ಗದಗ

ಕಟ್ಟಡವಿದ್ದರೂ ಮಕ್ಕಳು ಬೀದಿಗೆ

Published On :

ಕನ್ನಡಪ್ರಭ ವಾರ್ತೆ, ರೋಣ, ಡಿ. 31
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು (ಅನಾಥ) ಎನ್ನುವುದು ಎಲ್ಲರಿಗೂ ಗೊತ್ತಿರುವ ಮಾತು. ಆದರೆ, ಅದಕ್ಕಿಂತ ಸ್ವಲ್ಪ ಭಿನ್ನವಾದ ಘಟನೆಯೊಂದು ತಾಲೂಕಿನ ಇಟಗಿ ಗ್ರಾಮದ ಜನತಾ ಕಾಲೋನಿಯಲ್ಲಿ ಜರುಗಿದೆ. ಇಲ್ಲಿನ ಅಧಿಕಾರಿ ಮತ್ತು ಕಾಲೋನಿ ಕೆಲ ಜನರ ಮಧ್ಯದ ಜಗಳದಲ್ಲಿ 42ಕ್ಕೂ ಹೆಚ್ಚು ಅಂಗನವಾಡಿ ಮಕ್ಕಳು ಬೀದಿಗೆ ಬಿದ್ದಿದ್ದಾರೆ.  
ಹೌದು, ಇಟಗಿ ಗ್ರಾಮದ ಜನತಾ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 208ರಲ್ಲಿ 42ಕ್ಕೂ ಹೆಚ್ಚು ಮಕ್ಕಳಿಗಾಗಿ ಸ್ವಂತ ಕಟ್ಟಡ ಇದ್ದರೂ ಉರಿಯುವ ಬಿಸಿಲಿನಲ್ಲಿಯೇ ಕುಳಿತು ಮಕ್ಕಳು ಆಹಾರ ಸೇವಿಸುತ್ತಿದ್ದಾರೆ. 6 ದಿನಗಳಿಂದ ಮಕ್ಕಳು ಮತ್ತು ಕಾರ್ಯಕರ್ತೆ ಇಂತಹ ಗಂಭೀರ ಸಮಸ್ಯೆ ಎದುರಿಸುತ್ತಿದ್ದರೂ ಇದಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ.
ಏನಿದು ಸಮಸ್ಯೆ? : ಈ ಹಿಂದೆ ಇಟಗಿಯ ಈ ಅಂಗನವಾಡಿ ಕೇಂದ್ರವು 2006 ರಿಂದ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿತ್ತು. ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಆ ಕೇಂದ್ರವನ್ನು ತೆರವುಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದರಂತೆ, ಆಗ ಗ್ರಾಮದ ಜನತಾ ಕಾಲೋನಿಯಲ್ಲಿ 2000ರಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರಕ್ಕೆಂದು ನಿರ್ಮಿಸಲಾದ ಕಟ್ಟಡಕ್ಕೆ ಗ್ರಾಮದಲ್ಲಿನ ಕೇಂದ್ರವನ್ನು ಸ್ಥಳಾಂತರ ಮಾಡುವಂತೆ ಕಳೆದ 6 ದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಗೆ ಸಿಡಿಪಿಒ ಬಿ.ಎಸ್. ಮೋಕಾಶಿ ಸೂಚಿಸಿದ್ದಾರೆ. ಅದರಂತೆ ಮಕ್ಕಳನ್ನು ಕರೆದುಕೊಂಡು ಹೋದರೆ ಅಲ್ಲಿನ ಜನತೆ ಇದು ಅಂಗನವಾಡಿ ಕಟ್ಟಡವಲ್ಲ. ಇದು ಮಲೆಯಾಂಬಿಕಾ ಸಮುದಾಯ ಭವನವಾಗಿದ್ದು, ಇಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಅವಕಾಶ ಕೊಡುವುದಿಲ್ಲವೆಂದು ತಿಳಿಸಿದ್ದಾರೆ.
ಈ ಕುರಿತು ಇಲ್ಲಿನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೇಣವ್ವ ಹೊಸಳ್ಳಿ ಸಿಡಿಪಿಒ ಬಿ.ಎಸ್. ಮೋಕಾಶಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಆಗ ಸಿಡಿಪಿಒ ಅದು ನಮ್ಮ ಕಟ್ಟಡ ನೀವು ಮಕ್ಕಳನ್ನು ಅಲ್ಲಿಯೇ ಕರೆದುಕೊಂಡು ಹೋಗಿ ಕಲಿಸಬೇಕು. ಅವರು ಬಿಟ್ಟು ಕೊಡದಿದ್ದರೆ ಕಟ್ಟಡದ ಮುಂದೆ ಹೊರಗಡೆಯಾದರೂ ಕಲಿಸಬೇಕು. ಇಲ್ಲದ್ದಿದ್ದರೆ ನಿನ್ನ ಮೇಲೆಯೇ ಯೋಗ್ಯ ಕ್ರಮ ಜರುಗಿಸಲಾಗುವುದು ಎಂದರಂತೆ. ಸರ್ ನಾನೇನು ಮಾಡಲಿ, ಇಲ್ಲಿನ ಜನತೆ ಇದನ್ನು ಅಂಗನವಾಡಿಗೆ ಬಿಟ್ಟು ಕೊಡುತ್ತಿಲ್ಲ. ನಮ್ಮ ಅಧಿಕಾರಿಗಳು ಮಾತ್ರ ಅಲ್ಲಿಯೇ ಕಲಿಸು ಎನ್ನುತ್ತಾರೆ. ಅದಕ್ಕೆ ಮಕ್ಕಳನ್ನು ಬಿಸಿಲಲ್ಲಿ ಕರೆದುಕೊಂಡು ಕುಳಿತಿದ್ದೇನೆ ಎಂದು ಕಾರ್ಯಕರ್ತೆ ಶರಣವ್ವ ಹೊಸಳ್ಳಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಅದು ಅಂಗನವಾಡಿ ಕಟ್ಟಡವಲ್ಲ:  ಇಲ್ಲಿ ನಿರ್ಮಿಸಲಾದ ಈ ಕಟ್ಟಡವು ಪ್ಲಾಟ್‌ನಲ್ಲಿ (ಕಾಲೋನಿ) ವಾಸಿಸುವ ಬಡ ಜನತೆಯ ಮದುವೆ, ಮುಂಜಿ, ಸಾಂಸ್ಕೃತಿಕ  ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ನಾನು ಗ್ರಾಪಂ ಅಧ್ಯಕ್ಷ ಇದ್ದಾಗ ಈ ಸಮುದಾಯ ಭವನ ನಿರ್ಮಿಸಲಾಗಿದೆ ಎನ್ನುತ್ತಾರೆ ಅಂದಿನ ಗ್ರಾಪಂ ಅಧ್ಯಕ್ಷ ಶೇಖಣ್ಣ ರಡ್ಡೇರ. ಒಟ್ಟಿನಲ್ಲಿ ಗಂಡ ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಈ ಇಬ್ಬರ ಜಗಳದಲ್ಲಿ ಅಂಗನವಾಡಿಯ  42 ಮಕ್ಕಳು ಕಷ್ಟ ಎದುರಿಸುತ್ತಿದ್ದಾರೆ.
ಈ ಕಟ್ಟಡವನ್ನು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಲಾಗಿದ್ದು, ನಮ್ಮ ಕಟ್ಟಡಕ್ಕೆ ಮಲೆಯಾಂಬಿಕಾ ಸಮುದಾಯ ಭವನ ಅಂತ ಹೆಸರನ್ನು ಬರೆಸಿದ್ದಾರೆ. ಅದನ್ನು ಸಮುದಾಯ ಭವನ ಅಂತ ಬಳಸಿಕೊಳ್ಳಿ ಅಂತ ಯಾರು ಕೊಟ್ಟಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಅದು ನಮ್ಮ ಕಟ್ಟಡವಾಗಿದ್ದರಿಂದ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ನಾನೇ ಹೇಳಿದ್ದೇನೆ. ಕೂಡಲೇ ಈ ಕುರಿತು ಗ್ರಾಮಸ್ಥರ, ಸ್ಥಳೀಯ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ, ಅದು ನಮ್ಮದೇ ಕಟ್ಟಡ ಎಂದು ವಿವರಿಸಿ, ಅಲ್ಲಿ ಅಂಗನವಾಡಿ ಕೇಂದ್ರ ನಡೆಸಲು ವ್ಯವಸ್ಥೆ ಕಲ್ಪಿಸಲಾಗುವುದು.
ಇಲ್ಲಿ ಅತಿ ಕಡು ಬಡವರು ವಾಸಿಸುತ್ತಿದ್ದು, ಮಳೆಗಾಲದಲ್ಲಿ ಇವರ ಮನೆಗಳ ತುಂಬಾ ನೀರು ನಿಂತಿರುತ್ತವೆ. ಆ ಸಂದರ್ಭದಲ್ಲಿ ಈ ಕಟ್ಟಡ ಸಹಾಯಕವಾಗುತ್ತದೆ. ಅಲ್ಲದೇ ಇಲ್ಲಿನ ಯಾವುದೇ ಧಾರ್ಮಿಕ ಕಾರ್ಯ ಚಟುವಟಿಕೆ ನಡೆಸಲು ನಮಗೆ ಇದೊಂದೆ ಕಟ್ಟಡವಿದ್ದರಿಂದ, ಇದನ್ನು ನಾವು ಯಾವುದೇ ಕಾರಣಕ್ಕೂ ಅಂಗನವಾಡಿಗೆ ಬಿಟ್ಟು ಕೊಡುವದಿಲ್ಲ.
- ಅನ್ನಕ್ಕ ಭೋವಿ, ಉಮಕ್ಕ ಯರಗೇರಿ
ಇಟಗಿ ಗ್ರಾಪಂ ಸದಸ್ಯರು
ವಾಸ್ತವವಾಗಿ ಸಮುದಾಯ ಭವನವೆಂದು ಹೇಳುತ್ತಿರುವ ಕಟ್ಟಡ ಅಂಗನವಾಡಿಗೆ ಸೇರಿದ್ದು, ಆದರೆ 10 ವರ್ಷಗಳಿಂದ ಅದು ಅಂಗನವಾಡಿಗೆ ಬಳಕೆಯಾಗಿಲ್ಲ. ಸಮುದಾಯ ಭವನವಾಗಿ ಬಳಕೆ ಮಾಡುತ್ತಾ ಬರಲಾಗಿದೆ. ಯಾವುದಕ್ಕೂ ಮಕ್ಕಳಿಗೆ ತೊಂದರೆಯಾಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಶೈಲಜಾ ಯರಗೇರಿ
ರೋಣ ತಾಪಂ ಉಪಾಧ್ಯಕ್ಷೆ


 -ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.