ಗದಗ

ಕ್ಷೇತ್ರದ ಅಭಿವೃದ್ಧಿ ತೃಪ್ತಿ ತಂದಿದೆ: ಬಂಡಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 3
ರೋಣ ಮತ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸಪರ್ವ ಆರಂಭಗೊಂಡಿದೆ. ಇದಕ್ಕೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ವಿವಿಧ ಜನಪರ ಅಭಿವೃದ್ಧಿ ಕಾರ್ಯಗಳೇ ನಿದರ್ಶನ. ಸಹಕರಿಸಿದ ಕ್ಷೇತ್ರದ ಜನತೆಗೆ ನಾನು ಚಿರಋಣಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಶನಿವಾರ ಸಂಜೆ ಪುರಸಭಾ ವ್ಯಾಪ್ತಿಯ ವಿವಿಧ ಯೋಜನೆ ಅಡಿಯಲ್ಲಿ ರು. 2 ಕೋಟಿಗೂ ಅಧಿಕ ಮೊತ್ತದಲ್ಲಿ ಕೈಗೊಂಡ ನೂತನ ಮಹಾದ್ವಾರ, ಉದ್ಯಾನವನ, ರಂಗ ಮಂದಿರ ಹಾಗೂ ಸೇವಾಲಾಲ ಸಮುದಾಯ ಭವನ, ಕಟ್ಟಡ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಮತಕ್ಷೇತ್ರದ ಜನತೆ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಹಾಗೂ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ 26ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಲಾಗಿದೆ. ಅಲ್ಲದೆ ಭೈರಾಪುರ ಗ್ರಾಮದ ಬಳಿ ರು. 10 ಕೋಟಿ ವೆಚ್ಚದ ಆಂಗ್ಲ ಮಾಧ್ಯಮದ (ಸಿಬಿಎಸ್ಸಿ) ಶಾಲೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನತೆ ಆಶೀರ್ವದಿಸಿದರೆ ಗುಡಿಸಲು ಮುಕ್ತ ಮತಕ್ಷೇತ್ರವನ್ನಾಗಿಸುವ ನನ್ನ ಮಹತ್ವಾಕಾಂಕ್ಷೆಯ ಕನಸನ್ನು ನನಸಾಗಿಸಲು ಶ್ರಮಿಸುತ್ತೇನೆ ಎಂದರು.
ಹಜರತ್ ಸೈಯ್ಯದ ಮೆಹಬೂಬಅಲಿಶಾ ಪೀರಾಂ ಸಾನ್ನಿಧ್ಯ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ದೇವಕ್ಕ ಬೆಳವಣಕಿ, ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ರಾಜಮಾತಾ ಘೋರ್ಪಡೆ, ಎ.ಡಿ. ಘೋರ್ಪಡೆ, ದುರುಗಪ್ಪ ಬಳೂಟಗಿ, ರಿಕಬ್‌ಚಂದ ಬಾಗಮಾರ, ಡಾ. ಬಿ.ವ್ಹಿ. ಕಂಬಳ್ಯಾಳ, ಎಸ್.ಎಲ್. ಹಿರೇಮನಿ, ಡಾ. ಆರ್.ಎಸ್.ಜೀರೆ, ಟಿ.ವ್ಹಿ. ರಾಯಬಾಗಿ, ಅಪ್ಪಣ್ಣ ಮಹೇಂದ್ರಕರ, ಶಿವಾನಂದ ಮಠದ, ಪ್ರಭು ಚವಡಿ, ರಾಜೇಂದ್ರ ಘೋರ್ಪಡೆ, ಚಂದ್ರಶೇಖರ ಚಳಗೇರಿ, ಮುಖ್ಯಾಧಿಕಾರಿ ಎಂ.ಎಚ್. ಬೀಳಗಿ ಉಪಸ್ಥಿತರಿದ್ದರು.
ಯು.ಎನ್ ಕುರಹಟ್ಟಿ ಸ್ವಾಗತಿಸಿದರು. ಬಿ.ಕೆ.ಮಾದಿ ನಿರೂಪಿಸಿದರು. ಕೆ.ಓ. ಮುಲ್ಲಾ ವಂದಿಸಿದರು. ಚೈತ್ರಾ ಮೆಲೋಡಿಸ್ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.

ಗಜೇಂದ್ರಗಡ ತಾಲೂಕು
ಪಟ್ಟಣದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಳಿಕ ಸಮಾರಂಭದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಕಳಕಪ್ಪ ಬಂಡಿ, ನನ್ನ ಮಹತ್ವಾಕಾಂಕ್ಷೆಯ ಕನಸಿನ ಕಾರ್ಯವೊಂದನ್ನು ಇನ್ನೂ ಏಳೆಂಟು ದಿನದಲ್ಲೆ ನನಸಾಗಿಸುವೆ. ಆ ಕಾರ್ಯ ಯಾವುದು ಎಂದು ನೆರೆದ ಜನತೆಯನ್ನು ಸಚಿವರು ಪ್ರಶ್ನಿಸಿದರು. ಗಜೇಂದ್ರಗಡ ತಾಲೂಕು ಘೋಷಣೆ ಮಾಡುವುದು ಎಂದು ಹರ್ಷೋದ್ಗಾರದಿಂದ ಜನರಿಂದ ಬಂದ ಉತ್ತರಕ್ಕೆ 'ಎಸ್‌' ಎನ್ನುವ ಮೂಲಕ ಈ ಭಾಗದ ಜನತೆಯ ಬಹು ದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದು ಪಟ್ಟಣದ ಜನತೆಯ ಹರ್ಷೋದ್ಗಾರಕ್ಕೆ ಕಾರಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.