ಉದ್ಯಾನವನ ಪುನರ್ ನಿರ್ಮಾಣಕ್ಕೆ ಆಗ್ರಹ
ಮುಂಡರಗಿ: 1992ರಲ್ಲಿ ಪಟ್ಟಣದ ಅನೇಕ ಹಿರಿಯರ ಹಾಗೂ ಇತರರ ಸಹಾಯ, ಸಹಕಾರದಿಂದ ಪುರಸಭೆ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ನಿರ್ಮಾಣ ಮಾಡಿದ ಉದ್ಯಾನವನ ಇಂದು ಹಂದಿ, ನಾಯಿ, ಬಿಡಾಡಿದನಗಳ ತಾಣವಾಗಿದ್ದು, ಇದೀಗ ಉದ್ಯಾನವನದ ಅಭಿವೃದ್ಧಿಗಾಗಿ ಲಕ್ಷಾಂತರ ರುಪಾಯಿ ಅನುದಾನವಿದ್ದರೂ ಪುರಸಭೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಈ ಕೂಡಲೇ ಉದ್ಯಾನವನ ಪುನರ್ ನಿರ್ಮಾಣ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಪುರಸಭೆ ಆವರಣದ ಎದುರಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪುರಸಭೆ ಆವರಣದಲ್ಲಿ ಕನ್ನಡಕ್ರಾಂತಿ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜನಾಭಿವೃದ್ಧಿ ವೇದಿಕೆ, ಯುವಸೇವಾ ಸಂಘಟನೆ, ಸಾರ್ವಜನಿಕ ಹೋರಾಟ ವೇದಿಕೆ, ಅಸ್ಪ್ರಶ್ಯತೆ ವಿಮೋಚನಾ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜರುಗಿದ ಉದ್ಯಾನವನ ಪುಣರ್ ನಿರ್ಮಾಣ, ನೂತನ ಗಾಂಧೀಜಿಮೂರ್ತಿ ಅನಾವರಣ ಹಾಗೂ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ವಸತಿ ಗೃಹಗಳನ್ನು ಕಟ್ಟದಿರಲು ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಈ ಉದ್ಯಾನವನ ನಿರ್ಮಾಣದ ಕುರಿತು ಅನೇಕ ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪುರಸಭೆ ಆವರಣದಲ್ಲಿರುವ ಮಹಾತ್ಮಾ ಗಾಂಧೀಜಿ ಮೂರ್ತಿ ಸುಮಾರು 50 ವರ್ಷಗಳ ಹಳೆಯದಾಗಿದ್ದು, ಅದನ್ನು ಈ ಕೂಡಲೇ ಬದಲಾವಣೆ ಮಾಡಿ ನೂತನ ಮೂರ್ತಿಯನ್ನು ಅಲ್ಲಿ ಅನಾವರಣಗೊಳಿಸಬೇಕು. ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಇಲಾಖೆ ತಮ್ಮ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇಡೀ ಪಟ್ಟಣದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ, ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಇದೊಂದು ಉತ್ತಮ ಬಯಲು ಜಾಗೆ ಇದ್ದು, ಇಲಾಖೆಯು ಇಲ್ಲಿ ವಸತಿ ನಿಲಯಗಳನ್ನು ನಿರ್ಮಿಸುವುದನ್ನು ಕೈಬಿಟ್ಟು ರಾಜಕೀಯೇತರ ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಡಬೇಕು ಎಂದರು. ಪುರಸಭೆ ಸದಸ್ಯ ಶಂಕರಗೌಡ ಪಾಟೀಲ, ಬಸವರಾಜ ನವಲಗುಂದ ಕರಬಸಪ್ಪ ಹಂಚಿನಾಳ, ಬಸವಂತಪ್ಪ ಮುದ್ದಿ, ಮಂಜುನಾಥ ಮುಧೋಳ, ನಾಗರಾಜ ಕೋಳಿ, ರಾಮಚಂದ್ರ ಗಾರವಾಡ ಮಾತನಾಡಿದರು. ಇನ್ನೆರಡು ದಿನಗಳಲ್ಲಿ ಉದ್ಯಾನವನದ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಅಂದಪ್ಪ ಬೆಲ್ಲದ, ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಪ್ಪ ಇಲ್ಲೂರ, ಕೆ.ವಿ. ಹಂಚಿನಾಳ, ಕರವೇ ಅಧ್ಯಕ್ಷ ಶಿವಾನಂದ ಬಾರಕೇರ, ಶರಣಯ್ಯ ಕಾಗನೂರಮಠ, ಪವನ್ ಚೋಪ್ರಾ, ಕೃಷ್ಣಾ ರಾಮೇನಹಳ್ಳಿ, ವೀರಣ್ಮ ತುಪ್ಪದ, ಮಹಾದೇವ ಡೋಣ್ಣಿ, ಅಲ್ಲಾಭಕ್ಷಿ ಅಳವಂಡಿ, ಕನಕಪ್ಪ ಕಾತರಕಿ, ಗಂಗಾಧರ ಹಾತಲಗೇರಿ, ಸುಭಾಸ ಗುಡಿಮನಿ, ಮಂಜುನಾಥ ಕಾಗನೂರ, ಅಶೋಕ ಹಂಚಿನಾಳ, ಮಾರುತಿ ಅಳವಂಡಿ, ಮಂಜುನಾಥ ಕಟ್ಟೀಮನಿ, ಹನಮಂತಪ್ಪ ವಾಲಿಕಾರ, ಸಂತೋಷ ಹಿರೇಮನಿ, ಮಜ್ಜೂರೇಶ ಪೂಜಾರ, ದಿಲೀಪ್ಕುಮಾರ ಜೋಶಿ, ಅಂದಪ್ಪ ಚಿಕ್ಕಣ್ಣವರ, ಮೋಹನ್ ದೇಸಾಯಿ ಅನೇಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

