ಸಕ್ಕರೆ ಕಾರ್ಖಾನೆ ತ್ಯಾಜ್ಯ ತುಂಗಭದ್ರಾ ನದಿಗೆ!
ಟ ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 1
ಸಕ್ಕರೆ ಎಂದಾಕ್ಷಣ ನೆನಪಾಗುವುದು ಸಿಹಿಯಾದರೂ ಅದರ ಕಾರ್ಖಾನೆಯಲ್ಲಿ ಹೊರಬರುವ ತ್ಯಾಜ್ಯ ವಿಷವೇ ಸರಿ. ಮುಂಡರಗಿ ತಾಲೂಕಿನ ಗಂಗಾಪುರದಲ್ಲಿರುವ ವಿಜಯನಗರ ಷುಗರ್ಸ್ ಕಂಪನಿಯ ತ್ಯಾಜ್ಯವನ್ನು ನದಿಗೆ ಹರಿಬಿಡುತ್ತಿರುವ ಕಾರಣ ಗದಗ-ಬೆಟಗೇರಿ ಅವಳಿ ನಗರದ ಜನತೆ ಕುಡಿಯುತ್ತಿರುವ ನೀರು ವಿಷವಾಗಿದೆ.
ಕಾರ್ಖಾನೆಯ ತ್ಯಾಜ್ಯ ನೀರು ನಿತ್ಯ ನದಿಗೆ ಸೇರುತ್ತಿದೆ. ಕಾರ್ಖಾನೆ ತ್ಯಾಜ್ಯವನ್ನು ಜಮೀನಿನ ದೊಡ್ಡ ಗುಂಡಿಯಲ್ಲಿ ಸಂಗ್ರಹಿಸಿ ಆಮೇಲೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ, ಈ ಕಾರ್ಖಾನೆ ಮಲಿನ ನೀರನ್ನು ನೇರವಾಗಿ ನದಿಗೆ ಹರಿಸುತ್ತಿದ್ದು, ನದಿ ನೀರು ವಿಷಮಯವಾಗುತ್ತಿದೆ.
ರಾತ್ರಿ ವೇಳೆ ಹರಿಸುತ್ತಾರೆ: ಸ್ಥಳೀಯರು ಹಲವಾರು ಬಾರಿ ವಿರೋಧಿಸಿದ್ದರೂ ಕಾರ್ಖಾನೆಯ ಅಧಿಕಾರಿಗಳು ಮಾತ್ರ ಕಲ್ಮಷ ನೀರನ್ನು ನದಿಗೆ ಬಿಡುವುದನ್ನು ನಿಲ್ಲಿಸುತ್ತಿಲ್ಲ. ಸಾರ್ವಜನಿಕರ ಕಣ್ಣು ತಪ್ಪಿಸಲು ಅವರು ಕಂಡುಕೊಂಡ ಮಾರ್ಗ ರಾತ್ರಿ ವೇಳೆ ಖಾಲಿ ಹೊಲಗಳಲ್ಲಿ ಹಾಕಿರುವ ಪೈಪ್ಗಳ ಮೂಲಕ ತ್ಯಾಜ್ಯವನ್ನು ನದಿಗೆ ಹರಿಸುವುದು. ಗ್ರಾಮಸ್ಥರು ರಾತ್ರಿ ಕಾವಲಿಗೆ ಹೋದಾಗ ಕೆಲವೊಮ್ಮೆ ಇದನ್ನು ಗಮನಿಸಿದ್ದಾರೆ. ಆದರೆ, ಕಾರ್ಖಾನೆ ಬೆದರಿಕೆ ತಂತ್ರ ಅನುಸರಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನರಲ್ಲಿ ಆತಂಕ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸದ್ಯ ತಿಂಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೇಳಿದರೆ, ನದಿಯಲ್ಲಿ ನೀರಿಲ್ಲ ಎಂದು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಸಬೂಬು ಕೊಡುತ್ತಾರೆ. ಬೇಸಿಗೆ ಕಾಲಿಡುವ ಮುನ್ನವೇ ನದಿಯಲ್ಲಿ ನೀರು ಕಡಿಮೆಯಾಗುತ್ತಿರುವ ಆತಂಕ ಒಂದೆಡೆಯಾದರೆ, ಕಾರ್ಖಾನೆಯ ಮಲಿನ ನೀರು ಸೇರಿ, ಇರುವ ನೀರೂ ವಿಷವಾಗುತ್ತಿರುವ ಸಂಕಟ ಮತ್ತೊಂದೆಡೆ. ಹೀಗಾಗಿ ಮುಂಡರಗಿಯಿಂದ ಗದಗ ವರೆಗಿನ ಎಲ್ಲ ಗ್ರಾಮಗಳಲ್ಲೂ ಜನತೆ ನೀರು ಕುಡಿಯಲು ಹಿಂದೆ-ಮುಂದೆ ಯೋಚಿಸುವ ಸ್ಥಿತಿ.
ಶೀಘ್ರ ಕ್ರಮ ಕೈಗೊಳ್ಳಿ
ನಿಯಮ ಪ್ರಕಾರ ದೊಡ್ಡ ಹೊಂಡ ನಿರ್ಮಿಸಿ, ಅದರಲ್ಲಿ ಕಾರ್ಖಾನೆಯ ತ್ಯಾಜ್ಯ ನೀರನ್ನು ಸಂಗ್ರಹಿಸಿ, ಸಂಸ್ಕರಿಸಿದ ಬಳಿಕ ಹೊರಗೆ ಬಿಡಬೇಕು. ಆದರೆ, ವಿಜಯನಗರ ಕಾರ್ಖಾನೆ ಅಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ. ಹೀಗೇಕೆ ಎಂದು ಅವರನ್ನು ಕೇಳಿದರೂ ಸ್ಪಂದಿಸಿಲ್ಲ. ರಾತ್ರಿ ವೇಳೆ ನದಿಗೆ ತ್ಯಾಜ್ಯವನ್ನು ನದಿಗೆ ಹರಿಸುತ್ತಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಧಿಕಾರಿ ತಕ್ಷಣವೇ ಕ್ರಮಕೈಗೊಳ್ಳಬೇಕು.
ಟ ಕೊಟ್ರಪ್ಪ, ಮಹೇಶ, ಗಂಗಾಪುರ ಗ್ರಾಮಸ್ಥರು
8 ದಿನದಿಂದ ತೊಂದರೆ
ಕಾರ್ಖಾನೆಯ ನಿಯಮಗಳ ಪ್ರಕಾರವೇ ನಡೆದುಕೊಳ್ಳುತ್ತಿದ್ದೇವೆ. ಎಂಟು ದಿನಗಳಿಂದ ಸ್ವಲ್ಪ ಮಟ್ಟಿನ ತೊಂದರೆಯಾಗಿ ನದಿಗೆ ನೀರು ಸೇರ್ಪಡೆಯಾಗುತ್ತಿದೆ. ಈ ಕುರಿತು ಪರಿಶೀಲಿಸಿ, ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ.
ಟ ಸುರೇಶ್, ಹಿರಿಯ ವ್ಯವಸ್ಥಾಪಕ, ನೀರು ಮತ್ತು ಪರಿಸರ ಮಂಡಳಿ, ವಿಜಯನಗರ ಷುಗರ್ಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

