ಶ್ರೀರಾಮ ಸೇನೆ ಕಾರ್ಯಕರ್ತರ ಬಿಡುಗಡೆಗೆ ಮನವಿ
ಮುಂಡರಗಿ: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಬಡ ಹಿಂದುಳಿದ ಲಂಬಾಣಿ ಸಮುದಾಯದ ಯುವಕರಿಗೆ ಆಮಿಷ ಒಡ್ಡುವ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಅವರನ್ನು ಮತಾಂತರಿಸಲು ಯತ್ನಿಸಿದವರನ್ನು ತಡೆಯಲು ಹೋದ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಿದ್ದು, ಅದನ್ನು ರದ್ದುಪಡಿಸಿ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸಂಘಟನೆ ಮಂಗಳವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಫೆ. 4ರಂದು ಶಿಂಗಟಾಲೂರು ಗ್ರಾಮದಲ್ಲಿ ಮತಾಂತರ ಮಾಡಲಾಗುತ್ತಿತ್ತು. ಶ್ರೀರಾಮ ಸೇನೆ ಕಾರ್ಯಕರ್ತರು ಅಲ್ಲಿಗೆ ತೆರಳಿ ಮತಾಂತರದಲ್ಲಿ ತೊಡಗಿದ್ದ ನಾಗೇಶ ನಾಯ್ಕ, ಮಲ್ಲಿಕಾರ್ಜುನ ಸಂಗಳದ ಅವರನ್ನು ತಡೆದಿದ್ದಾರೆ. ಆದರೆ ಅವರು ಶ್ರೀ ರಾಮಸೇನೆಯ ಫಕ್ಕೀರೇಶ ಜಾಲಗಾರ, ಗುಡದೂರಯ್ಯ ಹಿರೇಮಠ, ಲಕ್ಷ್ಮಣ ಗಾಜಿ, ಮಲ್ಲೇಶ ಮಲ್ಲಿಕೇರಿ ಎಂಬುವರ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿ ಜೈಲಿಗೆ ತಳ್ಳಿದ್ದಾರೆ. ಮತಾಂತರ ಮಾಡದಂತೆ ಮನವೊಲಿಸಿದ ಕಾರಣಕ್ಕಾಗಿಯೇ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಲಂಬಾಣಿ ಕ್ರಿಶ್ಚಿಯನ್ನರ ವರ್ತನೆ ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ರವಿ ಶಿದ್ಲಿಂಗ ಮಾತನಾಡಿ, ಸುಳ್ಳು ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿಸಿರುವ ಸಂಘಟನೆಯ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರಕರಣ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಫೆ. 11ರಂದು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು. ತಾಲೂಕು ಶ್ರೀರಾಮಸೇನೆ ಸಂಚಾಲಕ ಮಂಜಯ್ಯಸ್ವಾಮಿ ಅರವಟಗಿಮಠ ಮನವಿಯನ್ನು ಓದಿ ತಹಸೀಲ್ದಾರ್‌ಗೆ ನೀಡಿದರು. ಜಿಲ್ಲಾ ಸಂಚಾಲಕ ರಾಜೂ ಖಾನಪ್ಪನವರ, ಬಸನಗೌಡ ಪಾಟೀಲ, ಶ್ರೀಕಾಂತ ಬಡಿಗೇರ, ಶಿವರುದ್ರಪ್ಪ ತಳವಾರ, ರಾಘು ಕಟ್ಟೀಮನಿ, ರವಿ ಬೆಂಡಿಕಾಯಿ, ಗಂಗಾಧರ ಹಳ್ಳಿತಳವಾರ, ನಾಗರಾಜ ಕಾಟರಹಳ್ಳಿ, ಹನಮಂತ ಮುರ್ಲಾಪುರ, ಗೋಣಿ ಬಸಪ್ಪ ಕರಿಗಾರ, ನಾಗರಾಜ ಮತ್ತೂರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

