲ್ಲಿ ಮಹಿಳೆಯರು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜರುಗುತ್ತಿರುವ ಈ ತರಬೇತಿ ಕಾರ್ಯಾಗಾರದಲ್ಲಿ ಕಾನೂನಿನ ಕುರಿತು ಸಮಗ್ರ ಅರಿವು ಹೊಂದಿ, ಸಾಧಕ ಬಾಧಕಗಳ ಕುರಿತು ಪರಸ್ಪರ ಚರ್ಚೆಯ ಮೂಲಕ ಅರಿತುಕೊಂಡು ತರಬೇತಿ ಉದ್ದೇಶ ಸಾಕಾರಗೊಳಿಸಿ ಮಹಿಳಾ ಸಂಕುಲಕ್ಕೆ ಆತ್ಮಸ್ಥೈರ್ಯ ತುಂಬುವ ಕಾರ್ಯ ನಾಗರಿಕ ಸಮಾಜದಿಂದ ಜರುಗಬೇಕಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಜಿ.ಸಿ. ರೇಶ್ಮಿ ಇವರಿಂದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಕುರಿತು ವಿಶೇಷ ಉಪನ್ಯಾಸ ಜರುಗಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಸ್ವಾಗತಿಸಿದರು. ಕೆ.ಎಚ್. ಅಕ್ಕಮಹಾದೇವಿ ನಿರೂಪಿಸಿದರು. ಶಿರಹಟ್ಟಿ ಶಿಶು ಅಭಿವೃದ್ಧಿ ಅಧಿಕಾರಿ ಹೊನ್ನೇಗೌಡ ಪ್ರಾರ್ಥಿಸಿದರು. ಖಟವಟೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.